ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ರಾಜ್ಯದಲ್ಲಿ ಈ ಭಾರಿ ನಿರೀಕ್ಷೆಗಿಂತ ಉತ್ತಮವಾಗಿ ಸುರಿದಿದ್ದು, ಬಹುತೇಕ ಅಣೆಕಟ್ಟುಗಳು ಭರ್ತಿ ಹಂತಕ್ಕೆ ತಲುಪಿವೆ. ಜೊತೆಗೆ ರಾಜ್ಯಾದ್ಯಂತ ಅಂತರ್ಜಲ ಮಟ್ಟದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ
ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಕರ್ನಾಟಕದಾದ್ಯಂತ ಜೂನ್ 23ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದು (ಜೂ.17) ಜೋರಾದ ಗಾಳಿಯೊಂದಿಗೆ ಚದುರಿದಂತೆ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಹಾಸನ, ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಧಾರವಾಡ, ಹಾವೇರಿ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ವಿಜಯನಗರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್‍ನಲ್ಲಿ ಮಳೆಯಾಗಲಿದೆ.
ಪೂರ್ವ ಮುಂಗಾರು ಮತ್ತು ಮುಂಗಾರು: ನಿರೀಕ್ಷೆಗಿಂತ ಹೆಚ್ಚು ಮಳೆ
ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ರಾಜ್ಯದಲ್ಲಿ ಈ ಭಾರಿ ನಿರೀಕ್ಷೆಗಿಂತ ಉತ್ತಮವಾಗಿ ಸುರಿದಿದ್ದು, ಬಹುತೇಕ ಅಣೆಕಟ್ಟುಗಳು ಭರ್ತಿ ಹಂತಕ್ಕೆ ತಲುಪಿವೆ. ಜೊತೆಗೆ ರಾಜ್ಯಾದ್ಯಂತ ಅಂತರ್ಜಲ ಮಟ್ಟದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ಮಾಹಿತಿಯಂತೆ ಪ್ರಸಕ್ತ ವರ್ಷದ ಮಾರ್ಚ್ ಮತ್ತು ಮೇ ನಡುವೆ ಪೂರ್ವ ಮುಂಗಾರು 28 ಜಿಲ್ಲೆಗಳಲ್ಲೂ ಉತ್ತಮವಾಗಿ ಸುರಿದಿದೆ. ಈ ವರ್ಷ ಸರಾಸರಿ ರಾಜ್ಯದಲ್ಲಿ 200 ಮಿಮೀಗಿಂತ ಹೆಚ್ಚು ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಾಜ್ಯದಲ್ಲಿ ಸಾಮಾನ್ಯವಾಗಿ 117 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ವರ್ಷ 320 ಮಿ.ಮೀ ಮಳೆಯಾಗಿದೆ.
ಅಂತರ್ಜಲ ಮಟ್ಟದಲ್ಲಿ ಭಾರೀ ಸುಧಾರಣೆ
ಪೂರ್ವ ಮುಂಗಾರು ಮಳೆಯಿಂದಲೇ ಮೇ ತಿಂಗಳ ಅವಧಿಯಲ್ಲಿ 85 ತಾಲ್ಲೂಕುಗಳಲ್ಲಿ 4 ಮೀಟರ್, 53 ತಾಲ್ಲೂಕುಗಳಲ್ಲಿ 2-4 ಮೀಟರ್, 73 ತಾಲ್ಲೂಕುಗಳಲ್ಲಿ 2 ಮೀಟರ್ ಅಂತರ್ಜಲ ಹೆಚ್ಚಳವಾಗಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ ಕೆ ಪವಿತ್ರಾ ಈ ಬಗ್ಗೆ ಮಾಹಿತಿ ನೀಡಿದ್ದು, “ಕೆಲವು ತಿಂಗಳ ಹಿಂದೆ ಪರೀಕ್ಷಿಸಿದಾಗ, ಅಂತರ್ಜಲ ಬಳಕೆ ಶೇ. 68.44 ರಷ್ಟಿತ್ತು, ಈಗ ಇದು ಸುರಕ್ಷಿತ ವಲಯದಲ್ಲಿದೆ. ಶೇ.70 ಕ್ಕಿಂತ ಹೆಚ್ಚಿನದನ್ನು ಅರೆ-ನಿರ್ಣಾಯಕ ಎಂದು ಕರೆಯಲಾಗುತ್ತದೆ. ಅಂತರ್ಜಲ ಮಟ್ಟ ಸುಧಾರಿಸುತ್ತಿದ್ದಂತೆ, ಸ್ವಾಭಾವಿಕವಾಗಿ ಬಳಕೆ ಕಡಿಮೆಯಾಗುತ್ತದೆ. ಇದು ಒಳ್ಳೆಯ ಸಂಕೇತವಾಗಿದೆ” ಎಂದಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಜೋರು
ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭೂ ಕುಸಿತ ನಿರಂತರವಾಗಿದೆ. ನದಿಗಳು ಅಬ್ಬರಿಸುತ್ತಿದ್ದು, ತೀರ ಪ್ರದೇಶದಲ್ಲಿ ನೆರೆ ಆವರಿಸಿದೆ. ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಮಳೆ ಅನಾಹುತದಿಂದ ಕರಾವಳಿ ಭಾಗದಲ್ಲಿ ಎಂಟು ಜನರು ಈವರೆಗೂ ಮೃತಪಟ್ಟಿದ್ದಾರೆ.
ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಜನಜೀವನ ತತ್ತರಿಸಿದೆ. ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ಕೊಪ್ಪ ತಾಲೂಕಿನ ಮೇಗೂರು, ಮೂಡಿಗೆರೆ-ಬೇಲೂರು ಮಾರ್ಗದ ಮಧ್ಯೆ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದಿವೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಜುಲೈ 17ರವರೆಗೂ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಎಲ್ಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜೂ.18ರ ನಂತರ ಮಳೆ ಇಳಿಮುಖವಾಗುವ ಸಾಧ್ಯತೆಗಳಿವೆ.
ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಬೀಸುವಂತಹ ಗಾಳಿ ಜೂನ್‌ನಲ್ಲೇ ಬೀಸುತ್ತಿದೆ. ಚಳಿ ವಿಪರೀತ ಹೆಚ್ಚಿದೆ. ಎಲ್ಲೆಡೆ ಜನರು ನಡುಗುತ್ತಲೇ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಕುಶಾಲನಗರದಲ್ಲಿ ಹೆಚ್ಚಿನ ಮಳೆ ಇಲ್ಲ. ಮಡಿಕೇರಿ ತಾಲ್ಲೂಕು ಹೊರತುಪಡಿಸಿದರೆ ಉಳಿದೆಲ್ಲ ತಾಲ್ಲೂಕುಗಳಲ್ಲಿಯೂ ಭಾರಿ ಮಳೆಯಾಗಿದೆ. ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಜಾಲವೃತಗೊಂಡಿದೆ. ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ 24 ಗಂಟೆಗಳಲ್ಲಿ 195 ಮಿ.ಮೀ ಮಳೆ ದಾಖಲಾಗಿದೆ. ಪರಿಣಾಮವಾಗಿ ತಲಾಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಪಮಾನ ಕುಸಿತ
ಮಡಿಕೇರಿಯ ಗರಿಷ್ಠ ತಾಪಮಾನ ಭಾರತೀಯ ಹವಾಮಾನ ಇಲಾಖೆಯ ಪ್ರಕಾರ 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದರೆ ಖಾಸಗಿ ಹವಾಮಾನ ಸೇವಾ ಸಂಸ್ಥೆಗಳ ಪ್ರಕಾರ ಗರಿಷ್ಠ ತಾಪಮಾನವೇ 19ಕ್ಕೆ ಕುಸಿದಿದೆ. ಕನಿಷ್ಠ ತಾಪಮಾನ 16ಕ್ಕೆ ಇಳಿಕೆ ಕಂಡಿದೆ. ಕೊಡಗು-ಮಡಿಕೇರಿ ಭಾಗದ ಜನರು ಶೀತಮಯ ಪರಿಸರದಲ್ಲಿ ಹೈರಣಾಗಿದ್ದಾರೆ.
ಹಾರಂಗಿ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಮುಂಜಾಗ್ರತಾ ಕ್ರಮವಾಗಿ 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯದ ಒಳಹರಿವು ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ.

ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 307 ಮಿ.ಮೀ.ಮಳೆ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು (307 ಮಿ.ಮೀ.) ಮಳೆ ಸುರಿದಿದೆ. ಇದೇ ತಾಣದಲ್ಲಿ ಕಾಂತಾರ-1 ಶೂಟಿಂಗ್ ನಡೆಯುತ್ತಿದ್ದು, ನಾಯಕ ನಟ ರಿಷಬ್ ಶೆಟ್ಟಿ ಸಹಿತ ಪ್ರಮುಖ ಕಲಾವಿದರು ಬೀಡು ಬಿಟ್ಟಿದ್ದಾರೆ. ಗಾಳಿಗೆ ಕಾಂತಾರಾ ಸೆಟ್ ಮುರಿದುಬಿದ್ದಿದೆ. ಸಾವಿನ ಬಗ್ಗೆ ಯಾವುದೇ ವರದಿಯಾಗಿಲ್ಲ. ತುಂಗಾ ಜಲಾಶಯದ 21 ಗೇಟ್ ತೆರೆದು 27 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ಹೊರಗೆ ಬಿಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆ ದೇವಿಘಟ್ಟ ಬಳಿ ಗುಡ್ಡ ಕುಸಿದಿದೆ. ಶಿರಸಿ ನಗರದಲ್ಲಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ.
ಉತ್ತರ ಕರ್ನಾಟಕದಲ್ಲೂ ರೌದ್ರಾವತಾರ
ಮುಂಗಾರು ಮಳೆ ತನ್ನ ರೌದ್ರಾವತಾರವನ್ನು ಉತ್ತರ ಕರ್ನಾಟಕದಲ್ಲೂ ತೋರಿದೆ. ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿದ ಪರಿಣಾಮ ಜಿಲ್ಲೆಯ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವ ಮೋರಿಯಲ್ಲಿ ಕೊಚ್ಚಿ ಹೋಗಿದ್ದಾನೆ.
ಯಾವಾಗಲೂ ಹಳ್ಳಗಳು ತುಂಬಿದರೆ ಖುಷಿಪಡುವ ರೈತರು ಈ ಬಾರಿ ಮಾತ್ರ ಸಂಕಷ್ಟ ಪಡುವಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕೆಲವೇ ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಹತ್ತಿ, ಹೆಸರು ಸೇರಿದಂತೆ ಅನೇಕ ಬೆಳೆಗಳು ಹಳ್ಳದ ನೀರು ನುಗ್ಗಿ ಹಾಳಾಗಿ ಹೋಗುತ್ತಿವೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಂಚನಾಳ, ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ, ಶಿರಗುಪ್ಪಿ, ನವಲಗುಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಳ್ಳಗಳ ಪ್ರವಾಹ ಮತ್ತು ಭಾರೀ ಮಳೆಯಿಂದ ಬಿತ್ತನೆ ಹಾಳಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬೆಣ್ಣೆ ಹಳ್ಳದ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಹೀಗಾಗಿ ಬೆಣ್ಣೆಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ. ನೀರಿನ ಟ್ಯಾಂಕರ್‌ವೊಂದು ಬೆಣ್ಣೆ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಉತ್ತರ ಕರ್ನಾಟಕದಲ್ಲಿ ಮೇ ಅಂತ್ಯದಲ್ಲಿ ರೈತರು ಬಿತ್ತನೆ ಬೀಜ, ಗೊಬ್ಬರ ಅಂತ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಸತತವಾಗಿ ಸುರಿದ ಮಳೆಯಿಂದ ಗದಗ, ಹಾವೇರಿ, ಬೆಳಗಾವಿ, ವಿಜಯಪು ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳು ಕೊಳೆತುಹೋಗಿರುವ ವರದಿಯಾಗಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದ್ದು, ಅಧಿಕೃತ ಅಂಕಿ-ಅಂಶ ಇನ್ನಷ್ಟೇ ತಿಳಿಯಬೇಕಿದೆ.

ಉಕ್ಕೇರಿದ ಮಲಪ್ರಭಾ
ಮಹಾರಾಷ್ಟ್ರದ ಮಳೆಗೆ ಮಲಪ್ರಭಾ ನದಿ ಉಕ್ಕೇರಿದೆ. ಖಾನಾಪುರ ತಾಲೂಕಿನ ಹಬ್ಬಾನಟ್ಟಿಯ ಆಂಜನೇಯ ದೇವಸ್ಥಾನ ನೀರಿನಲ್ಲಿ ಜಾಲಾವೃತಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಮಂದಿರ ಸಂಪೂರ್ಣ ಮುಳುಗಡೆ ಆಗುವ ಸಾಧ್ಯತೆ ಇದೆ.
ಗೋವಾಕ್ಕೆ ಸಂಪರ್ಕಿಸುವ ಚೋರ್ಲಾ ಮಾರ್ಗದಲ್ಲಿರುವ ಕಸಮಳ್ಳಿ ಸೇತುವೆಯ ತಾತ್ಕಾಲಿಕ ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ಗೋವಾಕ್ಕೆ ತೆರಳುವ ಸಂಪರ್ಕ ಕಡಿತಗೊಂಡಿದೆ. ಘಟಪ್ರಭಾ ನದಿ ಮೂಲಕ ಹಿಡಕಲ್ ಜಲಾಶಯಕ್ಕೆ 6 ಸಾವಿರ, ಮಲಪ್ರಭಾ ಜಲಾಶಯಕ್ಕೆ 3 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ತುಂಗಾ, ಭದ್ರಾ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ, ದೂಧಗಂಗಾ ವೇದಗಂಗಾ, ಅಘನಾಶಿನಿ, ಗಂಗಾವಳಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಮಿರ್ಜಾನ್, ಅಘನಾಶಿನಿ, ದೀವಗಿ, ಕೊಡ್ಕಣಿ, ಕಿಮಾನಿ, ಹೆಗಡೆ ಭಾಗದಲ್ಲಿ ಪ್ರವಾಹದ ಮುನ್ಸೂಚನೆ ನೀಡಲಾಗಿದೆ.

ರೈತರ ಮೊಗದಲ್ಲಿ ಸಂತಸ
ಗದಗ ಜಿಲ್ಲೆಯಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದು, ಮಳೆಯ ನಿರೀಕ್ಷೆಯಲ್ಲಿದ್ದರು. ಈ ವಾರದಲ್ಲಿ ಸುರಿದ ಮಳೆ ರೈತರ ಮೊಗದಲ್ಲಿ ಸಂತಸ ತರಿಸಿದೆ. ಶಿರಹಟ್ಟಿ, ಮುಂಡರಗಿ, ಗದಗ, ನರಗುಂದ ಹಾಗೂ ರೋಣ ಭಾಗದಲ್ಲಿ ಉತ್ತಮ ಮಳೆಯಾಗಿದೆ.
ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿಲ್ಲ. ಸತತವಾಗಿ ಸುರಿದ ಮಳೆಯಿಂದಾಗಿ ಜಲಮೂಲಗಳು ಜಲಾವೃತಗೊಂಡಿವೆ. ಬೀದರ್‌ನಲ್ಲಿ ದೀರ್ಘಕಾಲದ ಮಳೆಯಿಂದಾಗಿ ನೆಹರೂ ಕ್ರೀಡಾಂಗಣವು ಸರೋವರವಾಗಿ ಮಾರ್ಪಟ್ಟಿತು ಮತ್ತು ಡಿಎಚ್‌ಒ ಕಚೇರಿ ಆವರಣವು ನೀರಿನಿಂದ ತುಂಬಿತ್ತು.
ಬಳ್ಳಾರಿ ಜಿಲ್ಲೆಯಲ್ಲಿ ಮೇ ತಿಂಗಳು ಉತ್ತಮ ಮಳೆಯಾಗಿದೆ. ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ, ತೋರಣಗಲ್ಲು ಹೋಬಳಿಯ ತಿಮ್ಲಾಪುರ ಬಳಿಯ ಚೆಕ್ ಡ್ಯಾಂ ಗುರುವಾರ ಒಡೆದು ಹೋಗಿದೆ. ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಭಾಗಗಳು ತಂಪಾಗಿವೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ 112 ಮಿ.ಮೀ ಮಳೆಯಾಗಿದೆ.
ಬೆಂಗಳೂರು : ಯೆಲ್ಲೋ ಅಲರ್ಟ್
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಲ್ಲಿ ಮಳೆ ಆರ್ಭಟಿಸುತ್ತಿದ್ದು, ರಾಜಧಾನಿ ಬೆಂಗಳೂರಲ್ಲಿಯೂ ಭಾರೀ ತಂಪಿನ ಹಾಗೂ ಮೋಡ ಕವಿದ ವಾತಾವರಣ ಇದೆ. ಎಷ್ಟು ಹೊತ್ತಿಗಾದರೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಲ್ಲಿ ಜೂನ್ 16-17 ರಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಸಿ ಎಸ್ ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ತಾಪಮಾನ 19.6°C ನಿಂದ 23.1°C ವರೆಗೆ ಇರುತ್ತದೆ. ಮಳೆಯಾಗುವ ಸಂಭವ 88% ರಷ್ಟು ಇದೆ. ಗಾಳಿಯ ವೇಗ ಗಂಟೆಗೆ 35.6 ಕಿ.ಮೀ ಇರುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಮುಂದಿನ ವಾರ ತಾಪಮಾನ ಕ್ರಮೇಣ ಹೆಚ್ಚಾಗಲಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.