ಟಿವಿಯಲ್ಲಲ್ಲ, ಮನೆಯ ಹೊರಗೆ ಯುದ್ಧ ನಡೆಯುತ್ತಿದೆ: ಇರಾನ್-ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರು

Date:

Advertisements
ಟೆಹ್ರಾನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು, "ನಮ್ಮ ಭಾರತ ಸರ್ಕಾರ ಏನು ಮಾಡುತ್ತಿದೆ? ಸಂಘರ್ಷ ಪೀಡಿತ ಪ್ರದೇಶದಿಂದ ಸ್ಥಳಾಂತರ ಪ್ರಕ್ರಿಯೆ ಸುಲಭವಲ್ಲ ಎಂಬುದು ಒಪ್ಪತಕ್ಕದ್ದು. ಆದರೆ ಇತರೆ ದೇಶ ತೆಗೆದುಕೊಂಡಷ್ಟು ಮುತುವರ್ಜಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿಲ್ಲವೇಕೆ" ಎನ್ನುತ್ತಿದ್ದಾರೆ.

“ಗುಡುಗಿನಂತೆಯೇ ಜೋರಾದ ಶಬ್ದ ಕೇಳಿಸಿತು. ಬಳಿಕ ಎಲ್ಲೆಡೆ ಕಪ್ಪು ಹೊಗೆ ಆವರಿಸಿತು. ಎಲ್ಲರೂ ಓಡಲು ಆರಂಭಿಸಿದರು. ಫೈಟರ್ ಜೆಟ್, ಗುಂಡುಗಳ ಸದ್ದು ಕೇಳಿಸಿತು. ನಮ್ಮ ಸಮೀಪವೇ ಯುದ್ಧ ನಡೆಯುತ್ತಿದೆ ಎಂಬ ಭಾಸವಾಯಿತು. ಯುದ್ಧ ಟಿವಿಯಲ್ಲಿ ನಡೆಯುತ್ತಿರಲಿಲ್ಲ, ನಮ್ಮ ಮನೆಗೆ ಕಿಟಕಿಯ ಹೊರಗೆ ನಡೆಯುತ್ತಿತ್ತು” -ಹೀಗೆ ಇಸ್ರೇಲ್ ದಾಳಿಯನ್ನು ಕಣ್ಣಾರೆ ಕಂಡ ದೃಶ್ಯವನ್ನು ವಿವರಿಸುತ್ತಾರೆ ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯ ಮೂಲದ 22 ವರ್ಷದ ವಿದ್ಯಾರ್ಥಿನಿ.

ಇಸ್ರೇಲ್ ಮತ್ತು ಇರಾನ್ ನಡುವೆ 1985ರಿಂದಲೇ ಸಂಘರ್ಷ ನಡೆಯುತ್ತಿದೆ. ಆರಂಭದಲ್ಲಿ ಶೀತಲ ಸಮರವಾಗಿದ್ದ ಈ ಸಂಘರ್ಷ ಕಾಲಕ್ರಮೇಣ ದಾಳಿ, ಪ್ರತಿದಾಳಿ ಹಂತಕ್ಕೆ ತಲುಪಿದೆ. 2025ರ ಜೂನ್ 13ರಂದು ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿತು. ಇದಾದ ಬಳಿಕ ಇರಾನ್ ಪ್ರತಿದಾಳಿಯನ್ನು ನಡೆಸಿದೆ. ಸದ್ಯ ಉಭಯ ದೇಶಗಳ ನಡುವೆ ಸಂಘರ್ಷದ ನೆಲೆ ವಿಸ್ತಾರಗೊಳ್ಳುತ್ತಿದೆ. ಭಾರತೀಯರು ಸೇರಿದಂತೆ ಇತರೆ ದೇಶದ ನಾಗರಿಕರು ತಮ್ಮ ದೇಶಕ್ಕೆ ಮರಳಿ ಬರಲಾಗದೆ ಸಿಲುಕಿದ್ದಾರೆ.

ಇದನ್ನು ಓದಿದ್ದೀರಾ? ಇಸ್ರೇಲ್-ಇರಾನ್‌ ಸಂಘರ್ಷ | ಟೆಹ್ರಾನ್‌ನಲ್ಲಿ ಭಾರತೀಯರು: ತಕ್ಷಣವೇ ರಾಯಭಾರಿ ಕಚೇರಿ ಸಂಪರ್ಕಿಸಲು ಸೂಚನೆ

Advertisements

ಸದ್ಯ ವಾಯು ಮಾರ್ಗದಲ್ಲಿ ಕ್ಷಿಪಣಿ, ಡ್ರೋನ್‌ಗಳ ಸದ್ದು ಹೆಚ್ಚಾಗಿರುವಾಗ ಭೂ ಗಡಿ ರೇಖೆಯಿಂದ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆತರಬೇಕಾಗಿದೆ. ಇರಾನ್‌ನಲ್ಲಿ 10 ಸಾವಿರಕ್ಕೂ ಅಧಿಕ ಭಾರತೀಯರು ಸಿಲುಕಿದ್ದರೆ, ಇಸ್ರೇಲ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ 18ರಿಂದ 20 ಸಾವಿರ ಭಾರತೀಯರಿದ್ದಾರೆ. ಕೆಲವರು ಹೇಗೋ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡರೆ, ಕೆಲವರು ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ. ಜನರು ಆತಂಕದಲ್ಲಿ ಟೆಹ್ರಾನ್ ತೊರೆಯುವ ಸಾಹಸಕ್ಕೆ ಇಳಿಯುತ್ತಿದ್ದಂತೆ ಎಲ್ಲೆಡೆ ಟ್ರಾಫಿಕ್ ಹೆಚ್ಚಾಗಿದೆ. ಈ ನಡುವೆ ಎಲ್ಲಾ ಭಾರತೀಯರು ತಮ್ಮ ಸಂಪರ್ಕದಲ್ಲಿರುವಂತೆ, ಎಚ್ಚರಿಕೆಯಿಂದಿರುವಂತೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಜೊತೆಗೆ ಸಹಾಯವಾಣಿಯನ್ನೂ ಬಿಡುಗಡೆ ಮಾಡಿದೆ.

ಇರಾನ್ ಮತ್ತು ಇಸ್ರೇಲ್‌ ಸಹಾಯವಾಣಿ

ಇರಾನ್ ಸಹಾಯವಾಣಿ:
1800118797 (Toll free)
+91-11-23012113
+91-11-23014104
+91-11-23017905
+91-9968291988 (ವಾಟ್ಸಾಪ್)
situationroom@mea.gov.in

ಟೆಹ್ರಾನ್ ಸಹಾಯವಾಣಿ

  1. +98 9128109115, +98 9128109109(ಕರೆ)
  2. +98 901044557, +98 9015993320, +91 8086871709(ವಾಟ್ಸಾಪ್)
  3. ಬಂದರ್ ಅಬ್ಬಾಸ್ +98 9177699036
  4. ಜಹೇದನ್: +98 9396356649
    cons.tehran@mea.gov.in (ಇಮೇಲ್ ಐಡಿ)
    ನಿನ್ನೆಯಷ್ಟೆ ಹೊಸದಾಗಿ +989010144557; +989128109115 ಮತ್ತು +989128109109 ಸಂಖ್ಯೆ ಬಿಡುಗಡೆ ಮಾಡಿದ್ದು, ಸಂಪರ್ಕದಲ್ಲಿರುವಂತೆ ತಿಳಿಸಿದೆ.

ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಸಹಾಯವಾಣಿ
ಟೆಲಿಫೋನ್ +972 54-7520711, +972 54-3278392
cons1.telaviv@mea.gov.in(ಇಮೇಲ್ ಐಡಿ)

ಭಾರತೀಯರಿಗೆ ನೀಡಿದ ಮಾರ್ಗಸೂಚಿಯಲ್ಲಿ ಗೊಂದಲ

ಶುಕ್ರವಾರದಿಂದ ಇರಾನ್‌, ಇಸ್ರೇಲ್‌ನಲ್ಲಿರುವ ಭಾರತೀಯರು ಆತಂಕದಲ್ಲಿದ್ದಾರೆ. ಇಸ್ರೇಲ್ ದಾಳಿಯಿಂದ ಟೆಹ್ರಾನ್‌ನಲ್ಲಿರುವ ಇಬ್ಬರು ಭಾರತೀಯ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಭಾರತೀಯರ ಕಳವಳವನ್ನು ಇನ್ನಷ್ಟು ಹೆಚ್ಚಿಸಿದೆ. ಇರಾನ್‌ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಭಾರತೀಯರಿದ್ದಾರೆ. ಈ ಪೈಕಿ ಶೇಕಡ 20ರಷ್ಟು ಜನರು ಕಾಶ್ಮೀರದವರು. ಇನ್ನೊಂದೆಡೆ ಇಸ್ರೇಲ್‌ನಲ್ಲಿಯೂ ಭಾರತೀಯರು ಸಿಲುಕಿದ್ದಾರೆ. ವಿಮಾನ ಮಾರ್ಗ ಮುಚ್ಚಿದ ಕಾರಣ ಪ್ರವಾಸಕ್ಕೆಂದು ಹೋದ ಗುಂಪುಗಳು ವಾಪಸ್ ಬರಲಾಗದೆ ಇಸ್ರೇಲ್‌ನಲ್ಲೇ ಇರುವಂತಾಗಿದೆ.

ಇರಾನ್‌ನಲ್ಲಿ ಸೋಮವಾರ ಸಂದೇಶವೊಂದು ಹರಡಿದ್ದು, ಬಸ್ ವ್ಯವಸ್ಥೆ ಮಾಡಲಾಗಿದೆ, ಭಾರತೀಯ ವಿದ್ಯಾರ್ಥಿಗಳು ಸೋಮವಾರ ಬೆಳಿಗ್ಗೆ 9:30ರೊಳಗೆ ವೆಲೆಂಜಾಕ್ ವಿಶ್ವವಿದ್ಯಾಲಯ ಗೇಟ್‌ ಸಂಖ್ಯೆ 2ಕ್ಕೆ ತೆರಳಬೇಕು ಎಂದು ಸೂಚಿಸಿದೆ. “ಭಾರತೀಯ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಅಥವಾ ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಉಳಿಯಬಾರದು. ದಯವಿಟ್ಟು ಈ ಸಂದೇಶವನ್ನು ವ್ಯಾಪಕವಾಗಿ ಹರಡಿ” ಎಂಬ ಸಂದೇಶವೂ ಹರಿದಾಡಿದೆ.

ಅದೇ ಆನ್‌ಲೈನ್ ಗುಂಪಿನಲ್ಲಿ ಇನ್ನೊಬ್ಬ ಸಂಘಟಕರು “ಟೆಹ್ರಾನ್‌ನಲ್ಲಿರುವ ಪ್ರತಿಯೊಬ್ಬರೂ ಇಂದು ಹೊರಡಬೇಕು. ದಯವಿಟ್ಟು ಈ ವಿಷಯವನ್ನು ಹರಡಿ” ಎಂಬ ನಿರ್ದೇಶನ ನೀಡಿದ್ದಾರೆ. ಹಾಗೆಯೇ ಅಲ್ಪಾವಧಿಯ ವೀಸಾಗಳಲ್ಲಿರುವ ಪ್ರವಾಸಿಗರು ಮತ್ತು ವ್ಯಾಪಾರದ ಉದ್ದೇಶದಿಂದ ಪ್ರಯಾಣಿಸಿರುವವರು ನಿರ್ಗಮನ ಸ್ಥಳಕ್ಕೆ ತಲುಪುವಂತೆ ತಿಳಿಸಲಾಗಿದೆ. ಆದರೆ ಸ್ಥಳೀಯ ಸಾರಿಗೆ ವ್ಯವಸ್ಥೆ ಇಲ್ಲದೆ, ಇಂಟರ್‌ನೆಟ್‌ ಇಲ್ಲದೆ ಟೆಹ್ರಾನ್‌ನಂತಹ ಅತಿ ದೊಡ್ಡ ನಗರದಲ್ಲಿ ಸಂಚರಿಸಿ ಸಂದೇಶದಲ್ಲಿ ತಿಳಿಸಿರುವ ಸ್ಥಳಕ್ಕೆ ತಲುಪುವುದು ಭಾರತೀಯರಿಗೆ ಕಷ್ಟಸಾಧ್ಯ ಎಂಬಂತಾಗಿದೆ. ಹೇಗೋ ವೆಲೆಂಜಾಕ್ ವಿಶ್ವವಿದ್ಯಾಲಯ ಗೇಟ್‌ ಸಂಖ್ಯೆ 2ಕ್ಕೆ ತೆರಳಿರುವವರು ಅಲ್ಲಿ ಕಾಯಬೇಕಾದ ಸ್ಥಿತಿ ಬಂದಿದೆ. ಇನ್ನೊಂದೆಡೆ ಭಾರತದಲ್ಲಿರುವ ತಮ್ಮ ಕುಟುಂಬದ ಸಂಪರ್ಕಕ್ಕೂ ಸಿಗಲಾಗದೆ ವಿದ್ಯಾರ್ಥಿಗಳು ಒದ್ದಾಡುತ್ತಿದ್ದಾರೆ.

ಇದನ್ನು ಓದಿದ್ದೀರಾ? ಇಸ್ರೇಲ್-ಇರಾನ್‌ ಸಂಘರ್ಷ | ಟೆಹ್ರಾನ್‌ನಲ್ಲಿ ಭಾರತೀಯರು: ತಕ್ಷಣವೇ ರಾಯಭಾರಿ ಕಚೇರಿ ಸಂಪರ್ಕಿಸಲು ಸೂಚನೆ

ರಾಯಭಾರ ಕಚೇರಿಯು ಈಗಾಗಲೇ ಒಂದು ಆನ್‌ಲೈನ್ ಫಾರ್ಮ್‌ಗಳನ್ನು ಬಿಡುಗಡೆ ಮಾಡಿದೆ. ಈ ಫಾರ್ಮ್‌ನಲ್ಲಿ ಎಲ್ಲಾ ಮಾಹಿತಿ ಭರ್ತಿ ಮಾಡುವಂತೆ ಭಾರತೀಯರಿಗೆ ತಿಳಿಸಲಾಗಿದೆ. ಆದರೆ ಇಂಟರ್‌ನೆಟ್ ಇಲ್ಲದ ಕಾರಣ ಈ ಫಾರ್ಮ್‌ ಭರ್ತಿ ಮಾಡಲು ಅದೆಷ್ಟೋ ಭಾರತೀಯರಿಗೆ ಸಾಧ್ಯವಾಗಿಲ್ಲ. ಭಾರತೀಯರು ಸಹಾಯವಾಣಿ ಸಂಪರ್ಕವನ್ನೇ ಅವಲಂಬಿಸಿದ್ದಾರೆ.

ಸೋಮವಾರ ಟೆಹ್ರಾನ್‌ನಿಂದ ಸುಮಾರು 600 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಈ ಪೈಕಿ ಹೆಚ್ಚಿನವರು ಟೆಹ್ರಾನ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ, ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯ, ಇರಾನ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಶಾಹಿದ್ ಬೆಹೆಶ್ತಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾರೆ. ಇನ್ನು ಉರ್ಮಿಯಾ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ಸುರಕ್ಷಿತ ಪ್ರದೇಶದ ಹುಡುಕಾಟದಲ್ಲಿ ಭಾರತೀಯರು

ಇಸ್ರೇಲ್‌ಗಿಂತಲೂ ಇರಾನ್‌ನಲ್ಲಿರುವ ಭಾರತೀಯರ ಸ್ಥಿತಿ ಶೋಚನೀಯವಾಗಿದೆ. ಸುರಕ್ಷಿತ ಪ್ರದೇಶದ ಹುಡುಕಾಟವೇ ಹರಸಾಹಸವೆಂಬಂತಾಗಿದೆ. ಟೆಹ್ರಾನ್‌ನಿಂದ ಸುಮಾರು 200 ಕಿಲೋ ಮೀಟರ್‌ ದೂರದಲ್ಲಿರುವ ಆಮ್(Qom) ಪ್ರದೇಶದಲ್ಲಿ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕವಿಲ್ಲದೆ, ಸಂಪೂರ್ಣ ಬ್ಲ್ಯಾಕ್‌ಔಟ್‌ನಿಂದಾಗಿ ವಿದ್ಯಾರ್ಥಿಗಳು ಎರಡು ದಿನ ಊಟ ನಿದ್ದೆ ಇಲ್ಲದೆ ಒದ್ದಾಡುವಂತಾಗಿದೆ.

“ಶುಕ್ರವಾರ ನಮ್ಮ ಡೀನ್ ಬಂದು ಈ ವಸತಿ ನಿಲಯ ಹೆಚ್ಚು ಸುರಕ್ಷಿತ ಸ್ಥಳ ಎಂದರು. ಆದರೆ ಪರಿಸ್ಥಿತಿ ವಿಭಿನ್ನವಾಗಿದೆ. ಇಲ್ಲಿಂದ ವಿದ್ಯಾರ್ಥಿಗಳನ್ನು ಬಂಕರ್‌ಗಳು, ಬೇಸ್‌ಮೆಂಟ್‌ಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಆದರೆ ಮುಂದೇನು ತಿಳಿದಿಲ್ಲ” ಎಂಬ ಆತಂಕ ಭಾರತೀಯ ವಿದ್ಯಾರ್ಥಿಗಳದ್ದು.

“ನಮ್ಮ ವಿಶ್ಯವಿದ್ಯಾಲಯವು ನಮಗೆ ಆಹಾರ ನೀಡುತ್ತಿದೆ, ಇತರೆ ಸಹಾಯ ಮಾಡುತ್ತಿದೆ. ಆದರೆ ನಮ್ಮ ಸರ್ಕಾರ ಕೂಡಲೇ ನಮ್ಮನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಬೇಕು. ಇತರೆ ದೇಶಗಳ ವಿದ್ಯಾರ್ಥಿಗಳನ್ನು ಅವರ ಸರ್ಕಾರ ವಾಪಸ್ ಕರೆಸುತ್ತಿದೆ, ನಾವು ಮಾತ್ರ ಇಲ್ಲಿಯೇ ಬಾಕಿಯಾಗಿದ್ದೇವೆ. ಭಾರತ ಸರ್ಕಾರ ನಮ್ಮನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಬೇಕು” ಎಂದು ಟೆಹ್ರಾನ್ ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಒತ್ತಾಯಿಸಿದ್ದಾರೆ.

ಅರಾಕ್ ವಿಶ್ವವಿದ್ಯಾಲಯ ಮತ್ತು ಶರೀಝ್ ವಿಶ್ವವಿದ್ಯಾಲಯಕ್ಕೆ ಭಾರತೀಯ ರಾಯಭಾರಿ ಕಚೇರಿ ಸಂದೇಶ ಕಳುಹಿಸಿದ್ದು, ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ ಭಾರತದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಹೊಣೆ ನಮ್ಮದು ಎಂದು ರಾಯಭಾರಿ ಕಚೇರಿ ಹೇಳಿದೆ. ಆದರೆ ಇತರೆ ವಿಶ್ವವಿದ್ಯಾಲಯಗಳಿಗೂ ಈ ಸಂದೇಶ ಕಳುಹಿಸಲಾಗಿದೆಯೇ ಎಂಬುದು ಅಸ್ಪಷ್ಟ. ಆದರೆ ಸದ್ಯ ಇರುವ ಮಾಹಿತಿ ಪ್ರಕಾರ ವಿದ್ಯಾರ್ಥಿಗಳನ್ನು ಜೂನ್ 18ರಂದು ಭಾರತಕ್ಕೆ ಕರೆತರಲಾಗುತ್ತದೆ.

“ವಿದ್ಯಾರ್ಥಿಗಳಿಬ್ಬರು ಗಾಯಗೊಳ್ಳುವವರೆಗೂ ನಮ್ಮ ಸ್ಥಳಾಂತರ ಮಾಡಿರಲಿಲ್ಲ. ನಾವು ನೆಲೆಸಿರುವ ವಸತಿ ನಿಲಯದ ಸಮೀಪದಲ್ಲೇ ದಾಳಿಗಳು ಆರಂಭವಾದ ಬಳಿಕ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದಾರೆ. ಟೆಹ್ರಾನ್‌ನಿಂದ ದೂರವಿರುವ ಪ್ರದೇಶಕ್ಕೆ ನಮ್ಮನ್ನು ಸ್ಥಳಾಂತರಿಸಲಾಗುತ್ತಿದೆ” ಎಂದು ಜಮ್ಮು ಮೂಲದ ವಿದ್ಯಾರ್ಥಿನಿ ತಿಳಿಸಿದ್ದಾರೆ. “ಉಕ್ರೇನ್‌ನಲ್ಲಿ ಯುದ್ಧ ಆರಂಭವಾದಾಗ ಹಲವು ವಿಮಾನಗಳ ಮೂಲಕ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ಆದರೆ ಸದ್ಯ ಸರ್ಕಾರ ಏನು ಮಾಡುತ್ತಿದೆ? ನಮ್ಮ ಮಕ್ಕಳನ್ನು ಯಾವಾಗ ವಾಪಸ್ ಕರೆತರುವುದು” ಎಂಬ ಪ್ರಶ್ನೆ ಪೋಷಕರದ್ದು.

ಕೇಂದ್ರ ಸರ್ಕಾರ ಏನು ಮಾಡುತ್ತಿದೆ?

ವಿದೇಶಾಂಗ ಸಚಿವಾಲಯವು ವಿದ್ಯಾರ್ಥಿಗಳ ಸ್ಥಳಾಂತರ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದೆ. ಆದರೆ ಇನ್ನೂ ಆಮೆವೇಗದಲ್ಲಿ ಸಾಗುತ್ತಿದೆ. ಟೆಹ್ರಾನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಹೇಳುವಂತೆ ಇತರೆ ದೇಶದ ವಿದ್ಯಾರ್ಥಿಗಳನ್ನು ಆಯಾ ದೇಶಗಳು ಕರೆಸಿಕೊಂಡಿದೆ. ಆದರೆ ನಮ್ಮ ಭಾರತ ಸರ್ಕಾರ ಏನು ಮಾಡುತ್ತಿದೆ? ಸಂಘರ್ಷ ಪೀಡಿತ ಪ್ರದೇಶದಿಂದ ಸ್ಥಳಾಂತರ ಪ್ರಕ್ರಿಯೆ ಸುಲಭವಲ್ಲ ಎಂಬುದು ಒಪ್ಪತಕ್ಕದ್ದು. ಆದರೆ ಇತರೆ ದೇಶ ತೆಗೆದುಕೊಂಡಷ್ಟು ಮುತುವರ್ಜಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿಲ್ಲವೇಕೆ?

ಇಸ್ರೇಲ್-ಇರಾನ್ ಸಂಘರ್ಷ ಹೆಚ್ಚಾಗುತ್ತಿದ್ದಂತೆ ಜೂನ್ 13ರಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಒಂದೆರಡು ಟ್ವೀಟ್‌ಗಳನ್ನು ಮಾಡಿದ್ದಾರೆ, ಇಸ್ರೇಲ್-ಇರಾನ್ ಸರ್ಕಾರ ನಮ್ಮನ್ನು ಸಂಪರ್ಕಿಸಿದೆ ಎಂದು ಹೇಳಿಕೊಂಡಿದ್ದಾರೆ. ಬಳಿಕ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲೇ ನಿರತರಾದರೆ, ವಿದೇಶಾಂಗ ಸಚಿವರು ಪ್ರಧಾನಿಯ ವಿದೇಶ ಪ್ರವಾಸದ ಟ್ವೀಟ್‌ಗಳನ್ನು ರೀಟ್ವೀಟ್ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ. ಯಾವುದೇ ದೇಶದ ಸಂಘರ್ಷದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಯ ಹೊಣೆ ಭಾರತ ಸರ್ಕಾರ, ಪ್ರಧಾನಿ ಮೋದಿಯದ್ದಲ್ಲವೇ? ಯುದ್ಧಪೀಡಿತ ದೇಶದಲ್ಲೇ ವಿದ್ಯಾರ್ಥಿಗಳನ್ನು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿಗೆ ಸ್ಥಳಾಂತರ ಮಾಡುತ್ತಾ ಕುಟುಂಬಸ್ಥರ ಆತಂಕವನ್ನು ಹೆಚ್ಚಿಸುವ ಬದಲು, ಭಾರತೀಯರನ್ನು ದೇಶಕ್ಕೆ ವಾಪಸ್ ಕರೆ ತರುವುದು ಉತ್ತಮವಲ್ಲವೇ ಎಂಬುದು ಪೋಷಕರ ಅಭಿಪ್ರಾಯ. ಈ ಎಲ್ಲಾ ಒತ್ತಡದ ಬಳಿಕ ಸದ್ಯ ಜೂನ್ 18ರಂದು ಭಾರತೀಯ ವಿದ್ಯಾರ್ಥಿಗಳು ದೆಹಲಿ ತಲುಪುವ ನಿರೀಕ್ಷೆಯಿದೆ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X