ಉದರ ಸಂಬಂಧಿತ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಸದ್ಯ ಅವರ ಡಿಸ್ಚಾರ್ಜ್ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಸೋನಿಯಾ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಮಂಗಳವಾರ ತಿಳಿಸಿದೆ.
ಭಾನುವಾರ ಸಂಜೆ 78 ವರ್ಷದ ಸೋನಿಯಾ ಗಾಂಧಿ ಅವರನ್ನು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದಕ್ಕೂ ಕೆಲವು ದಿನಗಳ ಮುನ್ನ ಸೋನಿಯಾ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಶಿಮ್ಲಾದಲ್ಲೂ ಅನಾರೋಗ್ಯ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನು ಓದಿದ್ದೀರಾ? ಆರೋಗ್ಯದಲ್ಲಿ ಏರುಪೇರು: ಶಿಮ್ಲಾದ ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ
ಮಂಗಳವಾರ ಆಸ್ಪತ್ರೆಯ ಅಧ್ಯಕ್ಷ ಅಜಯ್ ಸ್ವರೂಪ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, “ಸೋನಿಯಾ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಉದರ ಸೋಂಕು ಕಾಣಿಸಿಕೊಂಡಿತ್ತು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಆಹಾರ ಪದ್ಧತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ” ಎಂದು ತಿಳಿಸಿದ್ದಾರೆ.
ಇನ್ನು ಡಾ. ಎಸ್. ನುಂದಿ ಮತ್ತು ಡಾ. ಅಮಿತಾಭ್ ಯಾದವ್, ಸೋನಿಯಾ ಅವರ ಆರೋಗ್ಯ ಮತ್ತು ಆಹಾರ ಪದ್ಧತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಜೂನ್ 9ರಂದು ಅದೇ ಆಸ್ಪತ್ರೆಗೆ ಸೋನಿಯಾ ದಾಖಲಾಗಿದ್ದರು ಎಂದು ಹೇಳಲಾಗಿದೆ. ಅದಕ್ಕೂ ಮುನ್ನ ಶಿಮ್ಲಾದಲ್ಲಿ ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
