ಆರ್.ಸಿ.ಬಿ. ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ ಮೃತಪಟ್ಟ 11 ಜನ ಅಮಾಯಕರ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಕಾರಣ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕ ಮಂಗಳವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ವೇಳೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್, “ಕಾಲ್ತುಳಿತ ಪ್ರಕರಣದಲ್ಲಿ ಹೈಕೋರ್ಟ್ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಿಸಿಕೊಂಡಿದೆ ಎಂದರೆ, ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ” ಎಂದು ಹೇಳಿದರು.
“ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದವರು ಕ್ರಿಕೆಟಿಗರ ಜೊತೆಗೆ ಫೋಟೋ ಶೂಟ್ ಮಾಡಿಕೊಂಡಿದ್ದರಿಂದಲೇ 11 ಜನರು ಮೃತರಾಗಿದ್ದಾರೆ. ಬಿಜೆಪಿ ಎಲ್ಲ ಬಗೆಯ ಹೋರಾಟಗಳನ್ನು ಮಾಡಿದೆ. ಇನ್ನು ಮುಂದೆಯೂ ಹೋರಾಟ ಮಾಡಲಾಗುವುದು. ಸರ್ಕಾರವೇ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿದೆ. ಹಾಗೆ ಆಹ್ವಾನ ನೀಡದೇ ಹೋಗಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ. ನಾವು ಪ್ರತಿಭಟನೆ ಮಾಡಿದಾಗ ನೂರಾರು ಪೊಲೀಸರು ಬಂದಿದ್ದರು. ಅದೇ ರೀತಿ ಎರಡು ಲಕ್ಷ ಜನರನ್ನು ನಿಯಂತ್ರಣ ಮಾಡಲು ಹೆಚ್ಚು ಪೊಲೀಸರನ್ನು ನಿಯೋಜಿಸಬೇಕಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಂಗಾರು ಮಳೆಗೆ ಸರ್ಕಾರ ಸಿದ್ಧವಿದೆಯೇ?
“ಮುಖ್ಯಮಂತ್ರಿಗಳ ಜನಪ್ರಿಯತೆ ಹೆಚ್ಚಿಸಲು ಮತ್ತು ಇಮೇಜ್ ವೃದ್ಧಿಗೆ ಆರ್.ಸಿ.ಬಿ. ವಿಜಯೋತ್ಸವದ ಕಾರ್ಯಕ್ರಮ ಏರ್ಪಡಿಸಿದ್ದಾರೆ ಹಾಗೂ 11 ಜನರ ಸಾವಿಗೆ ಕಾರಣವಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
“ಇಂಥ ಭಂಡ ಸರಕಾರ, ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳು ಜನಪ್ರಿಯತೆ ಕಳಕೊಂಡಿದ್ದಾರೆ. ರಾಜ್ಯ ಸರಕಾರದ ಪ್ರಾಯೋಜಕತ್ವದಲ್ಲಿ ಈ 11 ಜನರು ಸಾಯುವಂತಾಗಿದೆ. ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು” ಎಂದು ಆಗ್ರಹಿಸಿದರು.
ಸಿಎಂ ಮನೆಗೆ ಮುತ್ತಿಗೆ ಯತ್ನ- ಬಂಧನ
ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲು ಮುಂದಾದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬಂಧನದ ವೇಳೆ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ‘ತೊಲಗಲಿ ತೊಲಗಲಿ ಸರಕಾರ ತೊಲಗಲಿ’, ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.