ಅಹಮದಾಬಾದ್-ಲಂಡನ್ ಮಾರ್ಗದ ಮತ್ತು ದೆಹಲಿ-ಪ್ಯಾರಿಸ್ ಮಾರ್ಗದ ಏರ್ ಇಂಡಿಯಾ ವಿಮಾನವನ್ನು ಮಂಗಳವಾರ ರದ್ದುಗೊಳಿಸಲಾಗಿದೆ. ಇತ್ತೀಚೆಗೆ ಅಹಮದಾಬಾದ್-ಲಂಡನ್ ಮಾರ್ಗದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ದುರಂತ ಸಂಭವಿಸಿ 270ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಈ ಎರಡು ವಿಮಾನ ರದ್ದಾಗಿರುವುದು ಮಹತ್ವವನ್ನು ಪಡೆದಿದೆ.
ಮಂಗಳವಾರ ಎರಡನೇ ಬಾರಿಗೆ ಏರ್ ಇಂಡಿಯಾ ವಿಮಾನವನ್ನು ರದ್ದುಪಡಿಸಲಾಗಿದೆ. ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ AI-159 ವಿಮಾನವನ್ನು ಕಾರ್ಯಾಚರಣೆಯ ಸಮಸ್ಯೆ ಕಾರಣ ನೀಡಿ ರದ್ದುಗೊಳಿಸಲಾಗಿದೆ. ಬಳಿಕ ಇದೇ ಕಾರಣ ನೀಡಿ ದೆಹಲಿ-ಪ್ಯಾರಿಸ್ ಮಾರ್ಗದ ಏರ್ ಇಂಡಿಯಾ ವಿಮಾನ ರದ್ದುಪಡಿಸಲಾಗಿದೆ.
ಇದನ್ನು ಓದಿದ್ದೀರಾ? ಬೋಯಿಂಗ್ 787 ವಿಮಾನಗಳ ತಾಂತ್ರಿಕ ದೋಷಗಳ ಬಗ್ಗೆ ಎಚ್ಚರಿಸಿದ್ದ ಎಂಜಿನಿಯರ್ ನಿಗೂಢ ಸಾವು; ಮತ್ತೆ ಮುನ್ನೆಲೆಗೆ
ಈ ಹಿಂದೆ ಅಹಮದಾಬಾದ್-ಲಂಡನ್ ಮಾರ್ಗದಲ್ಲಿ ಏರ್ ಇಂಡಿಯಾ AI-171 ವಿಮಾನ ಹಾರಾಡುತ್ತಿತ್ತು. ಆದರೆ ಜೂನ್ 12ರಂದು ಈ ವಿಮಾನ ಅಪಘಾತಕ್ಕೆ ಒಳಗಾಗಿದೆ. ಇದಾದ ಬಳಿಕ AI-159 ವಿಮಾನವನ್ನು ಈ ವಾಯು ಮಾರ್ಗಕ್ಕೆ ನಿಯೋಜಿಸಲಾಗಿದೆ. ಈ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಹೊರಡಬೇಕಿತ್ತು. ಇದರಿಂದಾಗಿ ಜೂನ್ 18ರಂದು ಪ್ಯಾರಿಸ್‌ನಿಂದ ದೆಹಲಿಗೆ ಹಿಂತಿರುಗುವ AI142 ವಿಮಾನವನ್ನು ಸಹ ರದ್ದುಗೊಳಿಸಲಾಗಿದೆ. ಸದ್ಯ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ವಿಮಾನಯಾನ ಸಂಸ್ಥೆಯು ಹೋಟೆಲ್ ವಸತಿ ಸೌಕರ್ಯವನ್ನು ಒದಗಿಸುತ್ತಿದೆ. ಪ್ರಯಾಣಿಕರು ವಿಮಾನ ರದ್ದು ಮಾಡಬಹುದು ಅಥವಾ ಉಚಿತವಾಗಿ ಬೇರೆ ವಿಮಾನದ ಟಿಕೆಟ್ ಪಡೆಯಬಹುದು. ಸಂಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ. ಆದಷ್ಟು ಬೇಗ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ.
ಏರ್ ಇಂಡಿಯಾ ತನ್ನ ಬೋಯಿಂಗ್ 787-8 ಮತ್ತು -9 ವಿಮಾನಗಳಲ್ಲಿಹೆಚ್ಚುವರಿ ತಪಾಸಣೆ ನಡೆಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ನಿರ್ದೇಶನ ನೀಡಿದೆ.
