ಮಂಡ್ಯ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಶ್ರಮಿಕ ಸಮುದಾಯ ನಿರಂತರವಾಗಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೋರಾಟದಿಂದಲೇ ಈಗಿರುವ ಜಾಗ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಆದರೂ, ಇನ್ನೂ ಸಾಕಷ್ಟು ಸಮಸ್ಯೆಗಳು ಹಾಗೇ ಉಳಿದಿವೆ. ಸ್ಲಂ ಜನರ ಸಮಸ್ಯೆ ಬಗೆಹರಿಯುವಲ್ಲಿ, ಬಗೆಹರಿಸುವಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ಸಾಧ್ಯವಾಗಿಲ್ಲ. ಈಗಲಾದರೂ ಸ್ಲಂ ನಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ ವಿತರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಡಾ. ಎಚ್ ವಿ ವಾಸು ಒತ್ತಾಯಿಸಿದರು.
ಮಂಡ್ಯ ಜಿಲ್ಲಾ ಶ್ರಮಿಕರ ನಗರ ನಿವಾಸಿಗಳ ಒಕ್ಕೂಟ, ಕರ್ನಾಟಕ ಜನಶಕ್ತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಮಹಿಳಾ ಮುನ್ನಡೆಯಿಂದ ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಶ್ರಮಿಕ ನಗರ ನಿವಾಸಿಗಳ ಹಕ್ಕೊತ್ತಾಯ’ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
“ಈ ಹಿಂದೆ ಎರಡ್ಮೂರು ಬಾರಿ ಚುನಾವಣೆಯಲ್ಲಿ ಸೋತು, ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದಾಗ ಇದೇ ಸ್ಲಂ ಜನ ಅಂಬರೀಷ್ ಅವರು ಗುಣಮುಖರಾಗುವಂತೆ ಹರಕೆ ಹೊತ್ತರು. ಚುನಾವಣೆಯಲ್ಲಿ ಯಾವುದೇ ಅಪೇಕ್ಷೆ ಇರದೇ ಗೆಲ್ಲಿಸಿಕೊಂಡು ಬಂದರು. ಅವರೇ ವಸತಿ ಸಚಿವರಾಗಿದ್ದಾಗ ಸ್ಲಂ ನಿವಾಸಿಗಳ ಕಷ್ಟ ತಿಳಿಯಲೇ ಇಲ್ಲ. ಅವರೇನು ತೊಂದರೆ ಆಗುವಂತೆ ನಡೆದುಕೊಂಡಿಲ್ಲ. ಆದರೆ, ಸ್ಲಂ ಜನಗಳ ನೆರವಿಗೆ ನಿಂತಿದ್ದರೆ ಸಮಸ್ಯೆ ಇರುತ್ತಿರಲಿಲ್ಲ” ಎಂದರು.
“ಸ್ಥಳೀಯ ಶಾಸಕರು, ಕೊಳಚೆ ಅಭಿವೃದ್ದಿ ಮಂಡಳಿಯ ಅಧಿಕಾರಿಗಳು ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಗಳ ಜೊತೆ ಕುಳಿತು ನಾಲ್ಕು ಪ್ರಕಾರಗಳಲ್ಲಿ ಚರ್ಚೆ ನಡೆಸಿದರೆ ಸಮಸ್ಯೆಯನ್ನು ತುರ್ತಾಗಿಯೇ ಬಗೆಹರಿಸಬಹುದು. ಸಮಯ ವ್ಯರ್ಥಪಡಿಸದೆ 3 ತಿಂಗಳಲ್ಲಿ ಮಂಡ್ಯ ನಗರದಲ್ಲಿರುವ ಹಲವು ಸ್ಲಂ ಬೋರ್ಡ್‌ಗಳು ಸೇರಿದಂತೆ, ಮದ್ದೂರಿನ ತಮಿಳು ಕಾಲೋನಿ ಶ್ರಮಿಕ ನಗರಗಳ ಸಮಸ್ಯೆಗಳನ್ನು ಬಗೆಹರಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಬೇಕು” ಎಂದು ಆಗ್ರಹಿಸಿದರು.

“ರಾಜ್ಯದಲ್ಲಿ 2000ನೇ ಇಸವಿಯಿಂದ ಹೊಸ ಸ್ಲಂಗಳು ಹುಟ್ಟಿಕೊಂಡಿಲ್ಲ. ಏಕೆಂದರೆ, ಭೂಮಿಯ ಬೆಲೆ ಬಂಗಾರವಾಗಿದೆ. ನಗರಗಳಿಗೆ ವಲಸೆ ಬರುವ ಬಡ ಜನರು ಬಾಡಿಗೆ ಮನೆಗಳಲ್ಲಿ ಜೀವಿಸುತ್ತಿದ್ದಾರೆ. 1974ರಲ್ಲಿ ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಅಸ್ತಿತ್ವಕ್ಕೆ ಬಂದಿತು. 1979ರಲ್ಲಿ ಮಂಡ್ಯ ನಗರ ಎಲ್ಲ ಶ್ರಮಿಕ ವಸತಿಗಳನ್ನು ಸ್ಲಂಗಳೆಂದು ಘೋಷಣೆ ಮಾಡಲಾಯಿತು. ಆಗ ಮಂಡ್ಯ ನಗರಸಭೆಯಲ್ಲಿ ಎಸ್. ಹೊನ್ನಯ್ಯ ಅವರು ಅಧ್ಯಕ್ಷರಾಗಿದ್ದರು. ಅವರ ಕಾಲಾವಧಿಯಲ್ಲಿ ಆದಂತಹ ಕೆಲಸಗಳಿವು” ಎಂದು ನೆನಪಿಸಿದರು.

“ಮಂಡ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ರಾಜಕಾರಣಿಗಳು ಗೂಂಡಾಗಳನ್ನು ಬಿಟ್ಟು ಸ್ಲಂ ಜನರನ್ನು ಒಕ್ಕಲೆಬ್ಬಿಸುತ್ತಿದ್ದರು. ಆದರೆ, 2004ರಲ್ಲಿ ಸ್ಲಂ ಜನರ ಪರವಾಗಿ ಹೋರಾಟ ರೂಪಿಸಿದ್ದರಿಂದ ಈವರೆಗೆ ಅಲ್ಲಿಂದ ಶ್ರಮಿಕರನ್ನು ಒಕ್ಕಲೆಬ್ಬಿಸಲು ಸಾಧ್ಯವಾಗಲಿಲ್ಲ. ಶ್ರಮಿಕ ಜನರಿಗೆ ರಾಜಕೀಯ ಪ್ರಜ್ಞೆ ಅಗತ್ಯ. ಯಾರು ತಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹರಿಸಬಲ್ಲರು ಎಂಬುದನ್ನು ಅರಿಯಬೇಕು. ಚುನಾವಣೆ ಸಂದರ್ಭದಲ್ಲಿ ಮದ್ಯ, ಹಣ ಸೇರಿದಂತೆ ಇತರೆ ಆಮಿಷಗಳಿಗೆ ಬಲಿಯಾಗದೆ ಯೋಗ್ಯರನ್ನು ಬೆಂಬಲಿಸುವ ಪ್ರಜ್ಞೆ ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಜನಶಕ್ತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, “ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಹಕ್ಕುಪತ್ರ, ಮನೆ, ನಿವೇಶನ ರಹಿತರಿಗೆ ನಿವೇಶನ ನೀಡುವುದರ ಜತೆಗೆ 20 ಎಕರೆ ಭೂಮಿಯನ್ನು ಮೀಸಲೀಡಬೇಕು. ಮಂಡ್ಯ ನಗರದ 10 ಕಿಮೀ ವ್ಯಾಪ್ತಿಯೊಳಗೆ ಜಾಗ ಗುರುತು ಮಾಡಬೇಕು. ಈಗಾಗಲೇ ಸಭೆಗಳ ಮೇಲೆ ಸಭೆಗಳು ನಡೆದಿವೆ. ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ಶ್ರಮಿಕ ಕುಟುಂಬಗಳಿಗೆ ಈವರೆಗೆ ಅನ್ಯಾಯವಾಗಿದೆ. ಈಗಲೂ ಕೂಡ ಅಂಥದ್ದೇ ನಡೆ ಅನುಸರಿಸುವುದು ಸೂಕ್ತವಲ್ಲ. ಚುನಾವಣೆ ಮುನ್ನ ಕೊಟ್ಟ ಭರವಸೆಯಂತೆ ಶಾಸಕರು ನಡೆದುಕೊಳ್ಳಬೇಕು. ನೊಂದ ಕುಟುಂಬಗಳ ನೆರವಿಗೆ ಧಾವಿಸಬೇಕು. ಒಕ್ಕಲೆಬ್ಬಿಸಲು ಬಿಡದೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಮಾತನಾಡಿ, “ಮಂಡ್ಯದಲ್ಲಿರುವ ಸ್ಲಂ ಬೋರ್ಡ್ ನಿವಾಸಿಗಳ ಸಮಸ್ಯೆ ಸಾಕಷ್ಟಿದೆ. ಅದರಲ್ಲೂ, ಹಕ್ಕುಪತ್ರ ಸಮಸ್ಯೆ. ಇನ್ನೊಂದು ಪರಿಚಯ ಪತ್ರ ನೀಡುವಿಕೆಯಲ್ಲೂ ಕೂಡ ಅಧಿಕಾರಿಗಳು ಮೀನಾಮೇಷಾ ಎಣಿಸುತ್ತಿರುವುದು ಸರಿಯಲ್ಲ. ಸಾಕಷ್ಟು ವರ್ಷಗಳಿಂದ ಕಾದು ಕುಳಿತಿರುವ ಜನಕ್ಕೆ ಈಗ ಅಧಿಕಾರಿಗಳು, ಜನಪ್ರತಿನಿದಿಗಳ ಕಾರ್ಯಕ್ರಮ ನಡೆಸಿ ಮುಖ್ಯಮಂತ್ರಿಗಳನ್ನು ಕರೆಸಿ ಅವರಿಂದ ಕೊಡಿಸುವ ಉದ್ದೇಶ ಸರಿಯಾದದ್ದೂ ಅಲ್ಲ. ಕೂಡಲೇ ಜನರನ್ನು ಕಾಯಿಸದೆ ಪರಿಚಯ ಪತ್ರ ಹಾಗೂ ಹಕ್ಕುಪತ್ರ ಕೊಡಿಸಬೇಕು” ಎಂದು ಒತ್ತಾಯಿಸಿದರು.
ಜಾಗೃತ ಕರ್ನಾಟಕದ ಎನ್. ನಾಗೇಶ್ ಮಾತನಾಡಿ, “ಎಲ್ಲದಕ್ಕೂ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಹೋರಾಟದಿಂದ ನ್ಯಾಯ ಪಡೆಯುವಲ್ಲಿ ಸಂಘಟನೆ ಮಹತ್ವದ ಪಾತ್ರ ವಹಿಸಿದೆ. ಸಂಘಟನೆ ಪ್ರಬಲವಾಗಿದ್ದ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿಸಿ, ನಮ್ಮ ಹಕ್ಕುಗಳನ್ನು ಪ್ರತಿಪಾದಿಸಿ ಜಾಗ ಉಳಿಸಿಕೊಂಡಿದ್ದೇವೆ. ಕೆಲವು ಸಂದರ್ಭ ಸಂಘಟನೆ ಪ್ರಭಾವ ಕಡಿಮೆ ಆದಾಗ ತೋಳ್ಬಲ, ಅಧಿಕಾರ, ಹಣ ಕೆಲಸ ಮಾಡಿದೆ. ಅದಷ್ಟೇ ತೊಂದರೆ ಕೊಟ್ಟಿದೆ” ಎಂದರು.

“ಕಾಳಿಕಾಂಬ ದೇವಸ್ಥಾನ ಸ್ಲಂ ಬಡಾವಣೆಯ ಜಾಗ. ಅದನ್ನು ಆಕ್ರಮಿಸಿ ಅಲ್ಲಿಯೇ ಕಲ್ಯಾಣ ಮಂಟಪ ಕಟ್ಟಿ ಟ್ರಸ್ಟ್‌ಗೆ ಆದಾಯ ಬರುವಂತೆ ಆಗಿದೆ. ಎಲ್ಲಿಯಾದರು, ಯಾವ ದೇವರಾದರೂ ಬಡ ಜನರನ್ನು ನಿರ್ಗತಿಕರನ್ನಾಗಿ ಮಾಡಿ, ಜಾಗ ಕಿತ್ತುಕೊಂಡು ನನಗೆ ಗುಡಿ ಕಟ್ಟಿ, ಪೂಜೆ ಮಾಡಿ ಅಂದ ಉದಾಹರಣೆ ಇದೆಯಾ?. ಹೈ ಕೋರ್ಟ್‌ನಲ್ಲಿ ಸೋಲುಂಡು, ದಾನ ಪತ್ರ ಮಾಡಿದ್ದರು. ವಾಮ ಮಾರ್ಗದಲ್ಲಿ ದೂರು ದಾಖಲಿಸಿಕೊಂಡು ತೊಂದರೆ ಮಾಡುತ್ತಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಶಾಸಕರು ಮಧ್ಯ ಪ್ರವೇಶಿಸಿ ಸರಿಪಡಿಸಬೇಕು. ಸ್ಲಂ ಜನಗಳಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, “ಈಗಾಗಲೇ ಮಂಡ್ಯ ಸ್ಲಂ ನಿವಾಸಿಗಳ ಪರವಾಗಿ ಜಿಲ್ಲಾಧಿಕಾರಿಯವರು 18 ಸಭೆ ನಡೆಸಿದ್ದಾರೆ. ನಾನೂ ಕೂಡ ನಾಲ್ಕು ಸಭೆಯಲ್ಲಿ ಭಾಗಿಯಾಗಿದ್ದೇನೆ. ಅದರಲ್ಲಿ, ಬಹುತೇಕ ತೊಡಕುಗಳು ನಿವಾರಣೆಯಾಗಿದ್ದು, ಇನ್ನೆರೆಡು ತಿಂಗಳ ಒಳಗಾಗಿ ಕಾರ್ಯಕ್ರಮ ನಡೆಸಿ ಹಕ್ಕುಪತ್ರ ನೀಡುತ್ತೇವೆ. ಈಗಾಗಲೇ ನಿರ್ಮಾಣವಾಗಿರುವ, ನಿರ್ಮಾಣ ಆಗಲಿರುವ ಮನೆಗಳಿಗೆ ಚಾಲನೆ ನೀಡಿ ವರ್ಷದ ಒಳಗಾಗಿ ಹಸ್ತಾಂತರ ಮಾಡಲಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಾಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರ ಪದಗ್ರಹಣ
“ನಾನು ಕ್ಷೇತ್ರದಲ್ಲಿ ಶಾಸಕನಾಗಿ ಇರುವ ತನಕ, ಶ್ರಮಿಕರ ಪರವಾಗಿ ಕೆಲಸ ಮಾಡುವೆ. ಕಾನೂನು ತೊಡಕು ಇರುವ
ವಿಚಾರವಾಗಿ ಸರ್ಕಾರದ ನಡುವೆ ಪತ್ರ ವ್ಯವಹಾರ ನಡೆಯುತ್ತಿದೆ. ಕೆಲವು ಗೊಂದಲಗಳೂ ಇವೆ. ಅದರಲ್ಲಿ, ಪ್ರಮುಖವಾಗಿ ಕಾಳಿಕಾಂಬ ಬಡಾವಣೆ ಸ್ಲಂ ನಿವಾಸಿಗಳ ವಿಚಾರವಾಗಿ ಮಾಜಿ ಶಾಸಕರ ಜೊತೆ ಮಾತಾಡಿರುವೆ. ಅವರು ಒಂದು ಎಕರೆ ಖರೀದಿಸಿ ಕೊಡಲು ಸಿದ್ದರಿದ್ದಾರೆ. ಅಲ್ಲದೆ, ನಾನೂ ಕೂಡ ಹಣ ಹಾಕಿ ಮನೆ ನಿರ್ಮಿಸಿಕೊಡಲು ಸಿದ್ದನಿದ್ದೇನೆ. ಐದು ಸಾವಿರ ನಿವೇಶನ ನೀಡುವ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಕರ್ನಾಟಕ ಜನಾಂದೋಲನ ಸಂಘಟನೆ ರಾಜ್ಯ ಸಂಚಾಲಕ ಮರಿಯಪ್ಪ, ರೈತ ಸಂಘದ ಲತಾ ಶಂಕರ್, ವಿಮೋಚನ ಜನಾರ್ಧನ್, ಮಹಿಳಾ ಮುನ್ನಡೆ ಶಿಲ್ಪ, ವಿದ್ಯಾರ್ಥಿ ಸಂಘಟನೆಯ ಅಂಜಲಿ, ನಗರಸಭೆ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಕುಮಾರ್ ಈಶ್ವರ್, ಎ ಇ ಕಾವ್ಯ ಸೇರಿದಂತೆ ಅಧಿಕಾರಿಗಳು ಸಮಾವೇಶದಲ್ಲಿ ಇದ್ದರು.