ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಭಾರತೀಯ ಮಹಿಳಾ ಕ್ರಿಕೆಟ್‌ನ ದಂತಕತೆ ಸ್ಮೃತಿ ಮಂಧಾನ ಅವರು ಐಸಿಸಿ ಏಕದಿನ ಬ್ಯಾಟರ್ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ಕಳೆದ ಬಾರಿ ದ್ವಿತೀಯ ಸ್ಥಾನದಲ್ಲಿದ್ದ ಸ್ಮೃತಿ ಈ ಬಾರಿ 727 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ. ವಿಶೇಷವೆಂದರೆ ಸ್ಮೃತಿ ಮಂಧಾನ ಅವರನ್ನು ಹೊರತುಪಡಿಸಿ ಭಾರತದ ಯಾವುದೇ ಆಟಗಾರ್ತಿಯರು ಮೊದಲ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ಐಸಿಸಿ ಏಕದಿನ ಬ್ಯಾಟರ್ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಮೃತಿ ಮೊದಲ ಸ್ಥಾನಕ್ಕೇರುತ್ತಿರುವುದು ಇದು ಎರಡನೇ ಬಾರಿ. ಈ ಮುನ್ನ 2019 ರಲ್ಲಿ ಅವರು ಅಗ್ರಸ್ಥಾನ ಅಲಂಕರಿಸಿದ್ದರು.
ಈ ಬಾರಿ ನಡೆದ ದಕ್ಷಿಣ ಆಫ್ರಿಕಾ, ಶ್ರೀಲಂಕಾ ನಡುವಣ ತ್ರಿಕೋನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸ್ಮೃತಿ ಮಂಧಾನ 6 ವರ್ಷಗಳ ಬಳಿಕ ಐಸಿಸಿ ಏಕದಿನ ಬ್ಯಾಟರ್ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಸ್ಮೃತಿ ಮಂಧಾನ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲೂ ಮೊದಲ 10 ರಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಬ್ಯಾಟರ್ ಸ್ಮೃತಿ ಮಂಧಾನ ಮಾತ್ರ.
ಸ್ಮೃತಿ ಮಂಧಾನ 2018 ಮತ್ತು 2021ರಲ್ಲಿ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾಗಿದ್ದರು. ಜೊತೆಗೆ 2022 ಮತ್ತು 2025ರಲ್ಲಿ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದರು. 2018ರಲ್ಲಿ ಬಿಸಿಸಿಐ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದರು. 2025ರ ಜನವರಿಯಲ್ಲಿ ಸ್ಮೃತಿ 4000 ಏಕದಿನ ರನ್‌ಗಳ ಮೈಲಿಗಲ್ಲನ್ನು ತಲುಪಿದ್ದರು.
ಸ್ಮೃತಿ ಮಂಧಾನ ಅವರ ನಂತರದ ಸ್ಥಾನದಲ್ಲಿ ಇಂಗ್ಲೆಂಡ್ನ ನಟಾಲಿ ಸ್ಕಿವರ್-ಬ್ರಂಟ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಮೂರನೇ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ ಪಡೆದುಕೊಂಡಿದ್ದಾರೆ. ನಟಾಲಿ ಹಾಗೂ ಲಾರಾ ತಲಾ 719 ಅಂಕಗಳನ್ನು ಪಡೆದುಕೊಂಡಿದ್ದು, ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿದರೆ ಇಬ್ಬರು ಅಗ್ರಸ್ಥಾನಕ್ಕೇರಲು ಅವಕಾಶವಿದೆ.
ಇದನ್ನು ಓದಿದ್ದೀರಾ? ವಿಜಯ ಮಲ್ಯ- ಕಳ್ಳನೋ, ಸುಳ್ಳನೋ, ವಂಚಕನೋ ಅಥವಾ ಸಂತನೋ?
ಇಂಗ್ಲೆಂಡ್ ತಂಡದ ಯುವ ಬ್ಯಾಟರ್ ಆಮಿ ಜೋನ್ಸ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಒಟ್ಟು 682 ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಐದನೇ ಶ್ರೇಯಾಂಕ ಪಡೆದುಕೊಂಡಿದ್ದು, ಒಟ್ಟು 684 ಅಂಕಗಳನ್ನು ಗಳಿಸಿದ್ದಾರೆ.
ಆರನೇ ಸ್ಥಾನದಲ್ಲಿರುವುದು ವೆಸ್ಟ್ ಇಂಡೀಸ್ ತಂಡದ ನಾಯಕಿ ಹೇಲಿ ಮ್ಯಾಥ್ಯೂಸ್ ಇದ್ದು, 682 ಅಂಕಗಳನ್ನು ಪಡೆದಿದ್ದಾರೆ. ಹಾಗೆಯೇ ಏಳನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಅಲೀಸಾ ಹೀಲಿ (679), ಎಂಟನೇ ಸ್ಥಾನದಲ್ಲಿ ಚಾಮರಿ ಅಥಾಪತ್ತು (655), 9ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಬೆತ್ ಮೂನಿ (655) ಕಾಣಿಸಿಕೊಂಡಿದ್ದಾರೆ. ಇನ್ನು ಟಾಪ್-10ರ ಕೊನೆಯ ಸ್ಥಾನದಲ್ಲಿ 650 ಅಂಕಗಳನ್ನು ಪಡೆದಿರುವ ಆಶ್ ಗಾರ್ಡ್ನರ್ ಇದ್ದಾರೆ.
ಟಿ20 ಮಹಿಳಾ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾದ ಬೆತ್ ಮೂನಿ. 794 ಅಂಕಗಳೊಂದಿಗೆ ಬೆತ್ ಮೂನಿ ಮೊದಲ ಸ್ಥಾನದಲ್ಲಿದ್ದರೆ, 765 ಅಂಕಗಳನ್ನು ಹೊಂದಿರುವ ವೆಸ್ಟ್ ಇಂಡೀಸ್ ನಾಯಕಿ ಹೇಲಿ ಮ್ಯಾಥ್ಯೂಸ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ತಾಹ್ಲಿಯಾ ಮೆಕ್ಗ್ರಾಥ್ (757) ಇದ್ದು, ನಾಲ್ಕನೇ ಸ್ಥಾನದಲ್ಲಿ 753 ಅಂಕಗಳನ್ನು ಹೊಂದಿರುವ ಸ್ಮೃತಿ ಮಂಧಾನ ಕಾಣಿಸಿಕೊಂಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ 737 ಅಂಕಗಳೊಂದಿಗೆ ಐದನೇ ಸ್ಥಾನ ಅಲಂಕರಿಸಿದ್ದಾರೆ.