‘ಮಾಬ್ ರೂಲ್’ ವಿರುದ್ಧದ ಸುಪ್ರೀಂ ಆದೇಶ ಹಿಂದುತ್ವಕ್ಕೂ ವಿಸ್ತರಿಸುವ ಅಗತ್ಯವಿದೆಯಲ್ಲವೇ?

Date:

Advertisements
ಹಿಂದುತ್ವವಾದಿಗಳ ಮಾಬ್‌ ರೂಲ್‌ ಕಾರ್ಯಾಚರಣೆಗಳು ಧಾರ್ಮಿಕ ಮತ್ತು ಜಾತಿ ಆಧಾರಿತ ದೌರ್ಜನ್ಯ, ಹಿಂಸಾಚಾರಗಳ ಮೇಲೆ ಕೇಂದ್ರೀಕೃತವಾಗಿವೆ. ಮಾಬ್ ರೂಲ್‌ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸ್ವಯಂಪ್ರೇರಿತ ಪ್ರಕರಣ (Suo Moto) ದಾಖಲಿಸಿಕೊಂಡು, ರಾಜಕೀಯ ಒತ್ತಡವಿಲ್ಲದೆ ತನಿಖೆಗೆ ಆದೇಶಿಸುವ ಅಗತ್ಯವೂ ಇದೆ.

ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿಕೊಂಡಿರುವ ಕಮಲ್ ಹಾಸನ್‌ ವಿರುದ್ಧ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅವರ ‘ಥಗ್‌ ಲೈಫ್‌’ ಸಿನಿಮಾ ಬಿಡುಗಡೆಯನ್ನು ಕರ್ನಾಟಕದಲ್ಲಿ ನಿರ್ಬಂಧಿಸಲಾಗಿದೆ. ರಾಜ್ಯದಲ್ಲಿ ತಮ್ಮ ಸಿನಿಮಾ ಬಿಡುಗಡೆಗೆ ಅವಕಾಶ ಕೊಡದೇ ಇರುವುದನ್ನು ಪ್ರಶ್ನಿಸಿ ಚಿತ್ರತಂಡ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್‌, ”ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಲನಚಿತ್ರವನ್ನು ಕರ್ನಾಟಕದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಅವಕಾಶ ನೀಡಬೇಕು. ಚಿತ್ರ ಪ್ರದರ್ಶನಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವ ಹೊಣೆ ರಾಜ್ಯ ಸರ್ಕಾರದ್ದು” ಎಂದು ಹೇಳಿದೆ.

ಮಾತ್ರವಲ್ಲದೆ, ”ಯಾರಾದರೂ ನಿಮಗೆ ನೋವಾಗುವ ರೀತಿ ಮೌಖಿಕವಾಗಿ ಹೇಳಿಕೆ ನೀಡಿದರೆ, ಅದಕ್ಕೆ ಹೇಳಿಕೆಯಿಂದಲೇ ಪ್ರತಿಕ್ರಿಯಿಸಿ, ಏನಾದರೂ ಬರೆದಿದ್ದರೆ, ಬರಹ ರೂಪದಲ್ಲೇ ಉತ್ತರಿಸಿ. ಆದರೆ, ಹೀಗೆ ನಿಷೇಧದ ಸನ್ನಿವೇಶ ಸೃಷ್ಟಿಸಲು ಅವಕಾಶವಿಲ್ಲ. ಜನರು ಗುಂಪು ಗುಂಪಾಗಿ ಬೀದಿಗಿಳಿದು ಚಿತ್ರಮಂದಿರಗಳ ಮಾಲೀಕರಿಗೆ ಗನ್‌ ತೋರಿಸಿ ಸಿನಿಮಾ ಪ್ರದರ್ಶನ ಮಾಡದಂತೆ ಬೆದರಿಕೆ ಹಾಕುವ ‘ಮಾಬ್‌ ರೂಲ್‌’ಗೆ (ಗುಂಪು ಆಳ್ವಿಕೆ) ಅವಕಾಶವಿಲ್ಲ. ನೆಲದ ಕಾನೂನುಗಳು ಪಾಲನೆ ಆಗಬೇಕು” ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ನ ಈ ಆದೇಶ ಅಕ್ಷರಶಃ ಸ್ವಾಗತಾರ್ಹ. ಮಾತ್ರವಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಅತ್ಯಗತ್ಯ. ಆದರೆ, ಈ ಆದೇಶವು ‘ಥಗ್‌ ಲೈಫ್’ ಸಿನಿಮಾ ಅಥವಾ ಕರ್ನಾಟಕ ಸರ್ಕಾರದ ನಿಲುವಿನ ವಿಚಾರಕ್ಕೆ ಮಾತ್ರವೇ ಸೀಮಿತವಾದರೆ, ಅದು ಸಲ್ಲದು. ‘ಮಾಬ್ ರೂಲ್’ ವಿರುದ್ಧದ ಸುಪ್ರೀಂ ಕೋರ್ಟ್‌ನ ನಿಲುವು, ನಿರ್ಧಾರ, ಆದೇಶಗಳು ಭಾರತೀಯ ಸಮಾಜದೊಳಗೆ ಹಲವಾರು ಸ್ತರಗಳಿಗೆ ವಿಸ್ತರಿಸುವ, ಬೆಳಕು ಚೆಲ್ಲುವ ಅಗತ್ಯವಿದೆ.

Advertisements

ಅದರಲ್ಲೂ, ದೇಶದ ಹಲವು ರಾಜ್ಯಗಳಲ್ಲಿ, ವಿಶೇಷವಾಗಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಗೋರಕ್ಷಣೆ, ಧಾರ್ಮಿಕ ಸಂಗತಿಗಳು ಹಾಗೂ ಇತರ ಸಾಮಾಜಿಕ ವಿವಾದಗಳಲ್ಲಿ ಬಿಜೆಪಿ/ಸಂಘಪರಿವಾರದ ಕಾರ್ಯಕರ್ತರು ‘ಮಾಬ್ ರೂಲ್’ (ಗುಂಪು ಹಲ್ಲೆ, ಗುಂಪು ಹತ್ಯೆ, ಅನೈತಿಕ ಪೊಲೀಸ್‌ಗಿರಿ) ನಡೆಸುತ್ತಿರುವುದು ಹೆಚ್ಚುತ್ತಲೇ ಇದೆ. ಹತ್ತಾರು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.

ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ ಹಾಗೂ ಗುಜರಾತ್‌ನಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ, ಜೊತೆಗೆ ಕರ್ನಾಟಕದಂತಹ ರಾಜ್ಯಗಳಲ್ಲೂ ಹಿಂದುತ್ವವಾದಿ ಸಂಘಟನೆಗಳು/ಕಾರ್ಯಕರ್ತರ ದಾಂಧಲೆ, ಅನೈತಿಕ ಪೊಲೀಸ್‌ಗಿರಿ, ಮಾಬ್‌ ರೂಲ್‌ ಎಗ್ಗಿಲ್ಲದೆ ನಡೆಯುತ್ತಿದೆ.

2015ರಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಉತ್ತರ ಪ್ರದೇಶದ ದಾದ್ರಿಯಲ್ಲಿ ಮೊಹಮ್ಮದ್ ಅಖ್ಲಾಕ್‌ ಎಂಬವರನ್ನು ಸಂಘಪರಿವಾರದ ಗೂಂಡಾಗಳು ಹತ್ಯೆಗೈದಿದ್ದರು. ಅಂತೆಯೇ, 2017ರಲ್ಲಿ ರಾಜಸ್ಥಾನದ ಪೆಹ್ಲು ಖಾನ್‌ ಅವರನ್ನು ಕೊಲೆ ಮಾಡಲಾಗಿತ್ತು. ಮಾತ್ರವಲ್ಲ, ಕರ್ನಾಟಕದ ರಾಮನಗರ ಜಿಲ್ಲೆಯ ಸಾತನೂರು ಗ್ರಾಮದಲ್ಲಿ 2023ರ ಮಾರ್ಚ್ 31ರಂದು ಇದ್ರಿಶ್ ಪಾಶ ಅವರನ್ನು ಪುನೀತ್ ಕೆರೆಹಳ್ಳಿ ಮತ್ತವರ ತಂಡ ಚಿತ್ರಹಿಂಸೆ ನೀಡಿ ಕೊಂದಿದೆ ಎಂದು ಆರೋಪಿಸಲಾಗಿದೆ. ಆಗ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಗೋರಕ್ಷಣೆ ಹೆಸರಿನಲ್ಲಿ ಇಂತಹ ನೂರಾರು ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ.

ಇತ್ತೀಚೆಗೆ, ಸಂಘಪರಿವಾರವು ‘ಲವ್ ಜಿಹಾದ್’ ಎಂಬ ಇಲ್ಲದ ಗುಮ್ಮವನ್ನು ಹುಟ್ಟುಹಾಕಿದೆ. ಲವ್ ಜಿಹಾದ್ ವಿರುದ್ದದ ಹೋರಾಟ ಎಂಬ ಹೆಸರಿನಲ್ಲಿ ಅಂತರ್‌ಧರ್ಮೀಯ ದಂಪತಿಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. 2017ರಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ‘ಆ್ಯಂಟಿ-ರೋಮಿಯೊ’ ತಂಡಗಳನ್ನು ರಚಿಸಿದರು. ಈ ತಂಡಗಳು ಮುಸ್ಲಿಂ ಯುವಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಆರೋಪಿಸಲಾಗಿದೆ.

ಧಾರ್ಮಿಕ ಸ್ಥಳಗಳ ವಿಚಾರವಾಗಿ 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಘಟಿಸಿದ ಬಳಿಕ ಹಲವಾರು ಮಸೀದಿ, ದರ್ಗಾ, ಚರ್ಚ್‌ ಭೂಮಿಗಳನ್ನು ವಿವಾದಿತ ತಾಣಗಳನ್ನಾಗಿ ಮಾಡುವ ಹುನ್ನಾರಗಳು ನಡೆದಿವೆ. 2009ರ ಲಿಬರ್‌ಹಾನ್ ಆಯೋಗವು ಬಾಬ್ರಿ ಮಸೀದಿ ಧ್ವಂಸವು ಸಂಘ ಪರಿವಾರದ ಯೋಜಿತ ಕೃತ್ಯವೆಂದು ಗುರುತಿಸಿದೆ.

ಬಾಬ್ರಿ ಮಸೀದಿ ಧ್ವಂಸ ಬಳಿಕ ವಾರಣಾಸಿ, ಕಾಶಿ, ಮಥುರಾ, ಶ್ರೀರಂಗಪಟ್ಟಣಗಳಲ್ಲಿ ಮಸೀದಿಗಳನ್ನು ವಿವಾದಿತ ಸ್ಥಳಗಳ್ಳಾಗಿರುವ ಕೃತ್ಯಗಳು ನಡೆಯುತ್ತಿವೆ. ಅಲ್ಲದೆ, ಅನ್ಯಕೋಮಿನವರ ಮೇಲೆ ಗುಂಪು ದಾಳಿಗಳು ಹೆಚ್ಚುತ್ತಿವೆ. ಈ ಎಲ್ಲ ಕೃತ್ಯಗಳಿಗೂ ಬಿಜೆಪಿ, ಆರ್‌ಎಸ್‌ಎಸ್‌ ಬೆಂಬಲಗಳಿವೆ ಎಂದು ಆರೋಪಿಸಲಾಗಿದೆ.

ದೇಶದಲ್ಲಿ ಹಿಂದುತ್ವವಾದಿಗಳು ನಾನಾ ರೀತಿಯಲ್ಲಿ ‘ಮಾಬ್‌ ರೂಲ್‌’ ನಡೆಸುತ್ತಿದ್ದಾರೆ. ಆದರೆ, ಈ ಬಗ್ಗೆ ಸುಪ್ರೀಂ ಕೋರ್ಟ್‌ ಕಟುವಾಗಿ ಟೀಕಿಸಿಲ್ಲ. ‘ಮಾಬ್ ರೂಲ್’ ವಿರುದ್ಧ ಆದೇಶಗಳನ್ನು ನೀಡಿಲ್ಲ. ಗುಂಪು ಆಳ್ವಿಕೆಯ ತಡೆಗಾಗಿ ಸರ್ಕಾರಗಳನ್ನು ಗಂಭೀರವಾಗಿ ಪ್ರಶ್ನಿಸಿಲ್ಲ ಎಂಬ ಅಭಿಪ್ರಾಯಗಳಿವೆ.

ಆದಾಗ್ಯೂ, 2018ರಲ್ಲಿ, ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿ, ಮಾಬ್ ಲಿಂಚಿಂಗ್ ಮತ್ತು ಗೋರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಮಾರ್ಗದರ್ಶನ ನೀಡಿತ್ತು. ಆದರೆ, ಕೋರ್ಟ್‌ನ ನಿರ್ದೇಶನವು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ.

2018ರಲ್ಲಿ ಕೋರ್ಟ್‌ ನೀಡಿದ ಮಾರ್ಗದರ್ಶನಗಳ ಹೊರತಾಗಿಯೂ, ರಾಜ್ಯ ಸರ್ಕಾರಗಳು ಮಾಬ್ ಲಿಂಚಿಂಗ್ ಪ್ರಕರಣಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ, ಕೆಲವು ಹಿಂದುತ್ವವಾದಿ ಗುಂಪುಗಳಿಗೆ ರಾಜಕೀಯ ರಕ್ಷಣೆ ದೊರೆಯುತ್ತದೆ ಎಂಬ ಆರೋಪವಿದೆ. ಆದರೆ, ತನ್ನ ಆದೇಶಗಳ ಜಾರಿಯಲ್ಲಿ ರಾಜ್ಯ ಸರ್ಕಾರಗಳ ವೈಫಲ್ಯವನ್ನು ನ್ಯಾಯಾಲಯವು ಪರಿಶೀಲಿಸಿಲ್ಲ. ಪ್ರಶ್ನಿಸಲಿಲ್ಲ. ಸುಪ್ರೀಂ ಕೋರ್ಟ್‌ನ ಈ ನಿರ್ಲಕ್ಷ್ಯವು ಕಾನೂನಿನ ಆಡಳಿತವನ್ನು ದುರ್ಬಲಗೊಳಿಸುವ ಗುಂಪು ಕಾರ್ಯಾಚರಣೆಗಳಿಗೆ ಪರೋಕ್ಷವಾಗಿ ಆಸ್ಪದ ನೀಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ಲೇಖನ ಓದಿದ್ದೀರಾ?: ಅಮೆರಿಕದ ಟ್ರಂಪ್ ಎಂಬ ಹುಚ್ಚನೂ, ಇರಾನಿನ ಇಸ್ಲಾಮಿಕ್ ಖಮೇನಿಯೂ: ಏನಾಗಲಿದೆ ಮಧ್ಯ ಪ್ರಾಚ್ಯ?

ಬಿಜೆಪಿ ಮತ್ತು ಸಂಘ ಪರಿವಾರವು ಕೆಲವು ರಾಜ್ಯಗಳಲ್ಲಿ ಪೊಲೀಸ್ ಮತ್ತು ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಲಾಗಿದೆ. 2017ರ ರಾಜಸ್ಥಾನದ ಪೆಹ್ಲು ಖಾನ್‌ನ ಹತ್ಯೆಯ ನಂತರ, ಬಿಜೆಪಿ ಶಾಸಕರೊಬ್ಬರು ಖಾನ್‌ ಅವರನ್ನು ‘ಗೋಕಳ್ಳ’ ಎಂದು ಕರೆದಿದ್ದರು. ಇದು ಗುಂಪು ಹಿಂಸೆಯ ಸಮರ್ಥನೆಯ ಭಾಗವಾಗಿತ್ತು. ಇಂತಹ ಘಟನೆಗಳು, ರಾಜಕೀಯ ಬೆಂಬಲವಿಲ್ಲದೆ ಗುಂಪು ಹಿಂಸೆಗಳು ನಡೆಯಲು ಸಾಧ್ಯವಿಲ್ಲ ಎಂಬ ವಾದವನ್ನು ಮತ್ತಷ್ಟು ಬಲಗೊಳಿಸಿತ್ತು.

ಹಿಂದುತ್ವವಾದಿಗಳ ಮಾಬ್‌ ರೂಲ್‌ ಕಾರ್ಯಾಚರಣೆಗಳು ಧಾರ್ಮಿಕ ಮತ್ತು ಜಾತಿ ಆಧಾರಿತ ದೌರ್ಜನ್ಯ, ಹಿಂಸಾಚಾರಗಳ ಮೇಲೆ ಕೇಂದ್ರೀಕೃತವಾಗಿವೆ. ಇದು, ಭಾರತದ ಬಹುತ್ವದ ಸಾಮಾಜಿಕ ರಚನೆಗೆ ಧಕ್ಕೆ ತಂದಿದೆ. ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪುಗಳು ಈ ಸಾಮಾಜಿಕ ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯಗಳಿವೆ.

ಇನ್ನು, ಇತ್ತೀಚೆಗೆ, ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನು ಟೀಕಿಸಿದ್ದರು. ನ್ಯಾಯಾಂಗಕ್ಕಿಂತ ಸಂಸತ್ತೇ ಸಾರ್ವಭೌಮ ಎಂದಿದ್ದರು. ಆದರೆ, ಧನಕರ್ ಹೇಳಿಕೆಗೆ ಸುಪ್ರೀಂ ಕೋರ್ಟ್‌ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ.

ಇಂತಹ ಅಪವಾದಗಳಿಂದ ಸುಪ್ರೀಂ ಕೋರ್ಟ್‌ ಹೊರಬರಲು ಕೆಲವು ತುರ್ತು ಅಗತ್ಯ ಕ್ರಮಗಳಿಗೆ ಮುಂದಾಗಬೇಕಿದೆ. ಮಾಬ್ ರೂಲ್‌ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸ್ವಯಂಪ್ರೇರಿತ ಪ್ರಕರಣ (Suo Moto) ದಾಖಲಿಸಿಕೊಂಡು, ರಾಜಕೀಯ ಒತ್ತಡವಿಲ್ಲದೆ ತನಿಖೆಗೆ ಆದೇಶಿಸುವ ಅಗತ್ಯವೂ ಇದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. This article shown only one sided mob linching and author is very prejudice against Hindu. Mob linching were happened by so called shanti Priya Mazhab also. But he doesn’t mentioned in his article. So author is biased.

  2. ಹೌದೇ ಮಹಾಶಯರೇ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆಯುವ ಮಾಬ್ ಲಿಂಚಿಂಗ್ ಬಗ್ಗೆ ತಮಗೆ ಅರಿವಿಲ್ಲದಿರುವುದು ಕೇರಳದಲ್ಲಿ ನಡೆಯುವ ಹತ್ಯೆಗಳ ಬಗ್ಗೆ ತಮಗೆ ಅರಿವಿಲ್ಲದಿರುವುದು ನಿಮ್ಮ ಕಥೆ ಕೂಪ ಮಂಡುಕ ಕಥೆಯಾಗಿದೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X