ರಾಜ್ಯದಲ್ಲಿ ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿರುವ ನೌಕರರ ಕೆಲಸದ ಅವಧಿಯನ್ನು 10 ಗಂಟೆಗಳಿಗೆ ವಿಸ್ತರಿಸಲು ರಾಜ್ಯ ಸರ್ಕಾರವು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ. ಸರ್ಕಾರದ ಈ ಚಿಂತನೆಯ ವಿರುದ್ಧ ಐಟಿ/ಬಿಟಿ ಸೇರಿದಂತೆ ಖಾಸಗಿ ವಲಯದ ಉದ್ಯೋಗಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸದ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡದಂತೆ ಆಗ್ರಹಿಸಿದ್ದಾರೆ.
ಸದ್ಯಕ್ಕೆ, ರಾಜ್ಯದಲ್ಲಿ ಖಾಸಗಿ ನೌಕರರ ಕೆಲಸದ ಅವಧಿಯಲ್ಲಿ 8ರಿಂದ 9 ಗಂಟೆ ಇದೆ. ಅದನ್ನು ವಿಸ್ತರಿಸಿ 10 ಗಂಟೆಗಳ ಅವಧಿಗೆ ವಿಸ್ತರಿಸುವಂತೆ ಖಾಸಗಿ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಅದರಂತೆ, ಸಮಯ ವಿಸ್ತರಣೆಯ ಕುರಿತು ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದೆ ಎಂದು ವರದಿಯಾಗಿದೆ.
ರಾಜ್ಯದಲ್ಲಿರುವ, ‘ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ-1961ರ ಸೆಕ್ಷನ್ 7ರ ಪ್ರಕಾರ, ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು. ಒಂದು ವೇಳೆ, ಹೆಚ್ಚಿನ ಸಮಯ ದುಡಿಸಿಕೊಂಡರೆ ಹೆಚ್ಚುವರಿ ಪಾವತಿ (ಒಟಿ) ನೀಡಬೇಕು. ಇದೀಗ, ಆ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ವಿವಿಧ ಕಾರ್ಮಿಕ ಸಂಘಟನೆಗಳ ಜೊತೆ ಕಾರ್ಮಿಕ ಕಾರ್ಯದರ್ಶಿ ರೋಹಿಣಿ ಸಿಂಧೂರಿ ನೇತೃತ್ವದ ರಾಜ್ಯ ಕಾರ್ಮಿಕ ಇಲಾಖೆ ಅಧಿಕಾರಿಗಳು ಚರ್ಚಿಸಿದ್ದಾರೆ. ಕೆಲಸದ ಅವಧಿಯನ್ನು 10 ಗಂಟೆಯಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ, ಪ್ರಸ್ತಾವಿತ ತಿದ್ದುಪಡಿಯು ಜಾರಿಗೆ ಬಂದಲ್ಲಿ, ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗಲಿದೆ. ಅದು ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ ಮಾತ್ರವಲ್ಲದೆ, ಖಾಸಗಿ ಕಂಪನಿಗಳಲ್ಲಿರುವ ಮೂರು ಪಾಳಿಯ ವ್ಯವಸ್ಥೆಯು ರದ್ದಾಗಲಿದೆ. ಬದಲಾಗಿ, ಎರಡು ಪಾಳಿಯ ಕೆಲಸದ ವ್ಯವಸ್ಥೆ ಇರುತ್ತದೆ. ಇದರಿಂದ, ಮತ್ತೊಂದು ಪಾಳಿಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಪ್ರಮುಖ ಆತಂಕ ಎದುರಾಗಿದೆ. ಹೀಗಾಗಿಯೇ, ಉದ್ಯೋಗಿಗಳು ಕೆಲಸದ ಅವಧಿ ವಿಸ್ತರಣೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಸರ್ಕಾರದ ಮುಂದಿರುವ ಪ್ರಸ್ತಾಪವನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ, “ಕೆಲಸದ ಅವಧಿಯ ವಿಸ್ತರಣೆಯು ಕಾರ್ಮಿಕರನ್ನು ಮತ್ತಷ್ಟು ಶೋಷಿಸುತ್ತದೆ. ಕಾರ್ಮಿಕರನ್ನು ಹಿಂಡುತ್ತದೆ. ಕಾರ್ಮಿಕರ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನೇ ಕಸಿದುಕೊಳ್ಳುತ್ತದೆ. ಕಾರ್ಮಿಕರನ್ನು ಮನುಷ್ಯರಾಗಿ ಗುರುತಿಸಲು ಸರ್ಕಾರಕ್ಕೆ ಇಷ್ಟವಿಲ್ಲ ಎಂಬಂತೆ ಕಾಣುತ್ತದೆ. ಕಾರ್ಮಿಕರನ್ನು ದುಡಿವ ಯಂತ್ರಗಳಂತೆ ನೋಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.