ಪಶ್ಚಿಮ ಬಂಗಾಳದಲ್ಲಿ ಮನರೇಗಾ ಸ್ಥಗಿತ: ಕೇಂದ್ರದ ರಾಜಕೀಯಕ್ಕೆ ಹೈಕೋರ್ಟ್‌ ಚಾಟಿ

Date:

Advertisements

ಭಾರತದ ಗ್ರಾಮೀಣ ಜನರ ಜೀವನಾಧಾರ, ದುಡಿಮೆ ಮೂಲವಾಗಿರುವುದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ). ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಗ್ರಾಮೀಣ ಭಾಗದಲ್ಲಿ ಹಿಂದುಳಿದವರು, ಭೂರಹಿತರು ತಮ್ಮ ಜೀವನೋಪಾಯಕ್ಕೆ ಮನರೇಗಾ ಯೋಜನೆಯನ್ನೇ ಆಶ್ರಯಿಸಿದ್ದಾರೆ. ಅಂತಹದೊಂದು ಮಹತ್ವದ ಯೋಜನೆಯನ್ನು ಪಶ್ಚಿಮ ಬಂಗಾಳದಲ್ಲಿ ಮೂರು ವ‍ರ್ಷಗಳಿಂದ ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಆ ರಾಜ್ಯಕ್ಕೆ ಯೋಜನೆಗಾಗಿ ಯಾವುದೇ ಅನುದಾನ ಕೊಡದೆ ವಂಚಿಸಿದೆ. ಈಗ, ಯೋಜನೆಯನ್ನು ಪುನರಾರಂಭಿಸುವಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೋಲ್ಕತ್ತಾ ಹೈಕೋರ್ಟ್‌ ತಾಕೀತು ಮಾಡಿದೆ.

ಗಮನಾರ್ಹವಾಗಿ, 2022ರಿಂದ ಪಶ್ಚಿಮ ಬಂಗಾಳದಲ್ಲಿ ಮನರೇಗಾ ಯೋಜನೆಗೆ ಕೇಂದ್ರ ಸರ್ಕಾರವು ಯಾವುದೇ ನೆರವು ನೀಡಿಲ್ಲ. ಕಳೆದ ಮೂರು ವರ್ಷಗಳಿಂದ ಬಂಗಾಳದ ಜನರಿಗೆ ಯೋಜನೆಯಡಿ ಕನಿಷ್ಠ ಕೆಲಸ, ವೇತನ ನೀಡಲಾಗಿಲ್ಲ. ಮನರೇಗಾ ಯೋಜನೆಯನ್ನೇ ಆಶ್ರಯಿಸಿದ್ದ ರಾಜ್ಯದ ಹಲವಾರು ಜನರು ಮನರೇಗಾ ಕೂಲಿ ಕೆಲಸ ದೊರೆಯದೆ, ಕಂಗಾಲಾಗಿದ್ದಾರೆ. ಬದುಕು ದೂಡಲು ಕೂಲಿಗಾಗಿ ಪರದಾಡುತ್ತಿದ್ದಾರೆ.

ಯೋಜನೆ ಸ್ಥಗಿತಕ್ಕೆ ಕೇಂದ್ರದ ಸಮರ್ಥನೆ

Advertisements

ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ”ರಾಜ್ಯದಲ್ಲಿ ಯೋಜನೆಯ ಅನುಷ್ಠಾನದಲ್ಲಿ ಗಂಭೀರ ವೈಫಲ್ಯಗಳು ಕಂಡುಬಂದಿವೆ. ಯೋಜನೆಯ ಅನುದಾನದಲ್ಲಿ ದುರ್ಬಳಕೆಯಾಗಿದೆ, ಭ್ರಷ್ಟಾಚಾರ ನಡೆದಿದೆ. ಆಧಾರ್ ಕಾರ್ಡ್‌ ಲಿಂಕ್ ಆಧಾರಿತ ತನಿಖೆಯಲ್ಲಿ ‘ಲಕ್ಷಾಂತರ ಕಾಲ್ಪನಿಕ ಫಲಾನುಭವಿ’ಗಳಿಗೆ (ಗೋಸ್ಟ್‌ ಬೆನಿಫಿಶಿರೀಸ್‌) ವೇನತನ ಪಾವತಿಯಾಗಿದೆ. ಕೋಟಿಗಟ್ಟಲೆ ಅಕ್ರಮ ನಡೆದಿದೆ. ಆ ಕಾರಣಕ್ಕಾಗಿಯೇ ಪಶ್ಚಿಮ ಬಂಗಾಳಕ್ಕೆ ಯೋಜನೆಯಡಿ ಅನುದಾನ ಸ್ಥಗಿತಗೊಳಿಸಲಾಗಿದೆ” ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.

ಮಾತ್ರವಲ್ಲದೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದ ರಾಜ್ಯ ಸರ್ಕಾರವು ಮನರೇಗಾ ಯೋಜನೆಯ ದಾಖಲೆಗಳನ್ನು ಪಾರದರ್ಶಕವಾಗಿ ನಿರ್ವಹಿಸಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಆರೋಪಿಸಿತ್ತು. ”ರಾಜ್ಯಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಯೋಜನೆಯಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳಲು ಯಾವುದೇ ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿಲ್ಲ. ಹೀಗಾಗಿಯೇ, ಮನರೇಗಾ ಕಾಯ್ದೆ-2005ರ ಸೆಕ್ಷನ್ 27ರ ಅಡಿಯಲ್ಲಿ ಬಂಗಾಳಕ್ಕೆ ಯೋಜನೆಯ ಅನುದಾನವನ್ನು ತಡೆಹಿಡಿದಿದ್ದೇವೆ” ಎಂದು ಸಚಿವಾಲಯ ಸಮರ್ಥಿಸಿಕೊಂಡಿತ್ತು.

ಹೈಕೋರ್ಟ್‌ ಹೇಳಿದ್ದೇನು?

ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಂಗಾಳ ಸರ್ಕಾರವು ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ, ಬುಧವಾರ (ಜೂನ್ 18) ಪ್ರಕರಣದ ವಿಚಾರಣೆ ನಡೆಸಿರುವ ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಗಣನಂ ಮತ್ತು ಚೈತಾಲಿ ಚಟರ್ಜಿ ದಾಸ್ ಅವರಿದ್ದ ಪೀಠವು, ”2025ರ ಆಗಸ್ಟ್‌ 1ರಿಂದ ಯೋಜನೆಯನ್ನು ಮತ್ತೆ ಆರಂಭಿಸಬೇಕು” ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

”ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ, ಆ ಬಗ್ಗೆ ತನಿಖೆ ನಡೆಸಬೇಕು. ತನಿಖೆಯನ್ನು ಈಗಲೂ ಮುಂದುವರೆಸಲು ಯಾವುದೇ ಅಡ್ಡಿಯಿಲ್ಲ. ಜೊತೆಗೆ, ಭವಿಷ್ಯದಲ್ಲಿ ಯೋಜನೆಯ ಅನುದಾನ ದುರ್ಬಳಕೆಯನ್ನು ತಡೆಯಲು ವಿಶೇಷ ಷರತ್ತುಗಳನ್ನು ವಿಧಿಸಬಹುದು. ಆದರೆ, ಭ್ರಷ್ಟಾಚಾರದ ಆರೋಪಗಳ ಕಾರಣಕ್ಕೆ ಗ್ರಾಮೀಣ ಜನರನ್ನು ಉದ್ಯೋಗದಿಂದ ವಂಚಿತರನ್ನಾಗಿರುವುದು ಸರಿಯಲ್ಲ. ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಯೋಜನೆಯ ಪುನರಾರಂಭಕ್ಕೆ ಸೂಚನೆ ನೀಡಿದೆ.

ಹೈಕೋರ್ಟ್‌ ಆದೇಶವನ್ನು ಟಿಎಂಸಿ ಸ್ವಾಗತಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಬಂಗಾಳದ ‘ನೈತಿಕ ಗೆಲುವು’ ಎಂದು ಬಣ್ಣಿಸಿದೆ.

ಆರೋಪಗಳ ಕಾರಣಕ್ಕೆ ಯೋಜನೆಯನ್ನೇ ಸ್ಥಗಿತಗೊಳಿಸುವುದೇ?

ಹೇಳಿ-ಕೇಳಿ ಭಾರತವು ಕೃಷಿ ಪ್ರಧಾನ ಮತ್ತು ಗ್ರಾಮೀಣ ಪ್ರದೇಶವೇ ಹೆಚ್ಚಿರುವ ರಾಷ್ಟ್ರ. ಬಹುತೇಕ ಎಲ್ಲ ರಾಜ್ಯಗಳಂತೆ ಪಶ್ಚಿಮ ಬಂಗಾಳವೂ ಕೂಡ ಕೃಷಿಯನ್ನೇ ಆಧಾರಿಸಿರುವ ರಾಜ್ಯ. ಅಲ್ಲಿನ ರೈತರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಕೃಷಿಯೇ ಜೀವನಾಧಾರ. 2023ರ ಅಂಕಿಅಂಶಗಳ ಪ್ರಕಾರ, ಬಂಗಾಳದ ಒಟ್ಟು 9.97 ಕೋಟಿ ಜನರಲ್ಲಿ ಗ್ರಾಮೀಣ ಜನರ ಪಾಲು ಗಮನಾರ್ಹವಾಗಿದೆ. ಗ್ರಾಮೀಣ ಜನರು ತಮ್ಮ ಆರ್ಥಿಕ ಭದ್ರತೆಗೆ ಮನರೇಗಾ ಅಡಿ ದೊರೆಯುವ 100 ದಿನಗಳ ಉದ್ಯೋಗ ಖಾತರಿಯನ್ನೇ ಆಧರಿಸಿದ್ದಾರೆ.

ಆದರೆ, ಕೇಂದ್ರ ಸರ್ಕಾರವು ರಾಜ್ಯದಲ್ಲಿ ಮನರೇಗಾ ಯೋಜನೆಯನ್ನು ಏಕಾಏಕಿ ಸ್ಥಗಿತಗೊಳಿಸಿತು. ಇದರಿಂದಾಗಿ, ಲಕ್ಷಾಂತರ ಕಾರ್ಮಿಕರು ಆದಾಯವಿಲ್ಲದೆ ಸಂಕಷ್ಟಕ್ಕೆ ಒಳಗಾದರು. ಅದರಲ್ಲೂ, ಕೊರೋನಾ ಆಕ್ರಮಣದಿಂದ ತತ್ತರಿಸಿ, ಆಗಷ್ಟೇ ಆರ್ಥಿಕ ಚೇತರಿಕೆಯನ್ನು ಎದುರು ನೋಡುತ್ತಿದ್ದ ಸಂದರ್ಭದಲ್ಲಿ ಯೋಜನೆಗೆ ಕೇಂದ್ರವು ಕೊಕ್ಕೆ ಹಾಕಿತು. ಬಂಗಾಳಿ ಬಡಪಾಯಿ ಕಾರ್ಮಿಕರ ಬದುಕನ್ನು ದುಸ್ತರಗೊಳಿಸಿತು.

ಪರಿಣಾಮ, ಕಳೆದ ಮೂರು ವರ್ಷಗಳಿಂದ ಬಂಗಾಳದ ಗ್ರಾಮೀಣ ಜನರು ಖಾತರಿ ಉದ್ಯೋಗಗಳು ದೊರೆಯದೆ ತತ್ತರಿಸಿದ್ದಾರೆ. ಅವರ ಕುಟುಂಬದ ಆದಾಯ ಕುಸಿದಿದೆ. ಕೊಳ್ಳುವ ಶಕ್ತಿ ಕುಂದಿದೆ. ಜೀವನೋಪಾಯ ಸಂಕಷ್ಟಕ್ಕೆ ಸಿಲುಕಿದೆ.

ಮನರೇಗಾ ಕಾಯ್ದೆಯೇ ಹೇಳುವಂತೆ ಮನರೇಗಾ ಉದ್ಯೋಗ ಪಡೆಯುವುದು ಗ್ರಾಮೀಣ ಜನರ ಕಾನೂನುಬದ್ಧ ಹಕ್ಕು. ಗ್ರಾಮೀಣ ಜನರಿಗೆ 100 ದಿನಗಳ ಖಾತರಿ ಉದ್ಯೋಗ ಒದಗಿಸುವುದು ಸರ್ಕಾರದ ಕರ್ತವ್ಯ. ಹೀಗಿರುವಾಗ, ಆಳುವವರು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪಗಳ ಕಾರಣಕ್ಕಾಗಿ ಸಾಮಾನ್ಯ ಜನರನ್ನು, ಕೂಲಿ ಕಾರ್ಮಿಕರನ್ನು ಶಿಕ್ಷಿಸುವುದು ತಾರ್ಕಿಕವೂ ಅಲ್ಲ, ಸರಿಯಾದ ಧೋರಣೆಯೂ ಅಲ್ಲ. ಬದಲಾಗಿ, ಅದು ರಾಜಕೀಯ ಅಟ್ಟಹಾಸವೇ ಸರಿ.

ಸ್ಥಗಿತತೆಯ ಹಿಂದೆ ರಾಜಕೀಯ ಜಿದ್ದಾಜಿದ್ದಿ!?

ಕೇಂದ್ರ ಸರ್ಕಾರದ ವಾದ ಒಂದೇ– ಭ್ರಷ್ಟಾಚಾರದ ಆರೋಪ. ಭ್ರಷ್ಟಾಚಾರವು ಗಂಭೀರವಾದದ್ದು, ಯೋಜನೆಯ ಹಣವನ್ನು ಸರಿಯಾಗಿ ಬಳಸದಿದ್ದರೆ ಅಥವಾ ನಿರ್ವಹಿಸದಿದ್ದ ಸಮಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ, ಇತರ ರಾಜ್ಯಗಳಲ್ಲೂ ಅನುದಾನ ದುರುಪಯೋಗ ಆಗಬಹುದು ಎಂಬುದು ಕೇಂದ್ರ ಸರ್ಕಾರದ ತರ್ಕ. ಆದರೆ, ಈ ಕಾರಣಕ್ಕಾಗಿ ಜನರನ್ನು ಶಿಕ್ಷಿಸುವುದರಲ್ಲಿ ಯಾವುದೇ ತರ್ಕವಿಲ್ಲ. ಆದರೆ, ಇದರ ಹಿಂದೆ ರಾಜಕೀಯ ಸಂಘರ್ಷವಿದೆ ಎಂಬ ಅಭಿಪ್ರಾಯಗಳಿವೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಬಂಗಾಳದ ಆಡಳಿತಾರೂಢ ಟಿಎಂಸಿ ರಾಜಕೀಯ ಜಿದ್ದಾಜಿದ್ದಿಗೆ ಬಿದ್ದಿವೆ. ಬಂಗಾಳದಲ್ಲಿ ಟಿಎಂಸಿಯನ್ನು ಮಣಿಸಿ, ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಹವಣಿಸುತ್ತಿದೆ. ಅಂತೆಯೇ, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕೊಡಬಾರದು, ಬಿಜೆಪಿಯನ್ನು ಬಂಗಾಳದಿಂದ ಹಿಮ್ಮೆಟ್ಟಬೇಕೆಂಬ ಧಾವಂತದಲ್ಲಿ ಟಿಎಂಸಿ ಇದೆ.

ಈ ರಾಜಕೀಯ ಸಮರದ ಕಾರಣಕ್ಕಾಗಿಯೇ, ಮನರೇಗಾ ಯೋಜನೆಯನ್ನು ಕೇಂದ್ರವು ಸ್ಥಗಿತಗೊಳಿಸಿದೆ ಎಂಬ ಆರೋಪಗಳಿವೆ ಟಿಎಂಸಿ ನಾಯಕಿ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ”ಕೇಂದ್ರವು ರಾಜಕೀಯ ಉದ್ದೇಶದಿಂದ ರಾಜ್ಯದ ಜನರನ್ನು ಶಿಕ್ಷಿಸುತ್ತಿದೆ” ಎಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಪುಷ್ಟಿ ನೀಡುವಂತೆಯೇ ಕೇಂದ್ರ ಸರ್ಕಾರ ನಡೆದುಕೊಂಡಿದೆ. 2023ರ ಬಂಗಾಳದಲ್ಲಿ ಪಂಚಾಯತಿ ಚುನಾವಣೆಗಳು ನಡೆಯಲಿದ್ದವು. ಆ ಚುನಾವಣೆಗಳಿಗೂ ಕೆಲವೇ ತಿಂಗಳುಗಳ ಮೊದಲು 2022ರಲ್ಲಿ ಕೇಂದ್ರ ಸರ್ಕಾರವು ಮನರೇಗಾ ಯೋಜನೆಗೆ ನೀಡುವ ಅನುದಾನವನ್ನು ಸ್ಥಗಿತಗೊಳಿಸಿತು. ಇದು, ಟಿಎಂಸಿಗೆ ಗ್ರಾಮೀಣ ಭಾಗದ ಬೆಂಬಲವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿತ್ತು ಎಂದು ಆರೋಪಿಸಲಾಗಿದೆ.

ಈ ವರದಿ ಓದಿದ್ದೀರಾ?: ಇರಾನ್‌ನೊಂದಿಗೆ ಅಕ್ರಮ ಯುದ್ಧ ಆರಂಭಿಸಿ, ನಿಲ್ಲಿಸಲು ತಿಳಿಯದೆ ಅಮೆರಿಕ ಸಹಾಯ ಕೇಳುತ್ತಿದೆಯೇ ಇಸ್ರೇಲ್?

ಆದಾಗ್ಯೂ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ ಹಾಗೂ ಆಂಧ್ರಪ್ರದೇಶ ಸೇರಿದಂತೆ ನಾನಾ ರಾಜ್ಯಗಳಲ್ಲಿಯೂ ಮನರೇಗಾ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ. ಅಲ್ಲಿಯೂ, ಯೋಜನೆಯ ಅನುದಾನ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆದರೆ, ಆ ಯಾವುದೇ ರಾಜ್ಯಗಳಿಗೆ ಯೋಜನೆಯ ಅನುದಾನವನ್ನು ಕೇಂದ್ರವು ಸ್ಥಗಿತಗೊಳಿಸಿಲ್ಲ. ಬದಲಾಗಿ, ತನಿಖೆಗೆ ಆದೇಶಿಸಿದೆ. ಆದರೆ, ತನಿಖೆಗಳೂ ನಿಧಾನಗತಿಯಲ್ಲಿ ನಡೆಯುತ್ತಿವೆ. ಹೀಗಾಗಿ, ಬಂಗಾಳಕ್ಕೆ ಮಾತ್ರವೇ ಅನುದಾನ ಸ್ಥಗಿತಗೊಳಿಸಿರುವುದು ಬಿಜೆಪಿಯ ರಾಜಕೀಯ ಜಿದ್ದು ಮತ್ತು ಸ್ವಾರ್ಥದಿಂದಲೇ ಎಂಬ ಟೀಕೆಗಳು ಹೆಚ್ಚಾಗಿವೆ.

ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ರಾಜಕೀಯವಾಗಿ ತಿರುಚಲಾಗುತ್ತಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಟಿಎಂಸಿ ಸರ್ಕಾರವು ತನಿಖೆಗೆ ಸಹಕರಿಸದೆ, ದಾಖಲನೆಗಳನ್ನು ಒಗದಿಸದೇ ಇದ್ದುದ್ದೇ ಕಠಿಣ ಕ್ರಮಕ್ಕೆ ಕಾರಣವಾಯಿತು ಎಂದು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಹೇಳಿಕೊಂಡಿದ್ದಾರೆ.

ಆದರೆ, ಯೋಜನೆಯ ಅನುದಾನ ತಡೆಯ ಹಿಂದೆ ರಾಜಕೀಯವೂ ಇದೆ ಎಂಬುದನ್ನು ”ಯೋಜನೆಗಳ ರಾಜಕೀಯೀಕರಣವು ಸರಿಯಲ್ಲ” ಎಂದಿರುವ ಕೋಲ್ಕತ್ತಾ ಹೈಕೋರ್ಟ್‌ನ ಆದೇಶವು ಸೂಚಿಸುತ್ತದೆ.

ಸದ್ಯಕ್ಕೆ, ಯೋಜನೆಯ ಪುನರಾರಂಭಕ್ಕೆ ಕೋಲ್ಕತ್ತಾ ಹೈಕೋರ್ಟ್‌ ಸೂಚಿಸಿದೆ. ಆಗಸ್ಟ್‌ 1ರಿಂದ ಯೋಜನೆಯು ಮತ್ತೆ ಆರಂಭವಾಗುವ ಸಾಧ್ಯತೆಗಳಿವೆ. ಆದರೂ, ಈವರೆಗೆ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು. ತನಿಖೆಗೆ ಟಿಎಂಸಿ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಸ್ಪಂದಿಸಬೇಕು ಮತ್ತು ಸಹಕರಿಸಬೇಕು. ಕೇಂದ್ರ ಸರ್ಕಾರವು ಫೆಡರಲ್ ಆಡಳಿತದ ಚೌಕಟ್ಟಿನಲ್ಲಿ ಸಹಕಾರದ ಮನೋಭಾವವನ್ನು ಬೆಳೆಸಬೇಕು. ಮನರೇಗಾದಂತಹ ಯೋಜನೆಗಳು ರಾಜಕೀಯ ಆಟಕ್ಕೆ ದಾಳವಾಗದಂತೆ ನೋಡಿಕೊಳ್ಳಲು ಅಗತ್ಯ ಕಾನೂನುಗಳನ್ನು ರೂಪಿಸಬೇಕು.  

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X