ನಮ್ಮ ಶ್ರಮಿಕ ವರ್ಗದ ಹಿತವೇ ಕಾರ್ಮಿಕ ಇಲಾಖೆಯ ಆದ್ಯತೆ. ಕಾರ್ಮಿಕರಿಗೆ ಅನಾನುಕೂಲವಾಗುವ ಯಾವುದೇ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ಹೇಳಿದರು.
ಖಾಸಗಿ ವಲಯದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 10 ಗಂಟೆಗೆ ಹೆಚ್ಚಳ ಮಾಡುವ ಜತೆಗೆ ವಾರದಲ್ಲಿ 2 ದಿನ ರಜೆ ನೀಡುವ ಮಹತ್ವದ ಪ್ರಸ್ತಾವಕ್ಕೆ ರಾಜ್ಯ ಸರಕಾರ ಚಾಲನೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದರು.
“ಖಾಸಗಿ ವಲಯದಲ್ಲಿ ದೈನಂದಿನ ಕೆಲಸದ ಅವಧಿಯನ್ನು 10 ಗಂಟೆಗಳಿಗೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರದ ಪ್ರಸ್ತಾವನೆ ಇನ್ನೂ ಚರ್ಚೆಯ ಹಂತದಲ್ಲಿದೆ. ಈ ಬಗ್ಗೆ ಕಾರ್ಮಿಕ ಸಂಘಟನೆಗಳ ಮುಖಂಡರು, ಕೈಗಾರಿಕೆಗಳ ಪ್ರತಿನಿಧಿಗಳು ಹಾಗೂ ತಜ್ಞರ ಜೊತೆ ಚರ್ಚಿಸಲಾಗುವುದು. ಎಲ್ಲರ ಅಭಿಪ್ರಾಯಗಳನ್ನು ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸದಸ್ಯರ ಗಮನಕ್ಕೆ ತಂದು ತೀರ್ಮಾನಕ್ಕೆ ಬರಲಾಗುವುದು” ಎಂದು ತಿಳಿಸಿದರು.