ಗುಜರಾತ್‌ನಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು, ಒಂಬತ್ತು ಅಣೆಕಟ್ಟುಗಳು ತುಂಬಿದೆ. 27 ಜಿಲ್ಲೆಗಳ 160 ತಾಲೂಕುಗಳಲ್ಲಿ ಸರಾಸರಿ 21.24 ಮಿಮೀ ಮಳೆಯಾಗಿದೆ. ಆದರೆ 91 ತಾಲೂಕುಗಳು ಸಂಪೂರ್ಣವಾಗಿ ಬತ್ತಿಹೋಗಿವೆ. ಅಣೆಕಟ್ಟುಗಳಲ್ಲಿ ಅಪಾಯಕಾರಿಯಾಗಿ ನೀರಿನ ಮಟ್ಟ ಏರುತ್ತಿರುವ ಕಾರಣ 15 ಅಣೆಕಟ್ಟುಗಳ ಸಮೀಪ ಹೈ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ 22ಕ್ಕೂ ಅಧಿಕ ಮಂದಿ ಭಾರಿ ಮಳೆಗೆ ಬಲಿಯಾಗಿದ್ದಾರೆ.
ಮುನ್ನೆಚ್ಚರಿಕೆಯಾಗಿ, 1,060 ಜನರನ್ನು ಸ್ಥಳಾಂತರಿಸಲಾಗಿದೆ. ಭಾವನಗರದಲ್ಲಿ 729, ಸುರೇಂದ್ರನಗರದಲ್ಲಿ 134, ಬೋಟಾಡ್‌ನಲ್ಲಿ 117 ಮತ್ತು ಅಮ್ರೇಲಿಯಲ್ಲಿ 80 ಜನರನ್ನು ಸ್ಥಳಾಂತರಿಸಲಾಗಿದೆ. ಬೋಟಾಡ್‌ನಲ್ಲಿ 24, ಭಾವನಗರದಲ್ಲಿ 89 ಮತ್ತು ಅಮ್ರೇಲಿಯಲ್ಲಿ 69- ಹೀಗೆ ವಿಪತ್ತು ನಿರ್ವಹಣಾ ತಂಡಗಳು 182 ಜನರನ್ನು ರಕ್ಷಿಸಿವೆ. ಎನ್‌ಡಿಆರ್‌ಎಫ್‌ನ 13 ಮತ್ತು ಎಸ್‌ಡಿಆರ್‌ಎಫ್‌ನ 20 ಸೇರಿದಂತೆ 33 ತಂಡಗಳನ್ನು ನಿಯೋಜಿಸಿದೆ.
ಇದನ್ನು ಓದಿದ್ದೀರಾ? ಗುಜರಾತ್ | ಭಾರೀ ಮಳೆ; ಚಂಡಮಾರುತದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ತೀವ್ರ ಮುಂಗಾರು ಮಳೆಯಾಗಿದ್ದು ಪ್ರವಾಹದ ಎಚ್ಚರಿಕೆ ನೀಡಲಾಗಿದೆ. 206 ಅಣೆಕಟ್ಟುಗಳಲ್ಲಿ, ಒಂಬತ್ತು ಅಣೆಕಟ್ಟುಗಳು ತುಂಬಿವೆ. 15 ಅಣೆಕಟ್ಟುಗಳು ಹೈ ಅಲರ್ಟ್‌ನಲ್ಲಿದೆ. ಸರ್ದಾರ್ ಸರೋವರ್ ಅಣೆಕಟ್ಟು ನಿರಂತರವಾಗಿ ತುಂಬುತ್ತಿದೆ. ಗಂಟೆಗೆ 16,914 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನರ್ಮದಾ ಕಾಲುವೆಗೆ 23,844 ಕ್ಯೂಸೆಕ್‌ಗಳನ್ನು ಬಿಡಲಾಗುತ್ತಿದೆ. ಪ್ರಸ್ತುತ ನೀರಿನ ಮಟ್ಟವು 392.22 ಅಡಿಗಳಷ್ಟಿದೆ.
ಜೊತೆಗೆ ವಿದ್ಯುತ್ ಸಮಸ್ಯೆಯೂ ಎದುರಾಗಿದೆ. 13,285 ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಾಗಿದ್ದು, ಈ ಪೈಕಿ 13,209 ಗ್ರಾಮಗಳಲ್ಲಿ ಸಮಸ್ಯೆ ಪರಿಹರಿಸಲಾಗಿದೆ. 17,005 ಹಾನಿಗೊಳಗಾದ ವಿದ್ಯುತ್ ಕಂಬಗಳಲ್ಲಿ 16,031 ದುರಸ್ತಿ ಮಾಡಲಾಗಿದೆ. ಆದರೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದೆ.
