- ‘ಮೋದಿ, ಶಾ ಅವರು ರಾಜ್ಯ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಕರೆಯುತ್ತಿಲ್ಲ’
- ರಾಜ್ಯ ಬಿಜೆಪಿ ನಾಯಕರನ್ನು ಹೈಕಮಾಂಡ್ ತಿರಸ್ಕರಿಸಿದೆ: ಆರ್ ಬಿ ತಿಮ್ಮಾಪುರ
ರಾಜ್ಯ ಬಿಜೆಪಿ ನಾಯಕರು ತಮ್ಮನ್ನು ಕರೆದು ವಿರೋಧ ಪಕ್ಷದ ನಾಯಕನನ್ನಾಗಿ ಮಾಡುತ್ತಾರೆ ಎಂದು ಭಾವಿಸಿ ಮೋದಿ, ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮೆಚ್ಚಿಸಲು ಹಾದಿ ಬೀದಿಗಳಲ್ಲಿ ಕಿರುಚಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವ್ಯಂಗ್ಯವಾಡಿದರು.
ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಆದರೆ ಮೋದಿ ಮತ್ತು ಶಾ ಅವರು ರಾಜ್ಯ ಬಿಜೆಪಿ ನಾಯಕರನ್ನು ಒಳಗೂ ಕರೆಯುತ್ತಿಲ್ಲ. ಗೃಹ ಸಚಿವ ಅಮಿತ್ ಶಾ ಒಳಗೆ ಕರಿಯುತ್ತಿಲ್ಲ. ಇದರ ಅರ್ಥ ರಾಜ್ಯ ಬಿಜೆಪಿ ನಾಯಕರನ್ನೇ ಹೈಕಮಾಂಡ್ ತಿರಸ್ಕರಿಸಿದೆ” ಎಂದರು.
“ಬಿಜೆಪಿ ಹೈಕಮಾಂಡ್ ಈವರೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ರಾಜ್ಯ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಹೈಕಮಾಂಡ್ ಬಿಟ್ಟುಕೊಂಡಿಲ್ಲ. ಇದರಿಂದ ರಾಜ್ಯ ಬಿಜೆಪಿ ನಾಯಕರು ಗಾಬರಿಗೊಂಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಮಣಿಪುರ ಗಲಭೆ; ಸರ್ಕಾರಗಳು ಮತ್ತು ಕೋರ್ಟುಗಳು ವಿವೇಚನೆ ಕಳೆದುಕೊಂಡವೇ?
ಮೋದಿ ಅತ್ಯಂತ ಕೆಟ್ಟ ಪ್ರಧಾನಿ
“ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ ಮಣಿಪುರದಲ್ಲಿ ನಡೆಯಿತು. ಇದು ಅತ್ಯಂತ ನೋವಿನ ಘಟನೆ. ಇಂತಹ ಪೈಶಾಚಿಕ ಕೃತ್ಯವನ್ನು ಖಂಡಿಸುತ್ತೇನೆ. ಇಂತಹ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏನು ಕ್ರಮಕೈಗೊಂಡಿದ್ದಾರೆ? ಇಂತಹ ಪ್ರಧಾನಿ ಇದ್ದರೆ ಬಡವರು, ಹಿಂದುಳಿದವರು ಬದುಕುವುದು ಹೇಗೆ? ಅವಮಾನಕ್ಕೀಡಾದ ಸಂತ್ರಸ್ತೆಗೆ ಸಾಂತ್ವನದ ಮಾತುಗಳು ಸಹ ಹೇಳಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಮೋದಿ ನಾನು ಕಂಡ ಅತ್ಯಂತ ಕೆಟ್ಟ ಪ್ರಧಾನಿ” ಎಂದರು.
ಮೊಸರಿನ ಮೇಲೆ ಜಿಎಸ್‌ಟಿ
ಹಾಲಿನ ದರ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಅಭಿವೃದ್ದಿಗಾಗಿ ತೆರಿಗೆ ಹಾಕುವುದು, ಜನಸಾಮಾನ್ಯರ ತೆರಿಗೆಯಿಂದ ಅಭಿವೃದ್ಧಿ ಕೆಲಸ ಮಾಡುವುದು ನಡೆಯುತ್ತಿರುತ್ತದೆ. ಈ ಹಿಂದೆ ಕೇಂದ್ರ ಸರ್ಕಾರ ಮೊಸರಿನ ಮೇಲೆ ಜಿಎಸ್‌ಟಿ ಹಾಕಿತ್ತಲ್ಲ. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸಲಿ, ಆಮೇಲೆ ನಾವು ಹಾಲಿನ ದರ ಏರಿಕೆಗೆ ಉತ್ತರಿಸುತ್ತೇವೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಮೋದಿ ಸರ್ಕಾರ” ಎಂದು ಹರಿಹಾಯ್ದರು.