ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಸಂಗೀತದಲ್ಲಿ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದು, ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ʼಮತ್ತೆ ಮೊದಲಿಂದʼ ಆಲ್ಬಂ ಬಿಡುಗಡೆಯಾಗಿದೆ.
ಶ್ರೀನಿಧಿ ಹಾಗೂ ಪ್ರಸನ್ನ ನಿರ್ಮಿಸಿರುವ, ಕರಾವಳಿ ಮೂಲದ ಹೊಸ ಪ್ರತಿಭೆ ಸಂಜನ್ ಕಜೆ ನಾಯಕನಾಗಿ, ನಿಧಿ ಸುಬ್ಬಯ್ಯ, ಅಮೀತ ಎಸ್ ಕುಲಾಲ್, ದೇವಿಕಾ ಶಿಂಧೆ ಹಾಗೂ ಅಂಜಲಿ ಗೌಡ ನಾಯಕಿಯರಾಗಿ ನಟಿಸಿರುವ ಗೀತಗುಚ್ಛದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ.
ನಾಲ್ಕು ಬಣ್ಣಗಳನ್ನು ಪ್ರತಿನಿಧಿಸುವ ಅಚ್ಚ ಕನ್ನಡ ಹಾಡುಗಳ ಈ ಆಲ್ಬಂನ ಮೊದಲ ಹಾಡು “ಮೋಹದ ಬಣ್ಣ ನೀಲಿ” ಬಿಡುಗಡೆಯಾಗಿದ್ದು, ಭಟ್ಟರ ಸಾಹಿತ್ಯಕ್ಕೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಅನಿರುದ್ಧ್ ಶಾಸ್ತ್ರಿ ಸಂಗೀತ ನೀಡಿದ್ದಾರೆ.
ಶೀರ್ಷಿಕೆ ಪರಿಚಯಿಸಿದ ಯೋಗರಾಜ್ ಭಟ್, “ಈ ಆಲ್ಬಂನಲ್ಲಿ ನಾಲ್ಕು ಗೀತೆಗಳಿದ್ದು, ನಾಲ್ಕು ಸಂಗೀತ ನಿರ್ದೇಶಕರು, ನಾಲ್ಕು ಗಾಯಕರು, ನಾಲ್ಕು ನಾಯಕಿಯರು ಇರುವುದು ವಿಶೇಷ. ಜೊತೆಗೆ ನವ ಪ್ರತಿಭೆ ಸಂಜನ್ ಕಜೆ ಹೆಸರಿನ ಅಪ್ಪಟ ಕನ್ನಡದ ಕರಾವಳಿ ಮೂಲದ ಯುವ ಪ್ರತಿಭಾನ್ವಿತ ನಟನನ್ನು ಪರಿಚಯಿಸಲಾಗುತ್ತಿದೆ” ಎಂದರು.
ನಾಲ್ಕೂ ಗೀತೆಗಳಿಗೆ ಭಟ್ರ ಸಾಹಿತ್ಯ ಮತ್ತು ನಿರ್ದೇಶನ ಇದ್ದು ಸಂಗೀತ ನಿರ್ದೇಶಕರಾಗಿ ಮನೋ ಮೂರ್ತಿ, ವಿ. ಹರಿಕೃಷ್ಣ, ಚೇತನ್-ಡ್ಯಾವಿ, ಅನಿರುದ್ಧ ಶಾಸ್ತ್ರಿ ಇದ್ದಾರೆ. ವಿಜಯ ಪ್ರಕಾಶ್, ಚೇತನ್ ಸೋಸ್ಕ, ವಾಸುಕಿ ವೈಭವ್, ಅದಿತಿ ಖಂಡೇಗಲ ರವರ ಗಾಯನ ಇದೆ. ನಾಲ್ಕು ಗೀತೆಗಳ ವಿಡಿಯೋದಲ್ಲಿ ಸಂಜನ್ ಕಜೆ ಜೊತೆ ನಿಧಿ ಸುಬ್ಬಯ್ಯ, ಅಮೀತ ಎಸ್. ಕುಲಾಲ್, ದೇವಿಕಾ ಶಿಂಧೆ, ಅಂಜಲಿ ಗೌಡ ನಾಯಕಿಯರಾಗಿ ಜೊತೆಯಾಗಿದ್ದಾರೆ.
ಇದನ್ನೂ ಓದಿ: 30 ವರ್ಷಗಳ ನಂತರ ಮತ್ತೆ ಒಂದಾದ ರಜನಿ-ಮೋಹನ್ ಬಾಬು; ʼಕಣ್ಣಪ್ಪʼನ ಮೆಚ್ಚಿದ ಸೂಪರ್ ಸ್ಟಾರ್
ಖ್ಯಾತ ಲೇಖಕ, ಇತಿಹಾಸ ತಜ್ಞರೂ ಆದ ಧರ್ಮೇಂದ್ರ ಕುಮಾರ್ ಆರೇನಹಳ್ಳಿ ಅವರು ಮೊದಲ ಗೀತೆ ʼನಿನ್ನ ಕಣ್ಣು ನೀಲಿʼ (ಮೋಹದ ಬಣ್ಣ ನೀಲಿ) ಹಾಡನ್ನು ಪಂಚರಂಗಿ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿ, “ಸುಗಮ ಸಂಗೀತ, ಭಾವಗೀತೆಗಳು ವಿರಳವಾಗಿರುವ ಈ ಸಂದರ್ಭದಲ್ಲಿ ಇದೊಂದು ಶ್ಲಾಘನೀಯ ಪ್ರಯತ್ನ” ಎಂದು ಯೋಗರಾಜ್ ಭಟ್ಟರನ್ನು ಪ್ರಶಂಶಿಸಿದರು. “ತಮ್ಮ ಬಾಲ್ಯದ ದಿನಗಳಲ್ಲಿ ಮೈಸೂರು ಅನಂತಸ್ವಾಮಿಯವರ ಗೀತೆಗಳನ್ನು ಮೈಸೂರಿನಲ್ಲಿ ಕೇಳುತ್ತಿದ್ದದ್ದನ್ನು ನೆನಪು ಮಾಡಿಕೊಳ್ಳುತ್ತಾ ಭಾವಗೀತೆಗಳು ಕನ್ನಡ ನೆಲದ ಸೊಗಡು, ಇದನ್ನು ಉಳಿಸಿ ಬೆಳಸುವುದು ಸಾಹಿತಿಗಳ ಕರ್ತವ್ಯ. ಬಹಳ ವರ್ಷಗಳ ನಂತರ ಅದೇ ರೀತಿಯ ಗೀತೆಯನ್ನು ಕೇಳಿ ತುಂಬಾ ಸಂತೋಷವಾಯಿತು” ಎನ್ನುತ್ತಾ ಈ ಗೀತೆಯನ್ನು ಮಾಧುರ್ಯವಾಗಿ ಹಾಡಿದ ವಿಜಯ ಪ್ರಕಾಶ್ ರವರನ್ನು ಪ್ರಶಂಶಿಸುತ್ತಲೇ ಅಭಿನಂದಿಸಿದರು.
ವಿಜಯ ಪ್ರಕಾಶ್ ರವರು ಮಾತನಾಡಿ, ಈ ಗೀತೆಯನ್ನು ಹಾಡಲು ಚಿತ್ರಗೀತೆಗಳಿಗಿಂತ ಹೆಚ್ಚು ಮುತುವರ್ಜಿ ವಹಿಸಿದ್ದಾಗಿ ಹೇಳುತ್ತಾ, ರೇಕಾರ್ಡಿಂಗ್‌ಗೆ ಬಂದರೂ ಹಾಡದೆ ಗೀತೆಯನ್ನು ಗಂಟೆಗಟ್ಟಲೆ ಕೇಳಿ ಮರುದಿನ ಬಂದು ಹಾಡಿದ್ದಾಗಿ ಹೇಳಿದರು. ಅದಕ್ಕೆ ಕಾರಣ ಈ ಗೀತೆಯಲ್ಲಿನ ವಿಶೇಷತೆ ಮತ್ತು ಸಾಹಿತ್ಯ ಸಾಲುಗಳಲ್ಲಿರುವ ಸೂಕ್ಷ್ಮತೆ. ಹಾಗೂ ಭಾವಗೀತೆಗಳ ಬಗ್ಗೆ ತಮಗಿರುವ ಅಪಾರ ಗೌರವ, ಪ್ರೀತಿ, ಭಟ್ಟರ ಜೊತೆಗಿನ ಸ್ನೇಹ ಎಲ್ಲವೂ ಸೇರಿ ಗೀತೆಯನ್ನು ಎದೆ ತುಂಬಿ ಮನಸಾರೆ ಹಾಡಿದ್ದಾಗಿ ಹೇಳಿದರು.
ಈ ಗೀತೆಯ ಸಂಗೀತ ನಿರ್ದೇಶಕ ಅನಿರುದ್ಧ ಶಾಸ್ತ್ರಿ ಮಾತನಾಡಿ, “ಯೋಗರಾಜ್ ಭಟ್ಟರ ಜೊತೆಗಿನ ಸಾಂಗತ್ಯದಲ್ಲಿ ಇದು ನನ್ನ ಚೊಚ್ಚಲ ಸಂಗೀತ ಸಂಯೋಜನೆ. ಇದು ನನಗೆ ತುಂಬಾ ಖುಷಿಕೊಟ್ಟಿದೆ. ಹಿರಿಯ ಮತ್ತು ಖ್ಯಾತ ಸಂಗೀತ ನಿರ್ದೇಶಕರುಗಳ ಸಂಗೀತ ಸಂಯೋಜನೆ ಈ ಆಲ್ಬಂನಲ್ಲಿದ್ದದ್ದು ನನಗೆ ಸವಾಲಿನ ವಿಷಯವಾಗಿತ್ತು ಅದನ್ನು ಸಮರ್ಪಕವಾಗಿ ನಿಭಾಹಿಸಲು ಅವರ ಮತ್ತು ಯೋಗರಾಜ್ ಸರ್ ರವರ ಸಹಕಾರ ಕಾರಣ” ಎಂದು ಎಲ್ಲರನ್ನೂ ಸ್ಮರಿಸುತ್ತಾ ಧನ್ಯವಾದ ಹೇಳಿದರು.
ಇನ್ನು ನಾಯಕ ನಟ ಸಂಜನ್ ಕಜೆ ಮಾತನಾಡಿ, “ನಟನಾ ಕ್ಷೇತ್ರಕ್ಕೆ ನನ್ನನ್ನು ಪರಿಚಯಿಸುತ್ತಿರುವ ಯೋಗರಾಜ್ ಭಟ್ ಸರ್ ರವರಿಗೆ ಅನಂತಾನಂತ ಧನ್ಯವಾದಗಳನ್ನು ಹೇಳಿ ಇಷ್ಟು ದೊಡ್ಡ ವೇದಿಕೆಯನ್ನು ಸೃಷ್ಠಿಸಿಕೊಟ್ಟಿದ್ದಕ್ಕೆ ಸದಾ ಚಿರರುಣಿಯಾಗಿರುತ್ತೇನೆ ಮುಂದೆ ಸಿನಿಮಾ ಕ್ಷೇತ್ರದಲ್ಲಿ ಯೋಗರಾಜ್ ಭಟ್ಟರ ಮಾರ್ಗದರ್ಶನದೊಂದಿದೆ ಪ್ರಾಮಾಣಿಕವಾಗಿ ಉತ್ತಮ ನಟನಾಗಿ ಸಿನಿ ಪ್ರಿಯರ ಮುಂದೆ ಬರುತ್ತೇನೆ, ಎಲ್ಲಾ ಸಿನಿ ರಸಿಕರ ಆಶೀರ್ವಾದ ಕೋರುತ್ತೇನೆ” ಎಂದು ಹೇಳಿ ಆಲ್ಬಂನ ಎಲ್ಲಾ ಸಂಗೀತ ನಿರ್ದೇಶಕರನ್ನು, ಗಾಯಕರನ್ನು ಸ್ಮರಿಸಿ ಧನ್ಯವಾದ ಹೇಳಿದರು.
ಇದನ್ನೂ ಓದಿ: ನಟಿ ರಚಿತಾ ರಾಮ್ ವಿರುದ್ಧ ಕಠಿಣ ಕ್ರಮಕ್ಕೆ ನಿರ್ದೇಶಕ ನಾಗಶೇಖರ್ ಒತ್ತಾಯ
ಯೋಗರಾಜ್ ಭಟ್, ಶ್ರೀನಿಧಿ, ಪ್ರಸನ್ನ ರವರು ಮತ್ತೆ ಮೊದಲಿಂದ ಆಲ್ಬಂನ ನಿರ್ಮಾಪರಾಗಿದ್ದಾರೆ.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನುಳಿದ ಮೂರು ಗೀತೆಯನ್ನು ಪಂಚರಂಗಿ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲೇ ಬಿಡುಗಡೆ ಮಾಡುವುದಾಗಿ ತಂಡ ಹೇಳಿಕೊಂಡಿದೆ.
ಭಟ್ಟರಿಗೆ ಸಹಾಯಕರಾಗಿ ನಿರ್ದೇಶನ ವಿಭಾಗ ಮತ್ತು ಆಲ್ಬಂ ಚಿತ್ರೀಕರಣದ ಮೇಲ್ವಿಚಾರಣೆಯನ್ನು ಸಮರ್ಪಕವಾಗಿ ನಿಭಾಹಿಸಿದ ಗಡ್ಡ ವಿಜಿ, ಅಮೋಲ್ ಪಾಟೀಲರನ್ನು ತುಂಬು ಹೃದಯದಿಂದ ಸ್ಮರಿಸಿದರು.