ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೂತನ ಕಾರ್ಯದರ್ಶಿಯಾಗಿ 2014ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ನಳಿನ್ ಅತುಲ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಕೆಕೆಆರ್‌ಡಿಬಿ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಎಂ.ಸುಂದರೇಶ ಬಾಬು ಅವರನ್ನು ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆ ಮಾಡಿದ್ದರಿಂದ ತೆರವಾದ ಸ್ಥಾನಕ್ಕೆ ನಲಿನ್ ಅತುಲ್ ಅವರನ್ನು ಸರ್ಕಾರ ಇತ್ತೀಚೆಗೆ ವರ್ಗಾಯಿಸಿತ್ತು.
ಮೂಲತಃ ಬಿಹಾರ್ ರಾಜ್ಯದವರಾದ ನಳಿನ್ ಅತುಲ್ ಬಿ.ಟೆಕ್ ಪದವೀಧರರು. ರಾಯಚೂರು ಜಿ.ಪಂ. ಸಿಇಒ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಖ್ಯಸ್ಥ, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಕಲಬುರಗಿಯಲ್ಲಿ 2019ರ ಅ.22ರಿಂದ 2022ರ ಜ.27ರವರೆಗೆ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.
ʼಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಸರ್ವ ಸದಸ್ಯರ ಸಲಹೆ ಹಾಗೂ ಪ್ರದೇಶದ ಏಳು ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗಳ ಅಭಿಪ್ರಾಯ ಪಡೆದು ರಾಜ್ಯ ಸರ್ಕಾರ ಮಂಡಳಿಗೆ ಒದಗಿಸಿರುವ ಅನುದಾನವನ್ನು ಪ್ರದೇಶದ ಒಳಿತಿಗೆ ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆʼ ಎಂದು ನಳಿನ್ ಅತುಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಕಲಬುರಗಿ | ಕರ್ತವ್ಯ ಲೋಪ ಆರೋಪ : ಪ್ರಭಾರ ಮುಖ್ಯಶಿಕ್ಷಕ ಅಮಾನತು
ಈ ಸಂದರ್ಭದಲ್ಲಿ ಮಂಡಳಿ ಉಪ ಕಾರ್ಯದರ್ಶಿ ಮಂಜುನಾಥ ಸ್ವಾಮಿ ಜಿ.ಎನ್., ಹೆಚ್ಚುವರಿ ನಿರ್ದೇಶಕಿ ಪ್ರವೀಣಪ್ರಿಯಾ ಡೇವಿಡ್, ಅಧೀಕ್ಷಕ ಎಂಜಿನಿಯರ್ ವಿಜಯಕುಮಾರ ಪಾಟೀಲ, ಅಕ್ಕನಾಗಮ್ಮ, ಪ್ರಕಾಶ ಕುದರಿ ಸೇರಿದಂತೆ ಹಲವರಿದ್ದರು.