ಮೀಸಲಾತಿ, ಸಮಾನತೆ, ಸಬಲೀಕರಣದತ್ತ ಮಹಿಳೆಯರು ದೃಢವಾದ ಹೆಜ್ಜೆ ಇಡಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಸ್ವರ್ಣ ಭಟ್ ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾ ಸಮ್ಮೇಳನದ ಸಿದ್ದತೆಯ ಪ್ರಯುಕ್ತ ಮಂಗಳೂರಿನ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾಗತ ಸಮಿತಿಯ ರಚನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ಐವತ್ತರಷ್ಟು ಅವಕಾಶ ದೂರದ ಕನಸಾಗಿಯೇ ಉಳಿದಿದೆ. ಇನ್ನು ಸ್ಥಳೀಯ ಸಂಸ್ಥೆಗಳಲ್ಲಿ ದೊರಕುತ್ತಿರುವ ಅವಕಾಶದ ಸ್ಥಿತಿಗತಿ ಎಲ್ಲರಿಗೂ ತಿಳಿದಿದೆ. ಮುಂದುವರಿದಿರುವ ಕರಾವಳಿ ಜಿಲ್ಲೆಗಳಲ್ಲಿಯೂ ಹೆಣ್ಣುಮಕ್ಕಳಿಗೆ ಸರಿಯಾದ ಪ್ರಾತಿನಿಧ್ಯ ದೊರಕದಿರುವುದು ವಿಷಾದನೀಯ. ಅನೈತಿಕ ಪೊಲೀಸ್ ಗಿರಿ, ಮತೀಯ ರಾಜಕರಾಣದ ಮೇಲಾಟಗಳಲ್ಲಿಯೂ ಇಲ್ಲಿ ಮಹಿಳೆಯೇ ಬಲಿಪಶು. ಇಲ್ಲಿ ಹೆಣ್ಣುಮಕ್ಕಳು ಪ್ರದರ್ಶನದ ಸರಕು ಮಾತ್ರ. ಇಂತಹ ಜಿಲ್ಲೆಯಲ್ಲಿ ಅನ್ಯಾಯ, ಅಸಮಾನತೆಯ ವಿರುದ್ದ ಧ್ವನಿ ಎತ್ತಬಲ್ಲ ಸ್ವಾಭಿಮಾನಿ ಮಹಿಳಾ ಚಳವಳಿ ಕಟ್ಟುವ ಕಡೆಗೆ ನಾವು ಮುನ್ನಡೆಯಬೇಕು” ಎಂದು ಹೇಳಿದರು.
JMS ಹಿರಿಯ ನಾಯಕಿ ಪದ್ಮಾವತಿ ಶೆಟ್ಟಿ, ಮಹಿಳಾ ಮುಖಂಡರಾದ ಮಂಜುಳಾ ನಾಯಕ್, ಗ್ರೇಟ್ಟಾ ಟೀಚರ್, ಪ್ಲೇವಿ ಕ್ರಾಸ್ತಾ ಅತ್ತಾವರ, ಪೌಲಿ, ಪ್ರಮೀಳಾ ಶಕ್ತಿನಗರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಜಯಂತಿ ಬಿ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ವಕೀಲರಾದ ಶಾಲಿನಿ, JMS ನಾಯಕಿ ಭಾರತಿ ಬೋಳಾರ ಉಪಸ್ಥಿತರಿದ್ದರು. ಸಭೆಯಲ್ಲಿ ಮಹಿಳಾಪರ ಚಿಂತಕರಾದ ಅರ್ಚನಾ ರಾಮಚಂದ್ರ, ಮರ್ಲಿನ್ ರೇಗೋ, ಬದ್ರುನ್ನೀಸಾ, ಉಮೈನಾ, ಪ್ರಮೋದಿನಿ ಕಲ್ಲಾಪು, ಜಯಲಕ್ಷ್ಮಿ, ಆಶಾ ಸಂಜೀವನಾ, ದೀಷಾ ರೀಟಾ ಪುರ್ತಾಡೋ, ಚಂದ್ರಿಕಾ, ಚಿತ್ರಲೇಖಾ, ವೀಣಾ ಸಂತೋಷ್, ಹೇಮಾ ಪಚ್ಚನಾಡಿ, ಮಾಲತಿ ತೊಕ್ಕೋಟು, ಪೂರ್ವಿ ಶೆಟ್ಟಿ, ಗೌತಮಿ, ವೈಲೆಟ್, ಸ್ವಾತಿ ಮನೋಜ್ ವಾಮಂಜೂರು, ಮಾನಸ, ಗುಣವತಿ ಕಿನ್ಯಾ ಮುಂತಾದವರು ಭಾಗವಹಿಸಿದ್ದರು.
ಇದನ್ನೂ ಓದಿ: ದಕ್ಷಿಣ ಕನ್ನಡ | ಅಕ್ರಮವಾಗಿ ಮರ ಕಡಿದು ಸಾಗಾಟಕ್ಕೆ ಯತ್ನ; ಮೂವರ ಬಂಧನ
ಜುಲೈ 27ರಂದು ನಡೆಯಲಿರುವ ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಹಿರಿಯ ರಂಗ ಕಲಾವಿದೆ ಗೀತಾ ಸುರತ್ಕಲ್, ಅಧ್ಯಕ್ಷರಾಗಿ ಪ್ಲೇವಿಕ್ರಾಸ್ತಾ ಅತ್ತಾವರ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತಿ ಬಿ ಶೆಟ್ಟಿ, ಖಜಾಂಚಿಯಾಗಿ ಅಸುಂತ ಡಿಸೋಜರವರನ್ನು ಆಯ್ಕೆಗೊಳಿಸಲಾಯಿತು. ಉಪಾಧ್ಯಕ್ಷರುಗಳಾಗಿ ಚಂದ್ರಕಲಾ ನಂದಾವರ, ಬಿ ಎಂ ರೋಹಿಣಿ, ಗುಲಾಬಿ ಬಿಳಿಮಲೆ, ಶಾಲಿನಿ, ಧನವಂತಿ ನೀರುಮಾರ್ಗ ಮಂಜುಳಾ ನಾಯಕ್ ಸೇರಿದಂತೆ ಸುಮಾರು 75 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು.