ಕಂದಾಯ ಇಲಾಖೆಯಲ್ಲಿ ಸುಧಾರಣೆಗಳು ಬರಲಿ, ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮಗಳಾಗಲಿ, ಜನ ಸಾಮಾನ್ಯರ ಕೆಲಸಗಳು ತ್ವರಿತವಾಗಿ, ಪಾರದರ್ಶಕವಾಗಿ ಆಗುವಂತಾಗಲಿ. ಹಾಗೆಯೇ ಕಾಂಗ್ರೆಸ್ ಸರ್ಕಾರದಲ್ಲಿರುವ ಸೋಮಾರಿ ಸಚಿವರಿಗೆ ಕೃಷ್ಣ ಬೈರೇಗೌಡರ ಕ್ರಮ ಪ್ರೇರಣೆಯಾಗಲಿ.
ದೇಶಕ್ಕೆ ಅಂಟಿಕೊಂಡಿರುವ ಪ್ರಮುಖ ಸಮಸ್ಯೆಗಳಲ್ಲಿ ಭ್ರಷ್ಟಾಚಾರವೂ ಒಂದು. 2014ರಲ್ಲಿ ‘ನಾ ಖಾವೂಂಗಾ – ನಾ ಖಾನೇ ದೂಂಗಾ’ (ನಾನು ತಿನ್ನಲ್ಲ – ತಿನ್ನೋಕು ಬಿಡಲ್ಲ) ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಅವರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಬದಲಾಗಿ, ಮೋದಿ ಅವರ ಆಡಳಿತದಲ್ಲೂ ರಫೇಲ್ ಒಪ್ಪಂದ ಮತ್ತು ಚುನಾವಣಾ ಬಾಂಡ್‌ನಂತಹ ಬೃಹತ್ ಭ್ರಷ್ಟಾಚಾರ ಹಗರಣಗಳು ನಡೆದಿವೆ ಎಂಬ ಆರೋಪಗಳಿವೆ. ಭ್ರಷ್ಟಾಚಾರವು ರಾಜಕಾರಣಿಗಳಿಗೆ ಮಾತ್ರವಲ್ಲ, ಅದಕ್ಕೂ ಮಿಗಿಲಾಗಿ ಅಧಿಕಾರಿಗಳಲ್ಲಿ ಬೇರೂರಿದೆ. ಎಲ್ಲೆಡೆ ಲಂಚವಿಲ್ಲದೆ ಕೆಲಸವಾಗದು ಎಂಬ ಅಘೋಷಿತ ನೀತಿ ಜಾರಿಯಲ್ಲಿದೆ.
ಅಧಿಕಾರಿಗಳ ಈ ಲಂಚಾವತಾರದ ವಿರುದ್ಧ ಸಚಿವರೊಬ್ಬರು ಆಕ್ರೋಶಗೊಂಡು, ತರಾಟೆಗೆ ತೆಗೆದುಕೊಂಡಿರುವ ಘಟನೆ ಕರ್ನಾಟಕದಲ್ಲಿ ನಡೆದಿದೆ. ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ, ಬೆಂಗಳೂರು ದಕ್ಷಿಣ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಲಂಚದ ಆರೋಪಗಳು ಕೇಳಿಬಂದ ಹಿನ್ನೆಲೆ, ಅಧಿಕಾರಿಗಳನ್ನು ಅವರು ತರಾಟೆಗೂ ತೆಗೆದುಕೊಂಡರು. ‘ಯಾವ ಕೆಲಸಕ್ಕೆ ಎಷ್ಟು ಲಂಚ ಕೊಡಬೇಕೆಂದು ರೇಟ್ ಕಾರ್ಡ್ ಬೋರ್ಡ್ ಹಾಕಿಬಿಡಿ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕೃಷ್ಣ ಬೈರೇಗೌಡದ ಆಕ್ರೋಶದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನ ಹುಟ್ಟುಹಾಕಿದೆ. ಅವರ ಹೇಳಿಕೆಗೆ ಮೆಚ್ಚಿರುವ ಹಲವರು, ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಂದಾಯ ಇಲಾಖೆಯ ಸಮಸ್ಯೆಗಳು, ಲಂಚ ಸಂಸ್ಕೃತಿ ಹಾಗೂ ಸುಧಾರಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಂದಹಾಗೆ, ಕಂದಾಯ ಇಲಾಖೆಯು ರಾಜ್ಯ ಸರ್ಕಾರದ ಬೆನ್ನೆಲುಬು. ಭೂಮಿ, ಆಸ್ತಿ ಹಾಗೂ ಕೃಷಿ ಸಂಬಂಧಿತ ಸೇವೆಗಳನ್ನು ಒದಗಿಸುವಲ್ಲಿ ಕಂದಾಯ ಇಲಾಖೆಯದ್ದೇ ಪ್ರಮುಖ ಪಾತ್ರ. ಆದರೆ, ಈ ಇಲಾಖೆ ದೀರ್ಘಕಾಲದಿಂದ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಲೇ ಇದೆ. ರೈತರು ಅಥವಾ ಸಾಮಾನ್ಯ ಜನರು ತಮಗೆ ಅಗತ್ಯವಿರುವ ಭೂ ದಾಖಲೆಗಳು, ಆರ್‌ಟಿಸಿ (RTC) ತಿದ್ದುಪಡಿ ಅಥವಾ ಇನ್ನಾವುದೇ ಸೇವೆಗಳನ್ನು ಪಡೆಯಬೇಕೆಂದರೂ ಲಂಚ ಕೊಡಲೇಬೇಕೆಂಬ ಆರೋಪಗಳಿವೆ. ತಮ್ಮ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂಬ ಆರೋಪ ರಾಜ್ಯದ ಯಾವುದೇ ಮೂಲೆಗೆ ಹೋದರು ಕೇಳಿಬರುವ ಸಾಮಾನ್ಯ ದೂರು.
ಸದ್ಯಕ್ಕೆ, ಕಂದಾಯ ಇಲಾಖೆಯಲ್ಲಿ ಕಡತಗಳ ಡಿಜಿಟಲೀಕರಣ ಬಹುದೊಡ್ಡ ಸವಾಲಾಗಿದೆ. ಎಲ್ಲ ರೀತಿಯ ಕಡತಗಳನ್ನು ಡಿಜಿಟಲೀಕರಣ ಮಾಡಲು ಸರ್ಕಾರವು ವಿಧಿಸಿದ್ದ ಗಡುವು ಮುಗಿದಿದ್ದರೂ, ಹಲವಾರು ತಾಲೂಕು ಕಚೇರಿಗಳಲ್ಲಿ ಇನ್ನೂ ಡಿಜಿಟಲೀಕರಣ ಪ್ರಕ್ರಿಯೆ ಮುಗಿದಿಲ್ಲ. ಕಡತಗಳು ಡಿಜಿಟಲೀಕರಣಗೊಂಡರೆ, ಅಧಿಕಾರಿಗಳ ಲಂಚಕ್ಕೆ ಕೊಂಚ ಬ್ರೇಕ್ ಬೀಳುತ್ತದೆ ಎಂಬುದು ಕಂದಾಯ ಇಲಾಖೆಯ ಆಶಯ. ಆದರೆ, ಅಧಿಕಾರಿಗಳು ಈ ಪ್ರಕ್ರಿಯೆಯನ್ನೇ ನಿಧಾನಗೊಳಿಸಿದ್ದಾರೆ.
ಮಾತ್ರವಲ್ಲದೆ, ಇಲಾಖೆಯಲ್ಲಿ ಪಾರದರ್ಶಕತೆಯ ಕೊರತೆಯೂ ಇದೆ. ಜನರಿಗೆ ಸೇವೆಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯದ ಕಾರಣ, ಮಧ್ಯವರ್ತಿಗಳ ಮೊರೆ ಹೋಗುವಂತಾಗಿದೆ. ಇದು, ಭಾರೀ ಲಂಚಕ್ಕೆ ಎಡೆ ಮಾಡಿಕೊಡುತ್ತಿದೆ. ಮಾತ್ರವಲ್ಲ, ಅಧಿಕಾರಿಗಳಿಗೆ ಕಾನೂನು, ಕಠಿಣ ಕ್ರಮಗಳ ಕುರಿತಾದ ಭಯವೂ ಇಲ್ಲದಂತಾಗಿದೆ.
ಇಂತಹ ಸಂದರ್ಭದಲ್ಲಿ, ಬೆಂಗಳೂರು ದಕ್ಷಿಣ ತಾಲೂಕು ಕಚೇರಿಗೆ ತೆರಳಿದ್ದ ಸಚಿವ ಕೃಷ್ಣ ಬೈರೇಗೌಡ, ಅಧಿಕಾರಿಗಳ ಹಾಜರಾತಿ ಪುಸ್ತಕ, ಕಾರ್ಯ ಚಟುವಟಿಕೆಗಳ ರಿಜಿಸ್ಟರ್‌ಗಳನ್ನು ಪರಿಶೀಲಿಸಿದರು. ಆ ವೇಳೆ, ಗೈರುಹಾಜರಾಗಿದ್ದ ಸಿಬ್ಬಂದಿಯ ಹಾಜರಾತಿಯನ್ನು ಬೇರೊಬ್ಬರು ದಾಖಲಿಸಿರುವುದನ್ನು ಅವರು ಕಂಡುಹಿಡಿದರು. ಇದು ಇಲಾಖೆಯ ಕಾರ್ಯನಿರ್ವಹಣೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸಿತು.
ಸಿಬ್ಬಂದಿಗಳ ಕಳ್ಳಾಟದಿಂದ ಆಕ್ರೋಶಗೊಂಡ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳು ಹೊಂದಿರುವ ನಿರ್ಲಕ್ಷ್ಯ, ಬೇಜವಾಬ್ದಾರಿತನ, ಕಡತಗಳ ವಿಲೇವಾರಿಯಲ್ಲಿ ವಿಳಂಬ, ಸಿಬ್ಬಂದಿಗಳ ಗೈರುಹಾಜರಿ ಹಾಗೂ ಲಂಚದ ಆರೋಪಗಳ ಬಗ್ಗೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಕಚೇರಿಯಲ್ಲಿ ಸಾರ್ವಜನಿಕರು ಅಧಿಕಾರಿಗಳ ಲಂಚಕೋರ ಧೋರಣೆಯ ಬಗ್ಗೆ ಆರೋಪಿಸಿದರು. ಎಲ್ಲವನ್ನು ಗಮನಿಸಿ, ಆಲಿಸಿದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಲಸವಾರು ಲಂಚದ ‘ರೇಟ್ ಕಾರ್ಡ್ ಬೋರ್ಡ್’ಅನ್ನು ಕಚೇರಿಯಲ್ಲಿ ಹಾಕಿಬಿಡಿ ಎಂದು ಆಕ್ರೋಶದಿಂದ ಮಾತನಾಡಿದರು.
ಸಚಿವರ ಆಕ್ರೋಶವು ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಂತೆ ಕಾಣಿಸುತ್ತಿದೆ. ಕೃಷ್ಣ ಬೈರೇಗೌಡರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ‘ರೇಟ್ ಕಾರ್ಡ್’ ಹೇಳಿಕೆಯು ಧೈರ್ಯದ ಕ್ರಮವಾಗಿದೆ, ಸಚಿವರು ಭ್ರಷ್ಟಾಚಾರವನ್ನು ಎದುರಿಸಲು ಇಷ್ಟು ಮನಸು ಮಾಡಿದರೂ ಸಾಕು, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಜನರ ಕೆಲಸ ಮಾಡಿಕೊಡುತ್ತಾರೆ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಅಮೆರಿಕದ ಟ್ರಂಪ್ ಎಂಬ ಹುಚ್ಚನೂ, ಇರಾನಿನ ಇಸ್ಲಾಮಿಕ್ ಖಮೇನಿಯೂ: ಏನಾಗಲಿದೆ ಮಧ್ಯ ಪ್ರಾಚ್ಯ?
ಅಧಿಕಾರಿಗಳನ್ನು ಕೃಷ್ಣ ಬೈರೇಗೌಡರು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯದ ಎಲ್ಲ ಅಧಿಕಾರಿಗಳಿಗೂ ಎಚ್ಚರಿಕೆ ಸಂದೇಶವನ್ನಂತೂ ರವಾನಿಸಿದೆ. ಇದು, ಅಧಿಕಾರಿಗಳ ಲಂಚಕೋರತನಕ್ಕೆ ಕಡಿವಾಣ ಹಾಕುವುದೇ ಎಂಬ ಪ್ರಶ್ನೆಗಳು ಕೂಡ ಮುನ್ನೆಲೆಗೆ ಬಂದಿವೆ. ಕಂದಾಯ ಇಲಾಖೆಯ ದಕ್ಷತೆಯನ್ನು ಸುಧಾರಿಸಲು ಇಂತಹ ದಿಢೀರ್ ಭೇಟಿಗಳು ಮತ್ತು ತರಾಟೆಗಳು ಆರಂಭಿಕ ಹೆಜ್ಜೆಗಳಾಗಿವೆ. ಮುಂದಿನ ದಿನಗಳಲ್ಲಿ ಗಂಭೀರ ಸುಧಾರಣೆಗಳು ನಡೆಯಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಸಚಿವರ ಈ ಆಕ್ರೋಶ-ತರಾಟೆ ತೆಗೆದುಕೊಳ್ಳುವಿಕೆಯನ್ನು ಮುಂದುವರೆಸುವುದರ ಜೊತೆಗೆ, ವ್ಯವಸ್ಥಿತ ಸುಧಾರಣೆಗಳನ್ನೂ ಕೈಗೊಂಡರೆ, ಅಧಿಕಾರಿಗಳ ಲಂಚಕ್ಕೆ ಬ್ರೇಕ್ ಹಾಕಲು ಸಾಧ್ಯವೆಂಬ ಅಭಿಪ್ರಾಯಗಳೂ ಇವೆ. ಕಾವೇರಿ 2.0 ತಂತ್ರಾಂಶದಂತಹ ಡಿಜಿಟಲ್ ವೇದಿಕೆಗಳನ್ನು ಪೂರ್ಣಪ್ರಮಾಣದಲ್ಲಿ ಅಳವಡಿಸಿಕೊಂಡು, ಕಡತ ವಿಲೇವಾರಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪಾರದರ್ಶಕವಾಗಿ ನಡೆಯುವಂತೆ ಮಾಡಬೇಕು. ಜನರಿಗೆ ಸೇವೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒದಗಿಸಬೇಕು. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು. ಲಂಚ ಸ್ವೀಕರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. ಆಗ ಮಾತ್ರವೇ ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳನ್ನು ಹತೋಟಿಗೆ ತರಲು ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು.
ಆದರೆ, ಎಲ್ಲದರಲ್ಲೂ ರಾಜಕೀಯ ಮಾಡುವ ಬಿಜೆಪಿಗರು ಕೃಷ್ಣ ಬೈರೇಗೌಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದನ್ನೂ ಟೀಕಿಸಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ಅವರು, ಸಚಿವರ ನಡೆಯನ್ನು ‘ಮನೆಹಾಳು ಕೆಲಸ’ ಎಂದಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಏನೇ ಇರಲಿ, ಕಂದಾಯ ಇಲಾಖೆಯಲ್ಲಿ ಸುಧಾರಣೆಗಳು ಬರಲಿ, ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮಗಳಾಗಲಿ, ಜನ ಸಾಮಾನ್ಯರ ಕೆಲಸಗಳು ತ್ವರಿತವಾಗಿ, ಪಾರದರ್ಶಕವಾಗಿ ಆಗುವಂತಾಗಲಿ. ಹಾಗೆಯೇ ಕಾಂಗ್ರೆಸ್ ಸರ್ಕಾರದಲ್ಲಿರುವ ಸೋಮಾರಿ ಸಚಿವರಿಗೆ ಕೃಷ್ಣ ಬೈರೇಗೌಡರ ಕ್ರಮ ಪ್ರೇರಣೆಯಾಗಲಿ.
ಕಂದಾಯ ಸಚಿವರಿಗೆ ಇಲಾಖೆಯ ಭ್ರಷ್ಟಾಚಾರ ಮೊದಲೇ ಗೊತ್ತಿರುತ್ತೆ. ಜನರ ಕಣ್ಣೋರೆಸಲು ಇ ತರ ನಾಟಕ ಮಾಡಬೇಕಾಗುತ್ತದೆ. ಆಯಾ ಇಲಾಖೆಯ ಅಧಿಕಾರಿಗಳಿಂದ ಸಚಿವರಿಗೆ ತಿಂಗಳ ಮಾಮೂಲಿ ಮೊದಲೇ ನಿಗದಿಯಾಗಿರುತ್ತದೆ. ಮಾಮೂಲಿ ಹೆಚ್ಚು ಕಮ್ಮಿಯಾದಾಗ ಮಾತ್ರ ಇ ತರಹದ ನಾಟಕ ನಡೆಯುತ್ತದೆ. ಇ ವಿಚಾರದಲ್ಲಿ ಕೃಷ್ಣ ಬೈರೇಗೌಡರು ಮೊದಲಿಗರು ಅಲ್ಲ ಕೊನೆಯವರು ಅಲ್ಲ. ಎಲ್ಲರೂ ಎಲ್ಲ ಪಕ್ಷದವರು ಒಂದೇ. ಇದರಲ್ಲಿ ಶೋಷಣೆಗೆ ಒಳಗಾಗುವರು ಜನಸಾಮಾನ್ಯರು.