ಬೀದರ ಜಿಲ್ಲೆಯಲ್ಲಿ ಜಿಲ್ಲಾ ಕಲಾ ಗ್ರಾಮವನ್ನು ಸ್ಥಾಪಿಸಲು ಬೀದರ ವಿಶ್ವವಿದ್ಯಾಲಯ ಅಥವಾ ಹಳ್ಳದಕೇರಿ ಹತ್ತಿರ ಸ್ಥಳವನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕರಿ ಶಿಲ್ಪಾ ಶರ್ಮಾ ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಲಾ ಗ್ರಾಮ ಸ್ಥಾಪಿಸಲು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ʼಜಿಲ್ಲೆಯಲ್ಲಿ ಸ್ಥಾಪಿಸಲು ಇಚ್ಛಿಸಿರುವ ಕಲಾ ಗ್ರಾಮದಲ್ಲಿ ಸಾಂಸ್ಕೃತಿಕ ಪ್ರವಾಸಿ ತಾಣ, ಜಾನಪದ ಕರಕುಶಲ, ಮಾರಾಟ ಮಳಿಗೆ, ಬಯಲು ರಂಗಮಂದಿರ, ಆರ್ಟ್ ಗ್ಯಾಲರಿ, ಅಡಿಟೋರಿಯಂ, ವಚನಕಾರರ ಮೂರ್ತಿಗಳು, ವಚನ ಸಿಂಚನ, ವಚನ ಸಾಹಿತ್ಯ ಕುರಿತು ನಾಮಫಲಕ, ಸಾರಾಂಶ ಕೋಶ, ಶಿಲ್ಪಾವನ, ಡಿಜಿಟಲ್ ಗ್ರಂಥಾಲಯ, ಬೀದರ ಜಿಲ್ಲೆಯ ವಿಶಿಷ್ಟ ಸಂಗೀತ ವಾದ್ಯ ಪರಿಕರಗಳು, ಮೂರ್ತಿ ಪ್ರದರ್ಶನಗಳು, ಜಾನಪದ ಶೈಲಿಯ ವಸ್ತು ಪ್ರದರ್ಶನ, ಸಂಗೀತ ಕಾರಂಜಿ, ಪ್ರಾಚೀನ ಕಾಲದ ನಾಣ್ಯಗಳು, ಕೃಷಿ ಉಪಕರಣಗಳು, ನಾಟಿವೈದ್ಯ ಮುಂತಾದ ವೈಶಿಷ್ಟತೆಗಳನ್ನು ಒಳಗೊಂಡಿರುತ್ತವೆʼ ಎಂದು ಮಾಹಿತಿ ನೀಡಿದರು.
ಕಲಾ ಗ್ರಾಮ ಸ್ಥಾಪನೆಯ ಮುಖ್ಯ ಉದ್ದೇಶ ಜಿಲ್ಲೆಯಲ್ಲಿರುವ ಕಲೆ, ಸಾಹಿತ್ಯ, ನಾಟಕ, ರಂಗಭೂಮಿ ಮತ್ತು ಜಿಲ್ಲೆಯ ವೈಶಿಷ್ಟತೆಯನ್ನು ತಿಳಿಸುವುದಾಗಿದೆ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಅನುಕೂಲವಾಗಲಿದೆʼ ಎಂದರು.

ಜಿಲ್ಲಾ ಕಲಾ ಗ್ರಾಮಗಳ ಸಮಿತಿಗೆ ಮೂರು ಜನ ಸಂಪನ್ಮೂಲ ವ್ಯಕ್ತಿಗಳ ನೇಮಕ ಮಾಡಿಕೊಳ್ಳಲಾಗುವುದು. ಆದ್ದರಿಂದ ಆಸಕ್ತರು ಸ್ವವಿವರವನ್ನು (Resume) 2025 ಜೂನ್ 23ರ ಸಂಜೆ 5:30 ಗಂಟೆ ಒಳಗಾಗಿ ಬೀದರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕರ್ನಾಟಕ ಜಾನಪದ ಅಕಾಡೆಮಿಯ ಸಹ ಸದಸ್ಯ ವಿಜಯಕುಮಾರ ಸೋನಾರೆ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜುಕುಮಾರ ಅತಿವಾಳೆ, ಕರ್ನಾಟಕ ವನ್ಯ ಜೀವಿ ಮಂಡಳಿ ಸ್ಥಾಯಿ ಸಮಿತಿ ಸದಸ್ಯ ವಿನಯ ಮಾಳಗೆ ಹಾಗೂ ಪ್ರಮುಖರಾದ ಜಗನ್ನಾಥ ಹೆಬ್ಬಾಳೆ, ಮಾರುತಿ ಬೌದ್ದೆ, ಪಾರ್ವತಿ ಸೋನಾರೆ, ಮಹೇಶ ಪಾಟೀಲ, ಭಾರತಿ ವಸ್ತ್ರದ, ಮಹೇಶ ಗೋರನಾಳಕರ, ಅಂಬ್ರೀಶ ಮಲ್ಲೇಶಿ, ರೋಹನ್‌ಕುಮಾರ್ ಸೇರಿದಂತೆ ಕಲಾವಿದರು, ಸಾಹಿತಿಗಳು, ಸಂಘ-ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್| ʼಶಕ್ತಿ ಯೋಜನೆʼಗೆ 2 ವರ್ಷ: 8.29 ಕೋಟಿ ಮಹಿಳೆಯರು ಪ್ರಯಾಣ; ₹237.80 ಕೋಟಿ ಆದಾಯ