ಉದಯೋನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಭರ್ಜರಿ ಶತಕ ಹಾಗೂ ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಟೀ ವಿರಾಮದ ವೇಳೆಗೆ 53 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಬೃಹತ್ ಮೊತ್ತದತ್ತ ಹೆಜ್ಜೆಯಿಟ್ಟಿದೆ.
ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ತೆಂಡೂಲ್ಕರ್ – ಆಂಡರ್‌ಸನ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟೀಂ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಕನ್ನಡಿಗ ಕೆ ಎಲ್ ರಾಹುಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 91 ರನ್ ಗಳಿಸಿದರು.
8 ಬೌಂಡರಿಗಳೊಂದಿಗೆ 42 ರನ್ ಗಳಿಸಿದ್ದ ಕೆ ಎಲ್ ರಾಹುಲ್ ಬ್ರೈಡನ್ ಕಾರ್ಸೆ ಬೌಲಿಂಗ್‌ನಲ್ಲಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಆಗಮಿಸಿದ ಸಾಯಿ ಸುದರ್ಶನ್ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ಪೆವಿಲಿಯನ್‌ಗೆ ತೆರಳಿದರು.
ನಂತರ ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ನಾಯಕ ಶುಭ್‌ಮನ್ ಗಿಲ್ ಜೈಸ್ವಾಲ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದರು. ಇವರಿಬ್ಬರು ಟೀ ವಿರಾಮದ ವೇಳೆಗೆ ನಾಲ್ಕನೇ ವಿಕೆಟ್‌ಗೆ 153 ಚೆಂಡುಗಳಲ್ಲಿ 129 ರನ್ ದಾಖಲಿಸಿದರು.
ಇದನ್ನು ಓದಿದ್ದೀರಾ? ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್: ಮೂವರು ಕನ್ನಡಿಗರಿಗೆ ಸ್ಥಾನ
ಯಶಸ್ವಿ ಜೈಸ್ವಾಲ್ 155 ಚೆಂಡುಗಳಲ್ಲಿ 16 ಆಕರ್ಷಕ ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್‌ನೊಂದಿಗೆ ತಮ್ಮ ಟೆಸ್ಟ್ ವೃತ್ತಿ ಜೀವನದ 5 ನೇ ಶತಕ ದಾಖಲಿಸಿದರು. ಅಲ್ಲದೆ ಜೈಸ್ವಾಲ್‌ಗೆ ಇಂಗ್ಲೆಂಡ್‌ನಲ್ಲಿ ಮೊದಲ ಶತಕವಾಗಿದೆ. ಇವರಿಗೆ ಜೊತೆಯಾಗಿ ನಿಂತಿರುವ ನಾಯಕ ಶುಭಮನ್ ಗಿಲ್ 79 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 63 ರನ್‌ಗಳೊಂದಿಗೆ ಅರ್ಧ ಶತಕ ದಾಖಲಿಸಿದ್ದಾರೆ. 101 ಗಳಿಸಿದ ಜೈಸ್ವಾಲ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಗಿಲ್ ಜೊತೆ ವಿಕೆಟ್ ಕೀಪರ್ ರಿಷಬ್ ಪಂತ್ (5) ಕ್ರೀಸ್‌ನಲ್ಲಿದ್ದಾರೆ.
ಇತಿಹಾಸ ಸೃಷ್ಟಿಸಿದ ರಾಹುಲ್-ಜೈಸ್ವಾಲ್ ಜೋಡಿ
ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿ ಅರ್ಧಶತಕದ ಜೊತೆಯಾಟವನ್ನಾಡಿದ್ದಾರೆ. ಮೊದಲ ವಿಕೆಟ್‌ಗೆ 91 ರನ್‌ಗಳ ಜೊತೆಯಾಟವನ್ನಾಡಿದ ಇವರಿಬ್ಬರು ಭಾರತದ ಪರ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಮೊದಲ ವಿಕೆಟ್‌ಗೆ 91 ರನ್ ಜೊತೆಯಾಟ ನೀಡಿದ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್‌ನಲ್ಲಿ ಭಾರತದ ಪರ ಅತಿದೊಡ್ಡ ಆರಂಭಿಕ ಜೊತೆಯಾಟವನ್ನಾಡಿದ ದಾಖಲೆ ಸೃಷ್ಟಿಸಿದರು. ಇದು ಮಾತ್ರವಲ್ಲದೆ 1986 ರ ನಂತರ ಮೊದಲ ಬಾರಿಗೆ ಭಾರತದ ಆರಂಭಿಕ ಜೋಡಿ ಲೀಡ್ಸ್‌ನಲ್ಲಿ 50 ಪ್ಲಸ್ ರನ್‌ಗಳ ಜೊತೆಯಾಟವನ್ನಾಡಿದ ಸಾಧನೆಯನ್ನು ಮಾಡಿದರು.
ರಾಹುಲ್ ಮತ್ತು ಜೈಸ್ವಾಲ್ ಅವರಿಗಿಂತ ಮೊದಲು, ಸುನಿಲ್ ಗವಾಸ್ಕರ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ 1986 ರಲ್ಲಿ ಲೀಡ್ಸ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕದ ಜೊತೆಯಾಟವನ್ನಾಡಿದ್ದರು. ಆ ಪಂದ್ಯದಲ್ಲಿ ಗವಾಸ್ಕರ್ ಮತ್ತು ಶ್ರೀಕಾಂತ್ ಮೊದಲ ವಿಕೆಟ್‌ಗೆ 64 ರನ್‌ಗಳನ್ನು ಸೇರಿಸಿದ್ದರು. ಇದೀಗ ರಾಹುಲ್ ಮತ್ತು ಜೈಸ್ವಾಲ್ 91 ರನ್‌ಗಳ ಜೊತೆಯಾಟ ನಿರ್ಮಿಸುವ ಮೂಲಕ ಹಳೆಯ ದಾಖಲೆ ಮುರಿದಿದ್ದಾರೆ.