ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. 2023ರಲ್ಲಿ ಡೈಮಂಡ್ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ನೀರಜ್ ಚೋಪ್ರಾ ಇದೀಗ ಮತ್ತೊಮ್ಮೆ ಡೈಮಂಡ್ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಜರ್ಮನಿಯ ಚಾಂಪಿಯನ್ ಜಾವೆಲಿನ್ ಎಸೆತಗಾರ ಜೂಲಿಯನ್ ವೆಬರ್ ಅವರನ್ನು ಹಿಂದಿಕ್ಕುವ ಮೂಲಕ ನೀರಜ್ ಚೋಪ್ರಾ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ನೀರಜ್ ಅವರು 8 ವರ್ಷಗಳ ಬಳಿಕ ಕಾಣಿಸಿಕೊಂಡಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 88.16 ಮೀಟರ್ ಎಸೆತದೊಂದಿಗೆ ಶುಭಾರಂಭ ಮಾಡಿದ್ದರು. ಈ ಎಸೆತವೇ ಇತರ ಸ್ಪರ್ಧಿಗಳಿಗೆ ಗುರಿಯಾಗಿ ಮಾರ್ಪಟ್ಟಿತ್ತು.
ಎರಡನೇ ಪ್ರಯತ್ನದಲ್ಲಿ 85.10 ಮೀಟರ್ ದೂರ ಎಸೆದಿದ್ದರು. ಆದರೆ ಕಠಿಣ ಪ್ರತಿ ಸ್ಪರ್ಧಿ ವೆಬರ್ ಈ ವೇಳೆ 87.88 ಮೀಟರ್ ತಲುಪಿದ್ದರು. ಇದಾದ ಬಳಿಕ ಲಯ ತಪ್ಪಿದ ನೀರಜ್ ಸತತ ಮೂರು ಫೌಲ್ ಎಸೆತಗಳನ್ನು ಎಸೆದರು.
ಮೌರಿಸಿಯೊ ಲೂಯಿಜ್ ಡ ಸಿಲ್ವಾ 86.62 ಮೀಟರ್ ದೂರಕ್ಕೆ ಎಸೆದು ಪೈಪೋಟಿಗೆ ಇಳಿದರು. ಅತ್ತ ಜೂಲಿಯನ್ ವೆಬರ್ ಸತತ ಪ್ರಯತ್ನ ನಡೆಸಿದರೂ, ನೀರಜ್ ಚೋಪ್ರಾ ಅವರ 88.16 ಮೀಟರ್ ಗುರಿಯನ್ನು ದಾಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನೀರಜ್ ಚೋಪ್ರಾ ಮೊದಲ ಎಸೆತದಲ್ಲಿ ಕ್ರಮಿಸಿದ 88.16 ಮೀಟರ್ ಮೊದಲ ಸ್ಥಾನವನ್ನು ಪಡೆದುಕೊಂಡಿತು.