ಮಣಿಪುರ ಹಿಂಸಾಚಾರ ಹಾಗೂ ಕುಕಿ ಸಮುದಾಯದ ಯುವತಿಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ಘಟನೆ ಖಂಡಿಸಿ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಎದುರು ಭಾರತೀಯ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಭೀಮನಗೌಡ, “ಮಣಿಪುರದಲ್ಲಿ ಕಳೆದ ಮೇ 4ರಂದು ಮಹಿಳೆಯರನ್ನು ಬೆತ್ತಲೆ ಮಾಡಿ, ಖಾಸಗಿ ಅಂಗಾಂಗಗಳ ಒಳಗೆ ಕೈ ತೂರಿಸಿ ಮೆರವಣಿಗೆ ಮಾಡಲಾಗಿದೆ. ಜೊತೆಗೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ತಡವಾಗಿ ಬೆಳಕಿಗೆ ಬಂದ ಈ ದಾರುಣ ಘಟನೆಯನ್ನು ಖಂಡಿಸಿ ತಪ್ಪಿತಸ್ಥರಿಗೆ ತೀವ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಫೆಡರೇಶನ್ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಕರೆ ನೀಡಿದೆ” ಎಂದರು.
“ಮಣಿಪುರದಿಂದ ಹೊರಬಂದ ಹೃದಯ ವಿದ್ರಾವಕ ವಿಡಿಯೋ ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದ್ದು, ಇಂತಹ ಹೀನಾಯ ಕೃತ್ಯಗಳನ್ನು ಮನುಷ್ಯರಾದವರು ಹೇಗೆ ನಡೆಸುತ್ತಾರೆ ಎಂಬುದನ್ನು ಗ್ರಹಿಸಲಾಗದು. ಇದರಿಂದ ಇಡೀ ನಾಗರಿಕ ಸಮಾಜ ತಲೆತೆಗ್ಗಿಸುವಂತಾಗಿದೆ” ಎಂದರು.
ಕಲಬುರಗಿ ಜಿಲ್ಲೆಯ ಸಂಚಾಲಕಿ ಸುಜಾತ ಮಾತನಾಡಿ, “ಸ್ವಾತಂತ್ರ್ಯ ಪೂರ್ವದಿಂದ ಈವರೆಗೆ ಮಹಿಳೆಯ ಸಮಾನ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದೆವು. ಆದರೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇನ್ನೂ ಮಹಿಳೆಯರಿಗೆ ರಕ್ಷಣೆಯೇ ಸಿಕ್ಕಿಲ್ಲ ಎಂಬುದು ನಮಗೆ ಗೊತ್ತಾಗಿದೆ. ಬಿಲ್ಕಿಸ್ ಬಾನು ಪ್ರಕರಣವಾದಾಗ, ಹತ್ರಾಸ್ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದಾಗ, ಮಹಿಳಾ ಕುಸ್ತಿಪಟುಗಳ ದೌರ್ಜನ್ಯ ನಡೆದಾಗ ನಮ್ಮ ದೇಶದ ಪ್ರಧಾನಮಂತ್ರಿ ಮಾತನಾಡಿದ್ದರೆ ಇಂದು ಇಂತಹ ಕೃತ್ಯ ಎಸಗಲು ದುಷ್ಟರು ಯೋಚಿಸುತ್ತಿದ್ದರು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರೀಯ ವಿವಿಯ ಎಸ್‌ಎಫ್‌ಐ ಘಟಕ ಕಾರ್ಯದರ್ಶಿ ಆದಿತ್ಯ ಮಾತನಾಡಿ, “ಮಣಿಪುರದಲ್ಲಿ ಶಾಂತಿ ನೆಲಸಬೇಕು. ಅಲ್ಲಿ ನಡೆದ ಅಮಾನುಷ ಕೃತ್ಯವನ್ನು ಕೇಂದ್ರೀಯ ವಿವಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಖಂಡಿಸುತ್ತೇವೆ. ಪ್ರಾಮಾಣಿಕವಾಗಿ ಈ ಘಟನೆಯ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು” ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಸೇರಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮಹಿಳೆಯರ ಘನತೆ ಉಳಿಯಲಿ, ಮಣಿಪುರದಲ್ಲಿ ಶಾಂತಿ ನೆಲೆಸಲಿ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿ ನ್ಯಾಯಕ್ಕಾಗಿ ಒತ್ತಾಯಿಸಿದರು.
ಮೈಸೂರು : ಜಿಲ್ಲೆಯ ಹುಣಸೂರಿನಲ್ಲಿಯೂ ಮಣಿಪುರದ ಅಮಾನವೀಯ ಕೃತ್ಯ ಖಂಡಿಸಿ ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಹಾಗೂ ಪ್ರಗತಿಪರ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿದರು.

ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಅಧ್ಯಕ್ಷ ಮುದಾಸಿರ್ ಖಾನ್ ಮಾತನಾಡಿ, “ಕಳೆದ ಮೂರು ತಿಂಗಳಿಂದಲೂ ಮಣಿಪುರ ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಬೇಯುತ್ತಿದೆ. ಅಲ್ಲಿನ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅಮಾನವೀಯ. ಇಡೀ ಮನುಕುಲವೇ ತಲೆ ತಗ್ಗಿಸುವ ಕೃತ್ಯವಿದು. ಅಲ್ಲಿನ ಹೆಣ್ಣುಮಕ್ಕಳಿಗೆ ಆದ ಅಪಮಾನ, ನೋವು, ಮಾನಸಿಕ ಆಘಾತವನ್ನು ಊಹಿಸಲು ಸಾಧ್ಯವಿಲ್ಲ. ಈ ಕೃತ್ಯ ಗುಜರಾತ್, ಕೈರ್ಲಾಂಜೆ, ಹತ್ರಾಸ್ ಮುಂತಾದ ಹೇಯ ಘಟನೆಗಳ ಮುಂದುವರೆದ ಭಾಗವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಣಿಪುರದಲ್ಲಿ ಸಂಘರ್ಷ ಆರಂಭಗೊಂಡು ಮೂರು ತಿಂಗಳಾದರೂ ಆಡಳಿತ ವ್ಯವಸ್ಥೆ ಕ್ರಮಕ್ಕೆ ಮುಂದಾಗದಿರುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ. ಅಲ್ಲಿನ ಮಹಿಳೆಯರು ನೆಮ್ಮದಿಯಿಂದ ಬದುಕುವ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ. ಮಣಿಪುರ ಕಳೆದೆರಡು ತಿಂಗಳು ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿರುವಾಗ ಪ್ರಧಾನಿಯ ಮೌನ ಖಂಡನೀಯ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡಿದೆ. ಹಾಗಾಗಿ ನಮ್ಮ ಪ್ರಧಾನಿ 80 ದಿನಗಳ ನಂತರ ಮೌನ ಮುರಿದಿದ್ದಾರೆ” ಎಂದು ಟೀಕಿಸಿದರು.
“ಮಣಿಪುರದಂತಹ ಮೃಗೀಯ ಕೃತ್ಯಗಳು ಭಾರತದಲ್ಲಿ ನಿರಂತರವಾಗಿ ಮುಂದುವರೆದಿವೆ. ಈ ಗೂಂಡಾಗಳಿಗೆ ಇಷ್ಟು ಧೈರ್ಯ ಕೊಟ್ಟವರಾರು? ಶಾಂತಿಪ್ರಿಯ ನಾಗರಿಕರು ಇದನ್ನು ಪ್ರಶ್ನಿಸಬೇಕು. ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಬೇಕು. ಮಹಿಳೆಯರ ಘನತೆಯನ್ನು ಕಾಪಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ರಾಷ್ಟ್ರಪತಿ ದ್ರೌಪದಿ ಮುರ್ಮು ತಕ್ಷಣ ಮಧ್ಯ ಪ್ರವೇಶಿಸಲಿ: ಐವನ್ ಡಿ ಸೋಜ
ಸೌಹಾರ್ದ ಕರ್ನಾಟಕ ವೇದಿಕೆಯ ಅಧ್ಯಕ್ಷ ಜೆ ಮಹದೇವ ಮಾತನಾಡಿ, “ಮಣಿಪುರದಲ್ಲಿ ನಡೆದಿರುವ ಘಟನೆಗೆ ಇಡೀ ಭಾರತವೇ ತಲೆ ತಗ್ಗಿಸುವಂತಾಗಿದೆ. ಜನಾಂಗೀಯ ದ್ವೇಷದ ಬೆಂಕಿ ಹತ್ತಿಸಿದಾಗ ಅದು ಜ್ವಲಿಸುವ ಹಿಂಸೆಯ ಆತ್ಯಂತಿಕ ಸ್ವರೂಪವೇ ಮಹಿಳೆಯರ ಮೇಲಿನ ಅತ್ಯಾಚಾರ. ಹೆಣ್ಣೊಬ್ಬಳು ಜನಾಂಗೀಯ ಪ್ರತಿನಿಧಿಯಾಗಿ ಕಾಣುವ ವಿಕೃತಿ ಇದು. ಇದಕ್ಕೆ ತಡೆಯೊಡ್ಡುವುದು ನಾಗರಿಕ ಜವಾಬ್ದಾರಿ. ಮಣಿಪುರದಲ್ಲಿನ ನಿರಂತರ ಜನಾಂಗೀಯ ಹಿಂಸಾಚಾರ ತಡೆಯಲು ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ರಾಶಿದ್, ಪಬ್ಲಿಕ್ ಪೀಸ್ ಕಮಿಟಿಯ ಶಾಮುನ್ನಾ, ಮುಜಾಮಿಲ್, ಜಬ್ಬಾರ್, ಜಮಾತ್ ಇಸ್ಲಾಂನ ಅಜೀಜುಲ್ಲಾ, ಮುಸ್ತಫಾ, ಅಬ್ಬಾಸ್, ಹೂಮನ್ ಹೆಲ್ಪ್ ಪೌಂಡೇಶನ್ ಸಮಿತಿಯ ರಿಜ್ವಾನ್, ದಸಂಸ ಸಂಚಾಲಕ ರಾಮಕೃಷ್ಣ ಅತ್ತಿಗುಪ್ಪೆ, ಚಿಕ್ಕ ಹುಣಸೂರು ರಾಜು, ಅಲ್ಪಸಂಖ್ಯಾತ ಮುಖಂಡರಾದ ಮೊಯಿದ್ದೀನ್, ಜಬ್ಬಾರ್, ಅಬ್ಬಾಸ್, ಉವೇ ಸಲ್ಮಾ, ಜಸೀಲಾ ಸೇರಿದಂತೆ ನೂರಾರು ಮಂದಿ ಇದ್ದರು.