- ‘ಮುನಿರತ್ನ ಸಚಿವರಾದ ಮೇಲೆ ಬರೀ ಆಂಟಿಗಳೇ ಇರುತ್ತಿದ್ದರು’
- ಹನಿಟ್ರ್ಯಾಪ್ ಮೂಲಕ ನಮ್ಮನ್ನು ಹೆದರಿಸುತ್ತಾರೆ: ಆರೋಪ
ಮುನಿರತ್ನ ಅವರು ನಿರ್ಮಾಪಕರಾಗಿ ಮಾಡಿದ ಮೊದಲ ಚಿತ್ರ ‘ಆಂಟಿ ಪ್ರೀತ್ಸೆ’. ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಹೀಗಾಗಿ ಮುನಿರತ್ನ ಸಚಿವರಾದ ಮೇಲೆ ಬರೀ ಆಂಟಿಗಳೇ ಇರುತ್ತಿದ್ದರು. ವಿಕಾಸಸೌಧ, ವಿಧಾನಸೌಧ ಚೇಂಬರ್‌ನಲ್ಲೆಲ್ಲಾ ಬರೀ ಆಂಟಿಗಳೇ ಇರುತ್ತಿದ್ದರು ಎಂದು ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಆರೋಪ ಮಾಡಿದ್ದಾರೆ.
ಶಾಸಕ ಮುನಿರತ್ನ ಅವರ ಬೆಂಬಲಿಗರಾಗಿದ್ದ ವೇಲು ನಾಯ್ಕರ್ ಭಾನುವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, “ಹನಿಟ್ರ್ಯಾಪ್ ಮಾಡಲೆಂದೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಮುನಿರತ್ನ ಅವರು ಹನಿಟ್ರ್ಯಾಪ್ ಮಾಡಲು ಹೆದರಿಸಲು, ಜೆಪಿ ಪಾರ್ಕ್, ಡಾಲರ್ಸ್ ಕಾಲೋನಿಯಲ್ಲಿ ಸ್ಟುಡಿಯೋ ಇಟ್ಟಿದ್ದಾರೆ. ಅವರು ಸಿನಿಮಾ ನಿರ್ಮಾಪಕರಲ್ಲವೇ. ಹೀಗಾಗಿ ಹನಿಟ್ರ್ಯಾಪ್ ಮಾಡಿಸಿ ಹೆದರಿಸುತ್ತಾರೆ” ಎಂದರು.
“ಮುನಿರತ್ನ ಅವರಿಗೆ ಚುನಾವಣೆ ಎದುರಿಸುವುದು ಹೇಗೆ ಎಂದು ಕೇಳಿದ್ದೆವು. ನಿಮ್ಮದು ಈಸ್ಟ್‌ಮನ್ ಕಲರ್ ಪಿಕ್ಚರ್ ಇದೆ ತೋರಿಸಲಾ? ಇಲ್ಲ ಕೆಲಸ ಮಾಡುತ್ತೀರಾ ಎಂದು ನಮ್ಮನ್ನು ಹೆದರಿಸುತ್ತಿದ್ದರು” ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಮಣಿಪುರ ಗಲಭೆ; ಸರ್ಕಾರಗಳು ಮತ್ತು ಕೋರ್ಟುಗಳು ವಿವೇಚನೆ ಕಳೆದುಕೊಂಡವೇ?
ಮುನಿರತ್ನ ತಿರುಗೇಟು
ವೇಲು ನಾಯ್ಕರ್ ಮಾಡಿರುವ ಹನಿಟ್ರ್ಯಾಪ್ ಆರೋಪಕ್ಕೆ ಮುನಿರತ್ನ ತಿರುಗೇಟು ನೀಡಿದ್ದು, “ವೇಲು ನಾಯ್ಕರ್ ನನ್ನ ಆಪ್ತವಲಯದಲ್ಲಿಯೇ ಗುರುತಿಸಿಕೊಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಸಹಜವಾಗಿಯೇ ಒಂದಿಷ್ಟು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸೇರಿದ್ದಾರೆ. ಈ ಹಿಂದೆ ವೇಲು ನಾಯ್ಕರ್ ನನ್ನ ಮುಂದೆ ಸಂಸದ ಡಿಕೆ ಸುರೇಶ್ ಮತ್ತು ಕಾಂಗ್ರೆಸ್ ಮುಖಂಡೆ ಕುಸುಮಾ ಹನುಮಂತರಾಯಪ್ಪ ಬಗ್ಗೆ ತುಂಬಾ ಮಾತನಾಡಿದ್ದಾರೆ. ಕಾಂಗ್ರೆಸ್ ಸೇರಿರುವ ಅವರು ಇನ್ಮುಂದೆ ಡಿಕೆ ಸುರೇಶ್, ಕುಸುಮಾ ಬಗ್ಗೆ ಮಾತಾಡದಿದ್ರೆ ಸಾಕು. ಏನು ಮಾತನಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ” ಎಂದರು.