- ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು; ಆರೋಪಿಯ ಬಂಧನ
- ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಪ್ರತಿಭಟನೆಗೆ ಬಂದಿದ್ದ ಯುವತಿ
ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳಲ್ಲಿ ಸಂಚರಿಸುತ್ತಿರುವ ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ಜತೆಗೆ ಲೈಂಗಿಕ ಕಿರುಕುಳ ನೀಡುವ ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆ, ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ರ‍್ಯಾಪಿಡೋ ಗ್ರಾಹಕರಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಬೈಕ್ ಸವಾರರೊಂದಿಗೆ ಹಂಚಿಕೊಳ್ಳದಂತೆ ಮನವಿ ಮಾಡಿದೆ.
ಇತ್ತೀಚೆಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಲ್ಲಿ ಸಂಚರಿಸುತ್ತಿವಾಗ ಸವಾರ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪದಡಿ ಸವಾರ ಗುರು ವೆಂಕಟಪ್ಪನ ವಿರುದ್ಧ ಅತಿರಾ ಪುರುಷೋತ್ತಮನ್ ಎಂಬುವರು ಟ್ವೀಟ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ದೂರು ದಾಖಲಿಸಿದ ಬೆನ್ನಲ್ಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆ ಅತಿರಾ ಪುರುಷೋತ್ತಮನ್ ಅವರಿಗೆ ರ‍್ಯಾಪಿಡೋ ಕಂಪನಿ ಪ್ರತಿನಿಧಿಗಳು ಕ್ಷಮೆಯಾಚಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಆರೋಪಿ ಸವಾರನನ್ನು ಸಂಸ್ಥೆಯ ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ರ‍್ಯಾಪಿಡೋ ಹೇಳಿದೆ.
ಗ್ರಾಹಕರು ರೈಡ್‌ಗಾಗಿ ರ‍್ಯಾಪಿಡೋ ಬುಕ್ ಮಾಡಿದ ನಂತರ ಪ್ರಮುಖವಾಗಿ ಆ್ಯಪ್‌ನಲ್ಲಿ ದಾಖಲಾದ ವಿವರಗಳು ಹಾಗೂ ವಾಹನದ ಸಂಖ್ಯೆಯ ವಿವರಗಳು ಹೊಂದಿಕೆಯಾಗದಿದ್ದರೆ, ಸವಾರಿ ಮಾಡಬೇಡಿ ಎಂದು ಗ್ರಾಹಕರಿಗೆ ಸಲಹೆ ನೀಡಿದೆ.
“ಗ್ರಾಹಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಕ್ಯಾಪ್ಟನ್ ಮತ್ತು ವಾಹನದ ವಿವರಗಳು ನಿಖರವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹಾಗೂ ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ” ಎಂದಿದೆ.
“ಎಲ್ಲ ಮಾತುಕತೆಗಳು ಸುರಕ್ಷಿತ ಮೂರನೇ ವ್ಯಕ್ತಿಯ ಕರೆ (ಮಾಸ್ಕಿಂಗ್ ಸೇವೆ) ಮೂಲಕ ಎರಡೂ ಕಡೆ ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಹೀಗಾಗಿ, ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಳ್ಳಬೇಕಾಗಿಲ್ಲ. ಸವಾರ ಮತ್ತು ಬೈಕ್ ನಡುವೆ ಹೊಂದಾಣಿಕೆಯಾಗದಿದ್ದರೆ ಅಂತಹ ಪ್ರಯಾಣವನ್ನು ಮುಂದುವರಿಸಬೇಡಿ” ಎಂದು ಕಂಪನಿಯು ಗ್ರಾಹಕರಿಗೆ ಹೇಳಿದೆ.
“ನಮ್ಮ ಉದ್ಯಮದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಬಗ್ಗೆಯೂ ಕಟ್ಟುನಿಟ್ಟಾಗಿ ಅವರ ಹಿನ್ನೆಲೆಯನ್ನು ಪರಿಶೀಲನೆ ಮಾಡುತ್ತೇವೆ. ಇದರಿಂದ ಅವರ ಬಗ್ಗೆ ತಿಳಿದುಕೊಳ್ಳಲು ಸಹಾಯಕಾರಿಯಾಗುತ್ತದೆ. ತಪಾಸಣೆ ನಡೆಸುವುದರಿಂದ ಅವರಿಂದ ಯಾವುದೇ ತೊಂದರೆಯಿಲ್ಲ ಎಂಬುದನ್ನು ತಿಳಿಯಲು ಸಹಾಯಕಾರಿಯಾಗಿದೆ. ನಂಬಲರ್ಹ ವ್ಯಕ್ತಿಗಳು ಮಾತ್ರ ರ‍್ಯಾಪಿಡೋ ಸವಾರರು ಆಗುತ್ತಾರೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಆಗಸ್ಟ್ 1 ರಿಂದ ಹೋಟೆಲ್ ತಿಂಡಿ ತಿನಿಸುಗಳ ಬೆಲೆಯಲ್ಲಿ ಶೇ. 10ರಷ್ಟು ಹೆಚ್ಚಳ
ಏನಿದು ಘಟನೆ?
ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶುಕ್ರವಾರ ಮಧ್ಯಾಹ್ನ ನಗರದ ಟೌನ್‍ಹಾಲ್ ಬಳಿ ನಡೆದಿದ್ದ ಪ್ರತಿಭಟನೆಗೆ ಸಂತ್ರಸ್ತೆ ಯುವತಿ ಬಂದಿದ್ದರು. ಮರಳಿ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ಮನೆಗೆ ತೆರಳಲು ಯುವತಿ ಟೌನ್‌ಹಾಲ್‌ನಿಂದ ರೈಡ್‌ಗಾಗಿ ರ‍್ಯಾಪಿಡೋ ಬುಕ್ ಮಾಡುತ್ತಿದ್ದರು.
ಈ ವೇಳೆ, ಪದೇಪದೆ ಆಟೋ ರೈಡ್ ಬುಕ್ ಆಗದೆ ಕ್ಯಾನ್ಸಲ್ ಆದ ಕಾರಣ ವಿಧಿಯಿಲ್ಲದೆ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ರೈಡ್ ಬುಕ್ ಮಾಡುವಾಗ ಆ್ಯಪ್‍ನಲ್ಲಿ ತೋರಿಸಿದ ನಂಬರಿನ ಬೈಕ್ ರಿಪೇರಿಯಲ್ಲಿದೆ. ಹಾಗಾಗಿ, ಈ ಬೈಕ್ ತಂದಿದ್ದೇನೆ ಎಂದು ಸವಾರ ಸಮಜಾಯಿಷಿ ನೀಡಿ ಮಹಿಳೆಯನ್ನು ರೈಡ್‌ಗಾಗಿ ಕರೆದುಕೊಂಡು ಹೋದನು.
ಬಳಿಕ ರ‍್ಯಾಪಿಡೋ ಸವಾರ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಒಂದೇ ಕೈಯಲ್ಲಿ ಬೈಕ್ ಚಾಲನೆ ಮಾಡುತ್ತ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಸವಾರನ ವಿಚಿತ್ರ ಮನೋಭಾವ ನೋಡಿ ಯುವತಿ ತಮ್ಮ ಮನೆಗೆ 200 ಮೀಟರ್ ದೂರದಲ್ಲಿರುವಾಗಲೇ ರೈಡ್ ಮುಗಿಸಿ ಹಣ ಪಾವತಿಸಿ ಮನೆಗೆ ತೆರಳಿದ್ದರು. ಇಷ್ಟಕ್ಕೆ ಸುಮ್ಮನೆ ಆಗದ ಆರೋಪಿ ಸವಾರ ಡ್ರಾಪ್ ಮಾಡಿದ ನಂತರ ಯುವತಿಗೆ ಪದೇಪದೆ ಕರೆ ಮಾಡಿ, ಅಸಭ್ಯವಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ.
ಸವಾರನ ಕಿರುಕುಳದಿಂದ ಬೇಸತ್ತ ಯುವತಿಯು ಆತ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್ ಸಮೇತ ಟ್ವೀಟ್ ಮಾಡಿ, ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
“ಲಿಂಗವನ್ನು ಲೆಕ್ಕಿಸದೆ ಪ್ರತಿಯೊಬ್ಬ ನಾಗರಿಕರು ಸುರಕ್ಷತೆ ಮತ್ತು ಭದ್ರತೆಗೆ ಅರ್ಹರು. ಮಹಿಳೆಯರು ಹಿಂಸೆಯ ಭಯದಲ್ಲಿ ಬದುಕದೆ ಮುಕ್ತವಾಗಿ ಓಡಾಡುವಂತಾಗಬೇಕು. ಮಹಿಳೆಯರು ಆಟೋ ಅಥವಾ ಕಾರಿನ ಬದಲು ಬೈಕ್ ಟ್ಯಾಕ್ಸಿಯನ್ನು ಏಕೆ ಆರಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸುವ ಬದಲು, ಎಲ್ಲ ವ್ಯಕ್ತಿಗಳು ತಮ್ಮ ಸುರಕ್ಷತೆ, ಭದ್ರತೆ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಬಹುದಾದ ಸುರಕ್ಷಿತ ಸ್ಥಳಗಳನ್ನು ರಚಿಸುವ ತುರ್ತು ಅಗತ್ಯವನ್ನು ನಿರ್ಮಾಣ ಮಾಡಬೇಕು. ಸುರಕ್ಷತೆ ಮತ್ತು ಸಮಾನತೆಯು ಸಾರ್ವತ್ರಿಕ ಹಕ್ಕುಗಳಾಗಿರಬೇಕು. ಒಂದು ಲಿಂಗಕ್ಕೆ ಮಾತ್ರ ಮೀಸಲಾದ ಸವಲತ್ತುಗಳಲ್ಲ” ಎಂದು ಅತಿರಾ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
“ಇಂತಹ ಘಟನೆಗಳನ್ನು ಅತ್ಯಂತ ಆದ್ಯತೆಯಿಂದ ಪರಿಗಣಿಸಲಾಗಿದೆ. ಕಿರುಕುಳ ನೀಡಿದವರನ್ನು ಕೂಡಲೇ ಬಂಧಿಸಲಾಗಿದೆ. ಇದು ನನಗೆ ಭರವಸೆ ನೀಡುತ್ತದೆ. ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಿದ್ದಕ್ಕಾಗಿ ಧನ್ಯವಾದಗಳು” ಎಂದು ಹೇಳಿದ್ದಾರೆ.