ʼರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ನೀಡಿದವರಿಗಷ್ಟೇ ಮನೆ ಹಂಚಿಕೆ ಮಾಡಲಾಗುತ್ತಿದೆʼ ಎಂದು ಕಾಂಗ್ರೆಸ್ ಶಾಸಕ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಬಿ.ಆರ್.ಪಾಟೀಲ್ ತಮ್ಮದೇ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿರುವುದು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆಯಾಗಲಿ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಆಗ್ರಹಿಸಿದ್ದಾರೆ.
ʼವಸತಿ ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಮತ್ತು ಬಿ.ಆರ್.ಪಾಟೀಲ್ ಅವರು ಮಾತನಾಡಿದ ವೈರಲ್ ಆಗಿರುವ ಆಡಿಯೋದಲ್ಲಿನ ಧ್ವನಿ ತಮ್ಮದೇ ಎಂದು ಅವರು ಹೇಳಿದ್ದಾರೆ. ಸಿಎಂ ಸಿದ್ರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಾಗ ಬಿ.ಆರ್.ಪಾಟೀಲ್ ಅವರು ಸತ್ಯ ಹೇಳ್ತಾರೆ, ಈ ಹಿಂದೆಯೂ ಸಾಕಷ್ಟು ಸರ್ಕಾರದ ವಿರುದ್ಧ ಸಿಎಂಗೆ ಪತ್ರ ಬರೆದಿದ್ದರುʼ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣದ ವ್ಯವಹಾರ ಮೊದಲಿನಿಂದಲೂ ಆಗುತ್ತಿದೆ. ಇದಕ್ಕೆ ಸಚಿವರ ಆಪ್ತ ಕಾರ್ಯದರ್ಶಿ ಮತ್ತು ಆಳಂದ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿದ ಆಡಿಯೋ ಸಾಕ್ಷಿಯಾಗಿದೆ. ಸಿಎಂ ಸಿದ್ರಾಮಯ್ಯ ಅವರು ಭ್ರಷ್ಟಾಚಾರ ಮಾಡುವವರನ್ನು ಎಷ್ಟು ಸಹಿಸಿಕೊಳ್ಳಲು ಸಾಧ್ಯ. ಕಾಲ್ತುಳಿತ ಪ್ರಕರಣದಲ್ಲೇ ಮಾನವೀಯತೆ ದೃಷ್ಟಿಯಿಂದ ಸಿಎಂ ರಾಜೀನಾಮೆ ಕೊಡಬೇಕಿತ್ತು. ವಾಲ್ಮೀಕಿ, ರಾಜೀವ್ ಗಾಂಧಿ ವಸತಿ ನಿಗಮ, ಮುಡಾದಂತಹ ಹಗರಣಗಳ ಸರಮಾಲೆ ನಡೆದರೂ ಸಿಎಂ ರಾಜೀನಾಮೆ ಕೊಡ್ತಿಲ್ಲ. ಈ ಸರ್ಕಾರದ ಪಾಪದ ಕೊಡ ತುಂಬಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼಈ ರೀತಿ ಭ್ರಷ್ಟಾಚಾರದಲ್ಲಿ ತೊಡಗಿರುವ ನಿಗಮದ ಅಧಿಕಾರಿಗಳನ್ನು ಕಿತ್ತೊಗೆಯಬೇಕು. ಕಾಂಗ್ರೆಸ್‌ನಿಂದ ಪೇ ಸಿಎಂ, 40% ಸರ್ಕಾರ ಎಂಬ ಆರೋಪ ಇತ್ತು, ಅದು ಈಗ ಸುಳ್ಳು ಎಂಬುವುದು ಸಾಬೀತಾಗಿದೆ. ಈಗಿರುವುದು 60% ಪರ್ಸೆಂಟ್ ಸರ್ಕಾರ. ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕುʼ ಎಂದು ಆಗ್ರಹಿಸಿದ್ದಾರೆ.
ʼಸಚಿವ ಜಮೀರ್ ಅಹ್ಮದ್ ಅವರು ನಿಗಮದಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವೆ ಎಂದು ಹೇಳುತ್ತಿದ್ದಾರೆ. ಆದರೆ, ಅವರ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ನೋಡಲು ಅವರಿಗೆ ಸಮಯ ಇಲ್ವಾ. ಈ ವಿಷಯದಲ್ಲಿ ನೈತಿಕ ಹೊಣೆ ಹೊತ್ತು ಜಮೀರ್ ಅಹ್ಮದ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇದಕ್ಕೆಲ್ಲಾ ಮುಖ್ಯ ಕಚೇರಿ ಮುಖ್ಯಮಂತ್ರಿ. ಹೀಗಾಗಿ, ಸಿಎಂ ಹಾಗೂ ಸಚಿವರು ರಾಜೀನಾಮೆ ಕೊಡಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಬಿ.ಆರ್ ಪಾಟೀಲ್ ಆರೋಪಗಳೂ, ಸರ್ಕಾರದ ನೈತಿಕತೆಯೂ
ʼಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ, ಕಾಂಗ್ರೆಸ್ ಪವರ್‌ಫುಲ್ ಶಾಸಕರು ಕೊಟ್ಟ ಪತ್ರಕ್ಕೆ ಮಂತ್ರಿಯವರು ಕಿಮ್ಮತ್ತು ಕೊಟ್ಟಿಲ್ಲ. ಗ್ರಾಪಂ ಅಧ್ಯಕ್ಷ ಕೊಟ್ಟ ಪತ್ರಕ್ಕೆ ಪರಿಗಣಿಸಿ ರಾಜೀವ್ ಗಾಂಧಿ ವಸತಿ ನಿಗಮದ ಮನೆಗಳ ಹಂಚಿಕೆಗೆ ಲಂಚ ಪಡೆದ ಬಗ್ಗೆ ಆರೋಪ ಹೊರಬಿದ್ದಿದೆ. ಕಾಂಗ್ರೆಸ್‌ನ ಪವರ್‌ಫುಲ್ ಶಾಸಕರೇ ಈ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳು ಇದಕ್ಕೆ ರಾಜ್ಯದ ಜನರಿಗೆ ಏನು ಉತ್ತರ ಕೊಡುತ್ತಾರೆʼ ಎಂದು ಪ್ರಶ್ನಿಸಿದ್ದಾರೆ.