ಮಾನ್ಸೂನ್ ಜೊತೆಗಿನ ಜೂಜಾಟದಲ್ಲಿ ಬಳಲಿದ ರಾಜ್ಯದ ರೈತ

Date:

Advertisements
ಒಂದೆಡೆ ಪರಿಸರ ನಾಶ, ಮತ್ತೊಂದೆಡೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೈಗಾರಿಕೆಗಳು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿವೆ. ಈ ಬದಲಾವಣೆಯು ಮಳೆ ಮತ್ತು ಕೃಷಿ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿದೆ. 

ಭಾರತದ ಕೃಷಿಯನ್ನು ಮಾನ್ಸೂನ್ ಜೊತೆಗಿನ ಜೂಜಾಟವೆಂದು ಬಣ್ಣಿಸಲಾಗಿದೆ. ಮಾನ್ಸೂನ್ ಮಳೆ ಸುರಿದರೆ, ಕೃಷಿ ಚೆನ್ನಾಗಿ ನಡೆಯುತ್ತದೆ. ಹೆಚ್ಚಾಗಿ ಸುರಿದರೆ ಅತಿವೃಷ್ಠಿ, ಮಳೆಯೇ ಸುರಿಯದಿದ್ದರೆ ಬರ – ಇದು ಮಾನ್ಸೂನ್ ಮಳೆಗೂ ದೇಶದ ಕೃಷಿಗೂ ಇರುವ ಸಂಬಂಧ. ಈ ವರ್ಷ, ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಮುಂಗಾರು ಮಳೆ ಕೈಕೊಟ್ಟಿದೆ. ಕಳೆದ ನಾಲ್ಕು ದಿನಗಳಿಂದ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದರೂ, ಬರದ ಛಾಯೆ ಆವರಿಸಿದೆ. ಕಾರಣ – ಮಾನ್ಸೂನ್ ಮಳೆ ಬರೋಬ್ಬರಿ ಒಂದೂವರೆ ತಿಂಗಳು ವಿಳಂಬವಾಗಿ ಕರ್ನಾಟಕ ಪ್ರವೇಶಿಸಿದೆ.

ರಾಜ್ಯದ ಹಲವೆಡೆ ಮುಂಗಾರು ವಿಳಂಬವಾಗಿದೆ. ಕೃಷಿ ತತ್ತರಿಸಿದೆ. ಹಲವೆಡೆ ಬಿತ್ತನೆ ಮಾಡಿದ್ದ ಬೆಳೆ ಒಣಗಿದೆ. ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಬಿತ್ತನೆ ಮಾಡಲೂ ಒಂದು ಹನಿ ಮಳೆ ನೀರು ಭೂಮಿ ಮೇಲೆ ಬಿದ್ದಿಲ್ಲ. ಬಿತ್ತಿನ ಬೆಳೆ ಒಣಗುತ್ತಿರುವುದರಿಂದ ಕಡಿಮೆ ಇಳುವರಿ ಮತ್ತು ಬಿಕ್ಕಟ್ಟನ್ನು ಎದುರಿಸಬೇಕಾದ ಸಂಕಷ್ಟದಲ್ಲಿ ರೈತರಿದ್ದಾರೆ.

ಕರ್ನಾಟಕದ 16 ಜಿಲ್ಲೆಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ. 13 ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಎರಡು ಜಿಲ್ಲೆಗಳಲ್ಲಿ ಮಾತ್ರ ಅಧಿಕ ಮಳೆಯಾಗಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಹೇಳಿದೆ.

Advertisements

ಈಗಷ್ಟೇ ರಾಜ್ಯದಲ್ಲಿ ಮಳೆ ಆರಂಭವಾಗಿದೆ. ಇದೇ ರೀತಿ ಮಳೆ ಮುಂದುವರೆದರೆ, ಒಣಗುತ್ತಿರುವ ಬೆಳೆ ಒಂದಷ್ಟಾದರೂ ಜೀವ ಪಡೆದುಕೊಳ್ಳುತ್ತದೆ. ಹಿಂಗಾರು ಬೆಳೆಗೆ ಅನುಕೂಲವೂ ಆಗುತ್ತದೆ ಎಂಬ ಆಶಾವಾದ ರೈತರಲ್ಲಿದೆ.

ಕಳೆದ ವರ್ಷ ಜುಲೈ ಅಂತ್ಯದ ವೇಳೆಗೆ ಶೇ.50ರಷ್ಟು ಬಿತ್ತನೆ ನಡೆದಿತ್ತು. ಆದರೆ, ಈ ವರ್ಷ ಮುಂಗಾರು ವಿಳಂಬದಿಂದಾಗಿ ಶೇ.40ರಷ್ಟು ಮಾತ್ರವೇ ಬಿತ್ತನೆಯಾಗಿದೆ. ಇದರಿಂದಾಗಿ, ಕಾಳುಗಳ ಕೊರತೆ ಎದುರಾಗುವ ಸಾಧ್ಯತೆ ಇದೆ. ಆದರೂ, ಜೋಳ, ರಾಗಿ ಹಾಗೂ ಭತ್ತದ ಬಿತ್ತನೆಗೆ ಆಗಷ್ಟ್‌ ಮಧ್ಯದವರೆಗೂ ಸಮಯವಿದೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ತಮ್ಮ ಪ್ರದೇಶಗಳು, ತಾಲೂಕು, ಜಿಲ್ಲೆಗಳನ್ನು ಬರ ಪೀಡಿತವೆಂದು ಘೋಷಿಸುವಂತೆ ರೈತರು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದಾಗ್ಯೂ, ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ನಿಯಮಗಳ ಪ್ರಕಾರ, 60 ದಿನಗಳಿಗಿಂತ ಹೆಚ್ಚು ಕಾಲ ಮಳೆ ಕೊರತೆ ಇದ್ದರೆ ಮಾತ್ರ ಬರಪೀಡಿತವೆಂದು ಘೋಷಿಸಲು ಸಾಧ್ಯ ಎಂದಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ಈ ತಿಂಗಳ ಅಂತ್ಯದಲ್ಲಿ ಅಧಿಕಾರಿಗಳ ಸಭೆ ಕೆರೆದಿದ್ದಾರೆ. ಈ ವೇಳೆಗೆ, ಪರಿಸ್ತಿತಿಯ ಚಿತ್ರಣ ಪಡೆಯಲು ಮತ್ತು ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮುಂಗಾರು ವಿಳಂಬಕ್ಕೆ ಹವಾಮಾನ ಬದಲಾವಣೆಯೂ ಕಾರಣವಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಎಲ್‌ನಿನೊ (ಸಮುದ್ರದ ಮೇಲ್ಮೈನಲ್ಲಿ ಶಾಖದ ಹೆಚ್ಚಳ) ಉಂಟಾಗಿದೆ. ಅದು ನೈರುತ್ಯ ಮಾನ್ಸೂನ್‌ ಮೇಲೆ ಪರಿಣಾಮ ಬೀರಿದ್ದು, ಮುಂಗಾರು ಮಳೆಯ ವಿಳಂಬಕ್ಕೆ ಕಾರಣವಾಗಿದೆ. ಎಲ್‌ನಿನೋ ಮತ್ತು ತಾಪಮಾನದ ಏರಿಕೆಯು ಬೆಳೆ ಪದ್ಧತಿ, ಬೆಳೆಗಳ ಮೇಲೆ ಪ್ರಭಾವ ಬೀರುತ್ತವೆ ಎನ್ನುತ್ತಿದ್ದಾರೆ ಹವಾಮಾನ ತಜ್ಞರು.

ಒಂದೆಡೆ ಪರಿಸರ ನಾಶ, ಮತ್ತೊಂದೆಡೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೈಗಾರಿಕೆಗಳು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿವೆ. ಈ ಬದಲಾವಣೆಯು ಮಳೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಇದು ಕೃಷಿ ಕ್ಷೇತ್ರಕ್ಕೆ ಹೊಡೆತ ನೀಡುತ್ತದೆ. ಇದರ ಜೊತೆಗೆ, ಹೆಚ್ಚಿನ ತಾಪಮಾನವು ಹಲವು ಬೆಳೆಗಳ ನಾಶಕ್ಕೆ ಕಾರಣವಾಗುತ್ತದೆ.

ಕೃಷಿ

ಭತ್ತದ ಬೆಳೆ ಹೂಬಿಟ್ಟು, ಕಾಯಿಯಾಗುವ ಸಮಯದಲ್ಲಿ ಭತ್ತದ ಹಲವಾರು ತಳಿಗಳಿಗೆ ಹಗಲಿನಲ್ಲಿ 25° ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದ ಅಗತ್ಯವಿರುತ್ತದೆ. ಆ ವೇಳೆ, 25° ಸೆಲ್ಸಿಯಸ್‌ಗಿಂತ 1° ಸೆಲ್ಸಿಯಸ್‌ ತಾಪಮಾನ ಏರಿಕೆಯಾದರೂ, ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಭತ್ತದ ಬೆಳೆಗಳು ಬೀಜ ತುಂಬುವ ಅವಧಿ ಕಡಿಮೆಯಾಗುತ್ತದೆ. ಸಂತಾನೋತ್ಪತ್ತಿ ಕ್ರಿಯೆ ವೇಗವಾಗುತ್ತದೆ. ಇದರಿಂದಾಗಿ, ಬೀಜಗಳು ಉತ್ತಮವಾಗಿ ಬೆಳೆವಣಿಗೆ ಹೊಂದದೆ, ಜೊಳ್ಳಾಗುತ್ತವೆ. ತಾಪಮಾನದ ಏರಿಕೆಯ ಜೊತೆಗೆ, ಮಳೆಯೂ ಆಗದೇ ಇರುವುದು ಭತ್ತದ ಬೆಳೆಗೆ ಮತ್ತಷ್ಟು ಹೊಡೆತ ನೀಡುತ್ತದೆ.  

 “ಮುಂಗಾರು ಮಳೆ ವಿಳಂಬದಿಂದಾಗಿ ಭತ್ತ, ಸೋಯಾಬೀನ್, ತರಕಾರಿಗಳು, ಜೋಳ, ಕಾಳುಗಳು, ಕಾಫಿ, ಮೆಕ್ಕೆಜೋಳ ಸೇರಿದಂತೆ ಹಲವಾರು ಪ್ರಮುಖ ಬೆಳೆಗಳ ಉತ್ಪಾದನೆ ಕಡಿಮೆಯಾಗಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸುಮಾರು 60% ಬಿತ್ತನೆಯಾಗಿದೆ. ಆದರೂ ಹೆಚ್ಚಿನ ಇಳುವರಿ ನಿರೀಕ್ಷಿಸಲಾಗದು. ಕರಾವಳಿ ಪ್ರದೇಶಗಳಲ್ಲಿ ಭತ್ತ, ಕಾಫಿ ಮತ್ತು ಅಡಿಕೆ ಬೆಳೆಯೂ ನಷ್ಟವನ್ನು ಒಡ್ಡಲಿದೆ” ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವರದಿ ಓದಿದ್ದೀರಾ?: ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ – ಕೇಂದ್ರದ ಉದ್ದೇಶವೇನು? ವಿವಾದ ಯಾಕೆ?

“ಜೂನ್ ಆರಂಭದಲ್ಲಿಯೇ ಮಳೆಯಾಗಿದ್ದರೆ ಕೃಷಿಗೆ ನೆರವಾಗುತ್ತಿತ್ತು. ಆದರೆ, ಮಳೆ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗಿವೆ. ನಮ್ಮಲ್ಲಿ ಹಲವಾರು ಪ್ರದೇಶಗಳು ಮಳೆ ಆಧಾರಿತ ಕೃಷಿ ಪ್ರದೇಶವಾಗಿವೆ. ಮಳೆ ಇಲ್ಲದೆ, ಹಲವರು ಬಿತ್ತನೆಯನ್ನೇ ಮಾಡಿಲ್ಲ” ಎಂದು ಮಂಡ್ಯ ಜಿಲ್ಲೆಯ ಗುಡುಗನಹಳ್ಳಿಯ ಯುವರೈತ ಅಶೋಕ್ ಈದಿನ.ಕಾಮ್‌ಗೆ ಹೇಳಿದ್ದಾರೆ.

“ನಮ್ಮದು ಕರಾವಳಿ ಪ್ರದೇಶ. ಸಮುದ್ರದಲ್ಲಿ ಅಷ್ಟೊಂದು ನೀರಿದ್ದರೂ, ಕುಡಿಯುವ ನೀರಿಗೆ ಹಾಹಾಕಾರವಿದೆ ಕಳೆದ ತಿಂಗಳು ಮಳೆಯಾಗದ ಪರಿಣಾಮ ಕೃಷಿಗಿರಲಿ, ಮಂಗಳೂರಿನ ಜನರಿಗೆ ಕುಡಿಯಲೂ ನೀರಿಲ್ಲದಂತಾಗಿತ್ತು. ಭತ್ತದ ಕೃಷಿಗೆ ಹೆಚ್ಚಿನ ನೀರು ಬೇಕು. ಆದರೆ, ಮಳೆಯೇ ಇಲ್ಲದೆ, ಭತ್ತ ಬಿತ್ತನೆ ಸಾಧ್ಯವಿರಲಿಲ್ಲ. ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಆದರೂ, ಮಳೆ ತಡವಾಗಿದ್ದರಿಂದ ಅಕಾಲಿಕ ಬಿತ್ತನೆಯು ಹೆಚ್ಚಿನ ಇಳುವರಿ ಬಯಸುವಂತಿಲ್ಲ ಎಂಬ ಸಂದೇಶ ನೀಡಿದೆ” ಎಂದು ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನ ಇರ್ಷಾದ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X