ಪಿತೃಪ್ರಭುತ್ವವು ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಒತ್ತಡ ಮತ್ತು ಸೀಮಿತತೆಯನ್ನು ತರುತ್ತದೆ ಎಂದು ತರಬೇತುದಾರರಾದ ಕಿರಣ ಅಭಿಪ್ರಾಯಪಟ್ಟರು.
ರಾಮನಗರದ ಸ್ಪಂದನ ಕಚೇರಿಯಲ್ಲಿ ನಡೆದ ʼಸ್ತ್ರೀವಾದ ಮತ್ತು ಅಸಂಘಟಿತ ಕಾರ್ಮಿಕರ ಕುರಿತ ಅಧ್ಯಯನʼ ವೃತ್ತದಲ್ಲಿ ತರಬೇತುದಾರರಾಗಿ ಮಾತನಾಡಿದ ಅವರು, ಅಸಂಘಟಿತ ಕ್ಷೇತ್ರದ ಕಾರ್ಮಿಕರಾದ ಕಟ್ಟಡ ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರೊಂದಿಗೆ ಪಿತೃಪ್ರಭುತ್ವದ ಪರಿಣಾಮಗಳ ಕುರಿತು ಆಳವಾದ ಚರ್ಚೆ ನಡೆಸಿದರು. ಈ ಕಾರ್ಯಕ್ರಮವು ಕೆಲಸದ ಸ್ಥಳದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಮತ್ತು ಸಾಮಾಜಿಕ ರಚನೆಗಳು, ಕಾರ್ಮಿಕರ ಜೀವನವನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ವಿಶ್ಲೇಷಿಸಿತು.
ಕಿರಣ ಅವರು ಸ್ತ್ರೀವಾದದ ಪರಿಕಲ್ಪನೆಯನ್ನು ವಿವರಿಸಿ, ದೈನಂದಿನ ಜೀವನದಲ್ಲಿ ಸ್ತ್ರೀವಾದಿ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ವಿಧಾನಗಳನ್ನು ತಿಳಿಸಿದರು. ಚಟುವಟಿಕೆಯೊಂದರಲ್ಲಿ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿ ಎದುರಿಸುವ ಸವಾಲುಗಳಾದ ಕಡಿಮೆ ವೇತನ, ಅಸುರಕ್ಷಿತ ವಾತಾವರಣ ಮತ್ತು ಲಿಂಗ ಆಧಾರಿತ ತಾರತಮ್ಯವನ್ನು ಪಟ್ಟಿ ಮಾಡಿ, ಅವುಗಳನ್ನು ಎದುರಿಸುವ ಕುರಿತು ತಮ್ಮ ಅನುಭವ ಹಂಚಿಕೊಂಡರು.

ಒಳಾಂಗಣ ಆಟವೊಂದರ ಮೂಲಕ ಕಾರ್ಮಿಕರು ತಮ್ಮ ಬಾಲ್ಯದ ಕನಸುಗಳನ್ನು ಈಗಿನ ಜೀವನದೊಂದಿಗೆ ಹೋಲಿಕೆ ಮಾಡಿ, ತಮ್ಮ ಆಕಾಂಕ್ಷೆಗಳು ಈಡೇರದಿರುವ ಕಾರಣಗಳನ್ನು ಚಿಂತಿಸಿದರು. ಕಿರಣ ಅವರು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುವ ಮೂಲಕ ಭವಿಷ್ಯದ ಪೀಳಿಗೆಗೆ ಉನ್ನತ ಜೀವನವನ್ನು ಕಟ್ಟಿಕೊಡುವಂತೆ ಕಾರ್ಮಿಕರಿಗೆ ಸಲಹೆ ನೀಡಿದರು.
ಇದನ್ನೂ ಓದಿ: ರಾಮನಗರ | ನಿಂತಿದ್ದ ಕ್ಯಾಂಟರ್‌ಗೆ ಬಸ್ ಡಿಕ್ಕಿ; 20ಕ್ಕೂ ಹೆಚ್ಚು ಮಂದಿಗೆ ಗಾಯ
ಸ್ಪಂದನ ಸಂಸ್ಥೆಯು ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಸಾಮೂಹಿಕವಾಗಿ ಕೆಲಸ ಮಾಡಲು ಬದ್ಧವಾಗಿರುವುದನ್ನು ಒತ್ತಿ ಹೇಳುವ ಮೂಲಕ ಒಗ್ಗಟ್ಟಿನ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವಂತೆ ಕರೆ ನೀಡಿತು.
ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಮಾಲಿನಿ, ಅಂತರ್ಜನಂ, ಅಶ್ವತ, ಕಾವ್ಯ, ಅರ್ಶಿಯಾ, ಯಶೋಧ, ರಾಜೇಶ್ವರಿ, ಮಹಾಲಕ್ಷ್ಮಿ, ಮೇಘನಾ ಸೇರಿದಂತೆ ರಾಮನಗರ ಮತ್ತು ಚನ್ನಪಟ್ಟಣ ತಾಲೂಕಿನ 60ಕ್ಕೂ ಹೆಚ್ಚು ವಿವಿಧ ಕಾರ್ಮಿಕರು ಭಾಗವಹಿಸಿದ್ದರು.