ಭಾರತಕ್ಕೆ ಪ್ರವಾಸ ಹೋಗುವ ತನ್ನ ನಾಗರಿಕರಿಗೆ ಅಮೆರಿಕ ಎರಡನೇ ಹಂತದ ಪ್ರಯಾಣ ಸಲಹೆಯನ್ನು ಬಿಡುಗಡೆ ಮಾಡಿದೆ. ಹಿಂಸೆ ಮತ್ತು ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿರುವ ಕಾರಣದಿಂದಾಗಿ ಮಣಿಪುರಕ್ಕೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ತನ್ನ ನಾಗರಿಕರಿಗೆ ಅಮೆರಿಕ ತಿಳಿಸಿದೆ.
ಜೂನ್ 16ರಂದು ನೀಡಿದ ಪ್ರಯಾಣ ಸಲಹೆಯನ್ನು ಪರಿಷ್ಕರಿಸಿದ್ದು, ಪ್ರವಾಸಿ ತಾಣಗಳಲ್ಲಿ ಲೈಂಗಿಕ ದೌರ್ಜನ್ಯ ಸೇರಿದಂತೆ ಅತ್ಯಾಚಾರ ಮತ್ತು ಇತರ ಹಿಂಸಾತ್ಮಕ ಅಪರಾಧಗಳ ಹೆಚ್ಚುತ್ತಿದೆ ಎಂದು ಉಲ್ಲೇಖಿಸಿದೆ. ಈ ಹಿಂದೆ ಅಮೆರಿಕ ಜಮ್ಮು ಕಾಶ್ಮೀರಕ್ಕೆ ಪ್ರಯಾಣಿಸದಂತೆ ತನ್ನ ನಾಗರಿಕರಿಗೆ ಸಲಹೆ ನೀಡಿತ್ತು.
ಇದನ್ನು ಓದಿದ್ದೀರಾ? ವಿದೇಶ ಪ್ರವಾಸ ಹೊರಟ ಪ್ರಧಾನಿಗೆ ಮಣಿಪುರಕ್ಕೆ ಭೇಟಿ ನೀಡುವ ಸಹಾನುಭೂತಿಯೂ ಇಲ್ಲ: ಕಾಂಗ್ರೆಸ್ ಟೀಕೆ
ಪ್ರಯಾಣ ಸಲಹೆಯಲ್ಲಿ ಏನಿದೆ?
ಯಾವುದೇ ಮುನ್ಸೂಚನೆ ಇಲ್ಲದೆಯೇ ಭಯೋತ್ಪಾದಕ ದಾಳಿಗಳು ಸಂಭವಿಸಬಹುದು ಮತ್ತು ಹೆಚ್ಚಾಗಿ ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು ಮತ್ತು ಸರ್ಕಾರಿ ಕಟ್ಟಡಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಯಬಹುದು ಎಂದು ಭಾರತ ಪ್ರಯಾಣ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ.
ಪೂರ್ವ ಮಹಾರಾಷ್ಟ್ರ, ಉತ್ತರ ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ಪಶ್ಚಿಮದ ಕೆಲವು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಬೇಕಾದರೆ ಅಮೆರಿಕದ ಸರ್ಕಾರಿ ನೌಕರರು ವಿಶೇಷ ಅನುಮತಿಯನ್ನು ಪಡೆಯಬೇಕು ಎಂದು ಸೂಚಿಸಲಾಗಿದೆ.
ಸಾಟೆಲೈಟ್ ಫೋನ್‌ಗಳು ಅಥವಾ ಜಿಪಿಎಸ್ ಉಪಕರಣಗಳನ್ನು ಒಯ್ಯಬೇಡಿ. $200,000 ದಂಡ ಅಥವಾ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ತಿಳಿಸಲಾಗಿದೆ. ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುವುದನ್ನು ತಪ್ಪಿಸಿ ಎಂದೂ ತಿಳಿಸಲಾಗಿದೆ. ವೈಯಕ್ತಿಕ ಭದ್ರತಾ ಕ್ರಮಗಳನ್ನು ಕಾಪಾಡಿಕೊಳ್ಳಿ, ಜಾಗರೂಕರಾಗಿರಿ ಎಂದು ತಿಳಿಸಲಾಗಿದೆ.
ಹೆಚ್ಚಿನ ಅಪಾಯದ ಪ್ರದೇಶಗಳು
ಸಲಹೆಯಲ್ಲಿ ಹೆಚ್ಚುವರಿ ಎಚ್ಚರಿಕೆಯಿಂದ ಇರಬೇಕಾದ ಪ್ರದೇಶಗಳ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರ, ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಪ್ರದೇಶಗಳು ಮತ್ತು ಮಧ್ಯ ಮತ್ತು ಪೂರ್ವ ಭಾರತದ ಕೆಲವು ಭಾಗಗಳು ಸೇರಿವೆ. ಕೆಲವು ರಾಜ್ಯಗಳ ರಾಜಧಾನಿ ನಗರಗಳನ್ನು ಹೊರತುಪಡಿಸಿ ಇತರೆಡೆ ಭೇಟಿ ನೀಡುವ ಮೊದಲು ಯುಎಸ್ ಅಧಿಕಾರಿಗಳು ಅನುಮತಿ ಪಡೆಯಬೇಕಾಗಿದೆ.
ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಮೇಘಾಲಯ, ಒಡಿಶಾ ರಾಜ್ಯಗಳ ರಾಜಧಾನಿ ನಗರಗಳನ್ನು ಮೀರಿ ಪ್ರಯಾಣಿಸಲು ಯುಎಸ್ ಸರ್ಕಾರಿ ನೌಕರರು ಅನುಮೋದನೆ ಪಡೆಯಬೇಕು ಎಂದು ಸಲಹೆಯಲ್ಲಿ ಉಲ್ಲೇಖಿಸಲಾಗಿದೆ.
