ಕರ್ಬಲಾದಲ್ಲಿ ಘೋರವಾಗಿ ಮೃತಪಟ್ಟಿದ್ದ ಪ್ರವಾದಿ ಪೈಗಂಬರ್ ವಂಶಸ್ಥರ ನೆನಪಿಗಾಗಿ ಪ್ರತಿ ವರ್ಷ ಪಂಜಾಗಳನ್ನು ಕೂರಿಸಿ ಆಚರಣೆಗೈದು ಹಿಂದೂ ಮುಸ್ಲಿಂ ಭಾವೈಕ್ಯೆತೆಯನ್ನು ಸಾರಲಾಗುತ್ತಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಗುರಪ್ಪ ಗೊಲ್ಲರ ಮನೆಯಲ್ಲಿ ಬೀಬಿ ಫಾತೀಮಾ ಅವರು ಪಂಜಾ ಕೂರಿಸಿ ಮೊಹರಂ ಆಚರಣೆಗೆ ಚಾಲನೆ ನೀಡಿದರು.
ಈ ದಿನ.ಕಾಮ್‌ನೊಂದಿಗೆ ಗುರಪ್ಪ ಗೊಲ್ಲರ್ ಮಾತನಾಡಿ, “ನಾವು ನಮ್ಮ ತಂದೆಯವರ ಕಾಲದಿಂದಲೂ ಈ ಮೊಹರಂ ಆಚರಣೆ ನಡೆಸುತ್ತಿದ್ದೇವೆ. ಕಳೆದ ನಾಲ್ಕು ವರ್ಷದ ಹಿಂದೆ ಭಕ್ತರು ಪಂಜಾವನ್ನು ಮಾಡಿಸಿ ಕೊಟ್ಟಿದ್ದಾರೆ. ಅಲ್ಲಿಂದ ಪಂಜಾವನ್ನು ಮನೆಯಲ್ಲಿಯೇ ಕೂರಿಸಿ ಪೂಜೆ, ಫಾತೇಹಾವನ್ನುಮಾಡಲಾಗುತ್ತದೆ” ಎಂದರು.
“ಈ ಆಚರಣೆಯನ್ನು ಮಾಡಲು ನಮ್ಮಲ್ಲಿ ಹಿಂದೂ-ಮುಸ್ಲಿಂ ಬೇಧದ ವಿಚಾರವೇ ಹೊಳೆಯುವುದಿಲ್ಲ. ಕಾರಣ, ಮೊಹರಂ ಆಚರಣೆಯು ಪರಸ್ಪರ ಸೌಹಾರ್ದತೆ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ. ಹೀಗಾಗಿ ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಸಾಗುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಿರಿಯ ರೈತರಿಗೆ ಪಿಂಚಣಿ, ಸರ್ಕಾರಿ ಶಾಲಾ ಮಕ್ಕಳಿಗೆ ಕೃಪಾಂಕ ನೀಡಿ: ಶಾಸಕ ಬಿ ಆರ್ ಪಾಟೀಲ್
ರಾಯಸಾಬ ಕುನ್ನೂರ ಮಾತನಾಡಿ, “ನಾನು ಸಣ್ಣವನಿದ್ದಾಗಿನಿಂದಲೂ ಈ ಮೊಹರಂ ಆಚರಣೆ ನೋಡುತ್ತಿದ್ದೇನೆ. ಎಂದಿಗೂ ಕೂಡಾ ಜಾತಿ ಧರ್ಮವೆಂದು ಹೊಡೆದಾಡಿಲ್ಲ. ಜಗಳವಾಡಿ ಛಿದ್ರವಾಗಿದ್ದರೂ ಮೊಹರಂ ಬಂದಾಗ ಸಹಜವಾಗಿ ಒಂದೇ ಕುಟುಂಬದವರಂತೆ ಒಂದಾಗುತ್ತಾರೆ. ನಮ್ಮ ದೇವರು ನಿಮ್ಮ ದೇವರು ಅಂತ ಜಗಳವಾಡಿದ್ದನ್ನು ನಾನಿಲ್ಲಿ ನೋಡಿಲ್ಲ. ಎಪ್ಪತ್ತು ವರ್ಷದ ನನ್ನ ಆಯುಷ್ಯದಲ್ಲಿ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಶಾಂತಿಯುತವಾಗಿ ಸಾಗಿದ್ದೇವೆ. ಇನ್ನು ಮುಂದಿನ ಪೀಳಿಗೆಯು ಹೀಗೆ ಭಾವೈಕ್ಯೆತೆ ಕಾಪಾಡಲು ಶಾಂತಿ ಮತ್ತು ಸೌಹಾರ್ದತೆಯಿಂದ ಮುನ್ನಡೆಯಬೇಕು” ಎಂದರು.