ಬೇರೆ ಧರ್ಮದ ಯುವಕನೊಂದಿಗೆ ಮದುವೆಯಾದ ಕಾರಣ ಕುಟುಂಬಸ್ಥರು ತಮ್ಮ ಮನೆ ಮಗಳ ಶ್ರಾದ್ಧವನ್ನು ಮಾಡಿದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ಯುವತಿ ಮನೆ ಬಿಟ್ಟು ಹೋಗಿ ಮದುವೆಯಾದ 12 ದಿನಗಳ ನಂತರ ಶ್ರಾದ್ಧ ಮಾಡಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಯುವತಿಯ ಚಿಕ್ಕಪ್ಪ ಸೋಮನಾಥ್ ಬಿಸ್ವಾಸ್, “ಆಕೆ ನಮ್ಮ ಪಾಲಿಗೆ ಸತ್ತಂತೆ. ನಾವು ಅವಳಿಗೆ ಮದುವೆ ಗೊತ್ತು ಮಾಡಿದ್ದೆವು. ಆದರೆ ನಮ್ಮ ಮಾತನ್ನು ಆಕೆ ಕೇಳಿಲ್ಲ. ನಮ್ಮನ್ನು ಬಿಟ್ಟು ಹೋಗಿ ಬೇರೆ ಮದುವೆ ಆಗಿದ್ದಾಳೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಂತರ್ಜಾತಿ ವಿವಾಹ | ಶುದ್ಧೀಕರಣ ಹೆಸರಲ್ಲಿ ತಲೆ ಬೋಳಿಸಿಕೊಂಡ ಯುವತಿ ಕುಟುಂಬದ 40 ಸದಸ್ಯರು
ತಲೆ ಬೋಳಿಸುವುದು ಸೇರಿದಂತೆ ಶ್ರಾದ್ಧದ ಎಲ್ಲಾ ವಿಧಿಗಳನ್ನು ಕುಟುಂಬ ಅನುಸರಿಸಿದೆ. ಹಾಗೆಯೇ ಕಾರ್ಯದ ವೇಳೆ ಯುವತಿಯ ಭಾವಚಿತ್ರಕ್ಕೆ ಹಾರವನ್ನು ಹಾಕಿಯೂ ಇರಿಸಲಾಗಿತ್ತು. “ನಾವು ಅವಳ ಎಲ್ಲಾ ವೈಯಕ್ತಿಕ ವಸ್ತುಗಳನ್ನು ಸುಟ್ಟು ಹಾಕಿದ್ದೇವೆ” ಎಂದು ತಾಯಿ ತಿಳಿಸಿದ್ದಾರೆ.
ಸ್ಥಳೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವಾಗಲೇ ಯುವತಿಗೆ ಕುಟುಂಬಸ್ಥರು ಮದುವೆ ನಿಶ್ಚಯ ಮಾಡಿದ್ದರು. ಆದರೆ ತಾನು ಮದುವೆ ಆಗುವುದಿಲ್ಲ ಎಂದು ಯುವತಿ ಹೇಳಿದ್ದಳು. ಕುಟುಂಬಸ್ಥರೊಂದಿಗೆ ಹಲವು ಬಾರಿ ವಾದ ಮಾಡಿದ್ದಳು. ಮನೆಯವರು ವಿವಾಹಕ್ಕೆ ಒತ್ತಡ ಹೇರಿದಾಗ ಬೇರೆ ಧರ್ಮಕ್ಕೆ ಸೇರಿದ ತನ್ನ ಸ್ನೇಹಿತನೊಂದಿಗೆ ಮನೆ ತೊರೆದು ಹೋಗಿದ್ದಾಳೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಶೂದ್ರ ಧರ್ಮವೇ ಬೇರೆ, ಸನಾತನ ಧರ್ಮವೇ ಬೇರೆ: ಡಾ.ಬೂದಾಳು
ಯುವತಿಯ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಕುಟುಂಬದ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎಂದು ಚಿಕ್ಕಪ್ಪ ಬಿಸ್ವಾಸ್ ಹೇಳಿದ್ದಾರೆ. ಇನ್ನೊಂದೆಡೆ ಯುವತಿ ಜಿಲ್ಲೆಯ ಬೇರೆಡೆ ತನ್ನ ಅತ್ತೆ-ಮಾವನ ಜೊತೆ ಇದ್ದು, ಸದ್ಯ ಎಲ್ಲಾ ಬೆಳವಣಿಗೆಯಿಂದಾಗಿ ಮಾನಸಿಕವಾಗಿ ನೊಂದಿದ್ದಾಳೆ. ಆದ್ದರಿಂದ ಮನಶ್ಶಾಸ್ತ್ರಜ್ಞರ ಸಮಾಲೋಚನೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.
“ಘಟನೆಯ ಬಗ್ಗೆ ನಮಗೆ ತಿಳಿದುಬಂದಿದೆ. ಯುವತಿ ವಯಸ್ಕಳು. ಆಕೆಯ ಬದುಕಿನ ಬಗ್ಗೆ ಆಕೆ ನಿರ್ಧಾರ ಕೈಗೊಳ್ಳುವ ಅವಕಾಶವಿದೆ. ಆದ್ದರಿಂದ ಈ ಸಂಬಂಧ ಯಾರೂ ದೂರು ದಾಖಲಿಸಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
