ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ 346 ಗ್ರಾಮಗಳಿಗೆ ಮತ್ತು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ 172 ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಭದ್ರಾ ಡ್ಯಾಂನಿಂದ ನೀರು ಪೂರೈಕೆ ಮಾಡುವ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕ ಎಂದು ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಆರೋಪಿಸಿದ್ದು, ಕೂಡಲೇ ನಿಲ್ಲಿಸುವಂತೆ ಹೋರಾಟ ನಡೆಸಲು ಮುಂದಾಗಿದೆ.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟದ ಮುಖಂಡರು “ರಾಜ್ಯದ ಕಾಂಗ್ರೆಸ್ ಸರ್ಕಾರ ದಾವಣಗೆರೆ ಜಿಲ್ಲೆಯ ರೈತರೊಂದಿಗೆ ಹುಡುಗಾಟಿಕೆ ಆಡುತ್ತಿದೆ. ಭದ್ರಾ ರೈತರ ಜೀವನಾಡಿ ಎಂದು ನಂಬಿದ ರೈತರನ್ನು ವಂಚಿಸಿ, ಅವರ ಕತ್ತು ಹಿಸುಕುವ ಅಮಾನವೀಯ ಕೃತ್ಯ ಇದಾಗಿದೆ. ಈ ಕಾಮಗಾರಿ ನಡೆಯುವ ಸ್ಥಳ ಬಫರ್ ಜೋನ್ ಆಗಿದ್ದು, ಯಾವುದೇ ಕಾಮಗಾರಿ ಕೈಗೊಳ್ಳುವುದು ಡ್ಯಾಂನ ಅಭದ್ರತೆ ಕಾರಣವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಭದ್ರಾ ಡ್ಯಾಂ ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ. ಬಲದಂಡೆ ನಾಲೆ ಮೂಲಕ ದಾವಣಗೆರೆ ಜಿಲ್ಲೆಗೆ ನೀರು ಪೂರೈಕೆ ಆಗುತ್ತದೆ. ಈ ನಾಲೆ ಕಲ್ಲು ಗುಡ್ಡದ ನಡುವೆ ಹಾದು ಬಂದಿದೆ. ಈಗ ಬಲದಂಡೆ ನಾಲೆಯನ್ನು ಸೀಳಿ ಹೊಸದುರ್ಗ, ತರೀಕೆರೆ, ಅಜ್ಜಂಪುರ ತಾಲ್ಲೂಕಿನ ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನೀರು ಪೈಪು ಅಳವಡಿಸುವ ಕಾಮಗಾರಿ ನಡೆದಿದೆ. ಇದು ನಾಲೆ ಮಟ್ಟದಿಂದ 8 ಅಡಿ ಕೆಳಮಟ್ಟದಲ್ಲಿದ್ದು, ನೀರು ಸರಾಗವಾಗಿ ಮತ್ತು ರಭಸವಾಗಿ ಹರಿಯುವಂತೆ ಮಾಡುವ ಚಾಣಾಕ್ಷ ತಂತ್ರ ಮಾಡಲಾಗಿದೆ” ಎಂದು ಆರೋಪಿಸಿದರು.
“ಯೋಜನೆಯ ಪೈಪ್ ಲೈನ್ ಭದ್ರಾ ನಾಲೆಗಿಂತ 8 ಅಡಿ ಕೆಳಮಟ್ಟದಲ್ಲಿರುವುದರಿಂದ ಸಹಜವಾಗಿ ನೀರು ನಮ್ಮ ಜಿಲ್ಲೆಯ ಕಡೆಗೆ ಹರಿಯುವುದಿಲ್ಲ. ಆಗ ದಾವಣಗೆರೆ ಜಿಲ್ಲೆಯ ರೈತರು ಭತ್ತದ ನಾಟಿ ಮಾಡುವುದಿರಲ್ಲಿ, ಇರುವ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಜಿಲ್ಲೆಯ ರೈತರಿಗೆ ಬರಸಿಡಿಲು ಬಡಿದಂತಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಸುಮಾರು 1600 ಕೋಟಿ ರೂ. ಅಂದಾಜಿನ ಇಂತಹ ಬೃಹತ್ ಕಾಮಗಾರಿ ಕೈಗೊಳ್ಳುವ ಮುನ್ನ ಪ್ರದೇಶದ ಜನಪ್ರತಿನಿಧಿಗಳ, ರೈತರ ಸಭೆ ನಡೆಸಿ, ಸಮಾಲೋಚನೆ ಮಾಡಿಲ್ಲ. ಹೊಸದುರ್ಗ, ತರೀಕೆರೆ, ಅಜ್ಜಂಪುರ ತಾಲ್ಲೂಕುಗಳಿಗೆ ಹಿರಿಯೂರಿನ ವಾಣಿ ವಿಲಾಸ ಡ್ಯಾಂ ಸಮೀಪವಾಗಿದ್ದು, ದೂರದ ಭದ್ರಾ ಡ್ಯಾಂ ಮೇಲೆ ಈ ಸರ್ಕಾರದ ಕಣ್ಣು ಬಿದ್ದಿರುವುದು ಸೋಜಿಗದ ಸಂಗತಿ. ರಾಜ್ಯದ ಕಾಂಗ್ರೆಸ್ ಸರ್ಕಾರ ಸೌಜನ್ಯಕ್ಕಾದರೂ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಅಭಿಪ್ರಾಯ ಪಡೆಯಬೇಕಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಆಶ್ರಮದ ಕಾರ್ಯಕ್ರಮಕ್ಕೆ ಟ್ರಸ್ಟ್ ಸದಸ್ಯರು ಭಾಗವಹಿಸಲು ಆಶ್ರಮ ರಕ್ಷಣಾ ಸಮಿತಿ ಆಕ್ಷೇಪ
“ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಹೊಸದುರ್ಗ, ತರೀಕೆರೆ, ಅಜ್ಜಂಪುರ ತಾಲ್ಲೂಕುಗಳ ಹಳ್ಳಿಗಳ ಕಡೆಯಿಂದ ಮೊದಲು ಕಾಮಗಾರಿ ಪ್ರಾರಂಭವಾಗಬೇಕಾಗಿತ್ತು. ಆದರೆ ಭದ್ರಾ ಡ್ಯಾಂ ಬುಡದಿಂದ ಕಾಮಗಾರಿ ಪ್ರಾರಂಭವಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಕುತಂತ್ರ ಅಡಗಿದೆ” ಎಂದು ಅನುಮಾನ ವ್ಯಕ್ತಪಡಿಸಿದರು.
“ಭದ್ರಾ ಡ್ಯಾಂ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿ, ಸೂಕ್ತ ಭದ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಡ್ಯಾಂ ನಿರ್ವಹಣೆಯ ಕ್ರೇನ್ ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಡ್ಯಾಂ ತಳಭಾಗದ ಬಫರ್ ಜೋನ್ ಪ್ರದೇಶದಲ್ಲಿ ಯಾವುದೇ ರೀತಿಯ ಅವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಳ್ಳಬಾರದು. ಜೂನ್ 23ರ ನಾಳೆ ಬೆಳಿಗ್ಗೆ 10 ಗಂಟೆಗೆ ಭದ್ರಾ ಡ್ಯಾಂ ಬಲದಂಡೆ ನಾಲೆ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೊಟ್ಟಿ ಬುತ್ತಿ ಕಟ್ಟಿಕೊಂಡು ಬರಬೇಕು. ವರ್ಷಗಳಿಂದ ಜಿಲ್ಲಾ ರೈತರ ಒಕ್ಕೂಟದಿಂದ ಸರ್ಕಾರಕ್ಕೆ ಆಗ್ರಹಿಸಲಾಗಿದ್ದರೂ ಈ ಕಿವುಡು ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಳೆ ಬಂದರೆ ಸೋರುವ ಬೀಳುವ ಹೆಂಚು ಪ್ರಾಣಿಗಳ ವಾಸಸ್ಥಾನವಾದ ಅಮರಾವತಿ ಶಾಲೆ; ಶಿಕ್ಷಣಾಸಕ್ತರ ಆರೋಪ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತ ಒಕ್ಕೂಟದ ಕೊಳೇನಹಳ್ಳಿ ಸತೀಶ್, ಲೋಕಿಕೆರೆ ನಾಗರಾಜ್, ಧನಂಜಯ, ಎಂ. ಬಸವರಾಜ್ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು..