ಅಪರಿಚಿತ ದುಷ್ಕರ್ಮಿಗಳ ಗುಂಪು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಕಚೇರಿಯ ಮೇಲೆ ದಾಳಿ ನಡೆಸಿರುವ ಘಟನೆ ಪಶ್ಚಿಮ ಮೇಘಾಲಯದ ತುರ ಪಟ್ಟಣದಲ್ಲಿ ನಡೆದಿದೆ.
ಕಚೇರಿಯ ಹೊರಗೆ ನೆರೆದಿದ್ದ ಉದ್ರಿಕ್ತರ ಗುಂಪು ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿತು. ಕೆಲವರು ಒಳಗೆ ನುಗ್ಗಲೂ ಯತ್ನಿಸಿದರು. ಕೊನೆಗೆ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರಿಗೆ ಯಾವುದೇ ಪೆಟ್ಟಾಗಿಲ್ಲ. ಆದರೆ, ಐವರು ಪೊಲೀಸರು ಕಲ್ಲು ತೂರಾಟದಿಂದ ಗಾಯಗೊಂಡಿದ್ದಾರೆ. ನೂರಕ್ಕೂ ಅಧಿಕ ಸಂಖ್ಯೆಯ ಪ್ರತಿಭಟನಾಕಾರರು ಕಚೇರಿಯನ್ನು ಸುತ್ತುವರೆದಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಪಟ್ಟಣದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತುರ ಪಟ್ಟಣವನ್ನು ಚಳಿಗಾಲದ ರಾಜಧಾನಿ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ವಿವಿಧೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಕಲ್ಲು ತೂರಾಟ ಮಾಡಿದವರು ಪ್ರತಿಭಟನಾನಿರತರಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ಮಾ ಅವರು ಗರೋ ಹಿಲ್ಸ್ ರಾಜ್ಯ ಜನಾಂದೋಲನ ಸಮಿತಿ, ಎಸಿಎಚ್‌ಐಕೆ ಸಂಘಟನೆಗಳ, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾಗ ದಾಂಧಲೆ ಘಟನೆ ನಡೆದಿದೆ. ತುರ ಪಟ್ಟಣವನ್ನು ಮೇಘಾಲಯದ ಚಳಿಗಾಲದ ರಾಜಧಾನಿ ಮಾಡಬೇಕು ಎಂದು ಮಾತುಕತೆಗೆ ಬಂದಿದ್ದ ಗುಂಪು ಒತ್ತಾಯಿಸಿತ್ತು.
ಈ ಸುದ್ದಿ ಓದಿದ್ದೀರಾ: ಆರು ಮಂದಿ ಹೈಕೋರ್ಟ್ ನ್ಯಾಯಾಧೀಶರಿಗೆ ಜೀವ ಬೆದರಿಕೆ; ₹50 ಲಕ್ಷಕ್ಕೆ ಡಿಮಾಂಡ್
‘ಮಾತುಕತೆ ಅಂತ್ಯವಾಗುವ ಹೊತ್ತಿನಲ್ಲಿ ಹೊರಗೆ ಗದ್ದಲ ಕೇಳಿಸಿತು. ನಾನು ಹೊರಗೆ ಬಂದು ಯಾವುದೇ ಅಹಿತಕರ ಘಟನೆಗೆ ಕಾರಣವಾಗದಂತೆ ಅವರಿಗೆ ಹೇಳಿದೆ. ಸರ್ಕಾರೇತರ ಸಂಸ್ಥೆಗಳ, ಸಂಘಟನೆಗಳ ಮುಖಂಡರೂ ಹೊರಗೆ ಬಂದು ಉದ್ರಿಕ್ತ ಗುಂಪಿನ ಜೊತೆ ಮಾತನಾಡಿದರು. ಆ ಗುಂಪಿನವರು ಯಾರು ಎನ್ನುವುದೇ ತಮಗೆ ತಿಳಿದಿಲ್ಲ ಎಂದು ಸಂಘಟನೆಗಳ ಮುಖಂಡರು ತಿಳಿಸಿದರು. ಆ ಗುಂಪು ತೊಂದರೆ ಉಂಟು ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಬಂದಂತಿತ್ತು’ ಎಂದು ಮುಖ್ಯಮಂತ್ರಿಗಳು ವಿಡಿಯೋ ಹೇಳಿಕೆ ನೀಡಿದ್ದಾರೆ.
ಕಲ್ಲು ತೂರಾಟದಿಂದ ತೀವ್ರವಾಗಿ ಗಾಯಗೊಂಡಿರುವ ಐವರು ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಘೋಷಿಸಿದೆ. ಜೊತೆಗೆ ಅವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನೂ ಘೋಷಿಸಿದೆ.