ಮೈಕ್ರೋಸ್ಕೋಪು | ಮಾರುಕಟ್ಟೆಗೆ ಕಾಲಿಡಲಿದೆ ‘ಒಳ್ಳೆಯ ಕೃತಕ ಮಾಂಸ’

Date:

ಯಾರು ಬಳಸುತ್ತಾರೋ ಇಲ್ಲವೋ, ಕೃತಕ ಮಾಂಸವಂತೂ ಭವಿಷ್ಯದ ಮಾರುಕಟ್ಟೆಯಲ್ಲಿ ವಿಶೇಷ ಪದಾರ್ಥವಾಗಿ ಸಿಗುವುದು ನಿಶ್ಚಿತ. ಈಗಾಗಲೇ ಸಿಂಗಾಪುರದ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಮುಂದೆ ಯುರೋಪು, ಅಮೆರಿಕದಲ್ಲಿಯೂ ವ್ಯಾಪಕವಾಗಿ ಮಾರಾಟವಾಗಬಹುದು

ಮೊನ್ನೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ ‘ಫುಡ್‌ ಅಂಡ್‌ ಡ್ರಗ್ಸ್‌ ಅಥಾರಿಟಿ’ (ಎಫ್‌ಡಿಎ) ಕೃತಕ ಮಾಂಸ ಮಾರಾಟಕ್ಕೆ ಅನುಮತಿ ನೀಡಿದ್ದು ಸುದ್ದಿಯಾಗಿತ್ತು. ಜೂನ್‌ ತಿಂಗಳಿನಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಈಟ್‌ ಜಸ್ಟ್‌ ಕಂಪನಿ ಮಾರಾಟ ಮಾಡುತ್ತಿರುವ ಗುಡ್‌ ಮೀಟ್‌ ಮತ್ತು ಬರ್ಕಲಿಯಲ್ಲಿರುವ ಅಪ್ಸೈಡ್‌ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಎಫ್‌ಡಿಎ ಅನುಮತಿ ನೀಡಿತು. ಇವುಗಳ ಉತ್ಪನ್ನ ಇನ್ನೇನಲ್ಲ, ಕೃತಕ ಚಿಕನ್‌ ಅಥವಾ ಕೃತಕವಾಗಿ ತಯಾರಿಸಿದ ಕೋಳಿಯ ಮಾಂಸದ ತೆರನಾದ ಉತ್ಪನ್ನ. ಗಮನಿಸಿ… ಈಟ್‌ ಜಸ್ಟ್‌ ಎನ್ನುವ ಕಂಪನಿ ಅದಕ್ಕೆ ‘ಗುಡ್‌ ಮೀಟ್‌’ ಎಂದು ಕರೆದಿರುವುದು ವಿಶೇಷ. ಅರ್ಥಾತ್‌, ಒಳ್ಳೆಯ ಮಾಂಸ.

ಮಾಂಸಾಹಾರ ಮತ್ತು ಶಾಕಾಹಾರಿಗಳ ನಡುವೆ ವಾದ-ವಿವಾದಗಳು ಆಗುವಾಗ ಮೊದಲು ಕೇಳಿಸುವ ಪದವೇ ‘ಒಳ್ಳೆಯದು.’ ಯಾವ ಆಹಾರ ದೇಹಕ್ಕೆ ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎನ್ನುವುದು ಒಂದೆಡೆ. ಇನ್ನೊಂದೆಡೆ, ಯಾವ ಆಹಾರ ನೈತಿಕವಾಗಿ ಒಳ್ಳೆಯದು ಎನ್ನುವುದು. ನೈತಿಕತೆಯ ಪ್ರಶ್ನೆಯೋ, ಪೌಷ್ಟಿಕತೆಯ ಪ್ರಶ್ನೆಯೋ… ಉತ್ತರ ಮಾತ್ರ ಸರಳವಲ್ಲ. ಎರಡಕ್ಕೂ ಇದಮಿತ್ಥಂ ಎಂದು ಹೇಳಿದವರಿಲ್ಲ. ಹಾಗಿದ್ದೂ ಇತ್ತೀಚೆಗೆ ಮಾಂಸದ ಉತ್ಪನ್ನಗಳ ಬಗ್ಗೆ ಜನ ದೂರುವುದು ಹೆಚ್ಚಿದೆ. ಕೆಲವರು ಧಾರ್ಮಿಕ ಕಾರಣಗಳಿಗಾಗಿ ಅದನ್ನು ಕೆಟ್ಟದ್ದು ಎಂದರೆ, ಇನ್ನು ಕೆಲವರು ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರವನ್ನು ದೂರ ಇಡುತ್ತಿದ್ದಾರೆ. ಮತ್ತೂ ಕೆಲವರು ಪ್ರಾಣಿದಯೆ ಎನ್ನುವ ರಾಜಕೀಯ ಕಾರಣಗಳಿಂದಲೂ ವೇಗನ್‌ ಎನ್ನುವ ಚಾಳಿ ಹತ್ತಿಸಿಕೊಂಡಿದ್ದಾರೆ. ಇನ್ನು ಕೆಲವರು ಪರಿಸರದ ದೃಷ್ಟಿಯಿಂದ ಮಾಂಸಾಹಾರ ಈ ಭೂಮಿಗೆ ಹಿತವಲ್ಲ ಎಂದು ಅಭಿಪ್ರಾಯಪಡುತ್ತಾರೆ.

ಕಾರಣ ಏನೇ ಇರಲಿ, ಮಾಂಸಾಹಾರ ಬೇಡ ಎನ್ನುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದೇ ಸಮಯದಲ್ಲಿ ಮಾಂಸಾಹಾರದ ಮಾರಾಟವೂ ಹೆಚ್ಚುತ್ತಲೇ ಇದೆ ಎನ್ನುವುದು ವಿಪರ್ಯಾಸವಾದರೂ ಸತ್ಯ. ಭಾರತದಲ್ಲಿ ಪ್ರತೀ ಹತ್ತು ಮಂದಿಯಲ್ಲಿ ಏಳು ಮಂದಿ ವಾರದಲ್ಲಿ ಒಂದು ದಿನವಾದರೂ ಮಾಂಸ ಸೇವಿಸುತ್ತಾರೆ ಎನ್ನುತ್ತದೆ ರಾಷ್ಟ್ರೀಯ ಆಹಾರ ಮತ್ತು ಆರೋಗ್ಯ ಸಮೀಕ್ಷೆಯ ವರದಿ. ಕಳೆದ ಆರು ವರ್ಷಗಳಲ್ಲಿ ಭಾರತದ ಪುರುಷರಲ್ಲಿ ಮಾಂಸವನ್ನು ಸೇವಿಸುವವರ ಪ್ರಮಾಣ ಶೇಕಡ 44ರಿಂದ 52ಕ್ಕೆ ಏರಿತ್ತು. ಮಹಿಳೆಯರೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಈ ಹಿಂದೆ ಮಾಂಸ ಸೇವಿಸುತ್ತಿದ್ದವರ ಪ್ರಮಾಣ ಕೇವಲ 38 ಶತಾಂಶವಷ್ಟೆ ಇದ್ದಿದ್ದು, ಕಳೆದ ಆರು ವರ್ಷಗಳಲ್ಲಿ ನಾಲ್ಕು ಶತಾಂಶದಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಹಾಗೆಯೇ ಮಾಂಸದ ಮಾರಾಟವೂ ಹೆಚ್ಚಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಇದರ ಅರ್ಥ ಇಷ್ಟೇ… ಮಾಂಸದ ಬಗ್ಗೆ ಅಸಹನೆ ಇದ್ದರೂ ಅದನ್ನು ಬಿಟ್ಟು ಇರಲಾಗದ ಪರಿಸ್ಥಿತಿ ಬಂದಿದೆ. ಕೇವಲ ಸಸ್ಯಾಹಾರದಿಂದ ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನೂ ಒದಗಿಸುವುದು ಅಸಾಧ್ಯವೂ ಹೌದು. ಕೆಲವು ಜೀವಸತ್ವಗಳು ಸಸ್ಯಾಹಾರಗಳಿಂದ ದೊರೆಯುವುದಿಲ್ಲ. ಇನ್ನೊಂದೆಡೆ, ಒಂದು ಕಿಲೋ ಮಾಂಸ ಉತ್ಪಾದನೆಗೆ ನಾವು ಬಳಸಬೇಕಾದ ಧಾನ್ಯ ಮತ್ತು ನೀರಿನ ಪ್ರಮಾಣವನ್ನು ಲೆಕ್ಕ ಹಾಕಿದರೆ, ಅದರಲ್ಲಿ ಹತ್ತಾರು ಮಂದಿಗೆ ಸಸ್ಯಾಹಾರವನ್ನು ಸುಲಭವಾಗಿ ಒದಗಿಸಬಹುದು. ಮಾಂಸಾಹಾರ ಹೀಗೆಯೇ ಹೆಚ್ಚಿದಲ್ಲಿ, ನಾಳೆ ಭೂಮಿಯ ಎಲ್ಲೆಡೆ ನೀರಿನ ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ ಎನ್ನುವ ಆತಂಕವೂ ಇದೆ.

ಈ ಹಿನ್ನೆಲೆಯಲ್ಲಿ ಒಂದು ದಶಕದ ಹಿಂದೆ ಕೃತಕ ಮಾಂಸವನ್ನು ತಯಾರಿಸಬಾರದೇಕೆ ಎನ್ನುವ ಪರಿಕಲ್ಪನೆಯೂ ಹುಟ್ಟಿತು. ಕೃತಕ ಮಾಂಸ ಎಂದರೆ ಇನ್ನೇನಲ್ಲ. ಮಾಂಸದಲ್ಲಿ ಇರುವಂತಹ ಅಂಗಾಂಶಗಳನ್ನು, ಜೀವಕೋಶಗಳನ್ನು ಕೃಷಿ ಮಾಡಿ ಸೃಷ್ಟಿಸುವುದು ಎಂದರ್ಥ. ಕೃತಕ ಮಾಂಸ ಎಂದು ನಾವು ಸಾಮಾನ್ಯವಾಗಿ ಹೇಳಿದರೂ, ವಿಜ್ಞಾನಿಗಳು ಇವಕ್ಕೆ ತರಹೇವಾರಿ ಹೆಸರು ಕೊಟ್ಟಿದ್ದಾರೆ. ಜೀವಕೋಶಗಳಾಹಾರ, ಪ್ರಾಣಿರಹಿತ ಮಾಂಸ, ಕೃಷಿ ಮಾಡಿದ ಮಾಂಸ, ಕೃತ್ರಿಮ ಮಾಂಸ ಇತ್ಯಾದಿ ಹಲವು ಹೆಸರು. ಹೆಸರು ಏನೇ ಇರಲಿ, ತಯಾರಿಸುವ ವಿಧಾನ ಮಾತ್ರ ಬಹಳ ಜಟಿಲವಾದ ತಂತ್ರಜ್ಞಾನ. ಮಾಂಸ ಎಂದರೆ ಅದರಲ್ಲಿ ಸ್ನಾಯುಗಳು ಇರಬೇಕು. ರಕ್ತ ಇರಬೇಕು. ಕೊಬ್ಬು ಅಥವಾ ಚರ್ಬಿ ಇರಬೇಕು. ಇವೆಲ್ಲವನ್ನೂ ಹಿಡಿದಿಡುವ ನಾರಿನ ಅಂಶವೂ ಇರಬೇಕು. ಇವು ಯಾವುವೂ ಸಸ್ಯಗಳಲ್ಲಿ ತಯಾರಾಗುವಂಥದ್ದಲ್ಲ. ಹೀಗಾಗಿ, ಇವೆಲ್ಲವನ್ನೂ ಪ್ರಾಣಿಗಳಲ್ಲಿ ಅವು ಹುಟ್ಟುವಂತೆಯೇ ಹುಟ್ಟಿಸಿ, ಜೋಡಿಸಿದರಷ್ಟೆ ಅದು ಮಾಂಸ ಎನ್ನಿಸಿಕೊಳ್ಳುತ್ತದೆ.

ಕೃತಕ ಮಾಂಸದ ತಯಾರಿಯಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದಾಗಿ, ಮಾಂಸಕ್ಕೆ ಬೇಕಾದಂತಹ ಜೀವಕೋಶಗಳನ್ನು ಬೆಳೆಸಬೇಕು. ಈ ಕೃಷಿಗೆ ಅಗತ್ಯವಾದ ಸ್ನಾಯು, ರಕ್ತ ಹಾಗೂ ಕೊಬ್ಬನ್ನು ಹುಟ್ಟಿಸುವ ಜೀವಕೋಶಗಳನ್ನು ಮೊದಲು ಸಂಗ್ರಹಿಸಿ, ಬೇಕಿದ್ದಾಗ ಉಪಯೋಗಿಸಲು ಆಗುವಂತೆ ಸಂಗ್ರಹಿಸಿ ಇಡುತ್ತಾರೆ. ಈ ಕೋಶಗಳನ್ನು ಅನಂತರ ಸೂಕ್ತವಾದ ಆಹಾರವನ್ನು ನೀಡಿ ಬೆಳೆಸುತ್ತಾರೆ. ಸೂಕ್ತವಾದ ಆಹಾರ ಎಂದರೆ ಅದು ಪೌಷ್ಟಿಕಾಂಶಗಳು, ಜೀವಕೋಶಗಳು ಸಂಖ್ಯೆಯಲ್ಲಿ ಹೆಚ್ಚುವಂತೆ ಪ್ರಚೋದಿಸುವ ಫ್ಯಾಕ್ಟರುಗಳು, ಅವುಗಳು ಬಲಿಯಲು ನೆರವಾಗುವಂತಹ ಜೈವಿಕ ಘಟಕಗಳು ಇರುತ್ತವೆ. ಇವನ್ನು ‘ಕೃಷಿ ಮೀಡಿಯಂ’ ಎನ್ನುತ್ತಾರೆ. ಮೀಡಿಯಮಿನಲ್ಲಿರುವ ವಿವಿಧ ಅಂಶಗಳನ್ನು ಹದವಾಗಿ ಬೆರೆಸದಿದ್ದರೆ,  ಜೀವಕೋಶಗಳ ಸಂಖ್ಯೆ ಹೆಚ್ಚಿಸುವುದು ಅಸಾಧ್ಯ.

ಕೃತಕ ಮಾಂಸ

ಇದಷ್ಟೆ ಸಮಸ್ಯೆ ಅಂದುಕೊಳ್ಳಬೇಡಿ. ಸ್ನಾಯುಗಳಿಗೆ ಬೇಕಾದ ಬೀಜಕೋಶಗಳು ರಕ್ತಕೋಶಗಳನ್ನು ಹುಟ್ಟಿಸುವುದಿಲ್ಲ. ರಕ್ತಕೋಶದ್ದು ಸ್ನಾಯುಕೋಶವನ್ನು ಹುಟ್ಟಿಸುವುದಿಲ್ಲ. ಹೀಗಾಗಿ, ಪ್ರತಿಯೊಂದು ಬಗೆಯ ಅಂಗಾಂಶಕ್ಕೂ ಅಗತ್ಯವಾದಂತಹ ಬೇರೆ-ಬೇರೆ ಬೀಜಕೋಶಗಳು ಮತ್ತು ಅವು ಬೆಳೆಯಲು ಬೇಕಾದ ಜೈವಿಕ ಘಟಕಗಳನ್ನು ಹದವಾಗಿ ಸೇರಿಸಬೇಕು. ಈ ಹದ ಸರಿ ಇಲ್ಲವೆಂದರೆ ಎಲ್ಲವೂ ವ್ಯರ್ಥ.

ಇಷ್ಟಾದ ಮೇಲೆ ಅಂಗಾಂಶಗಳನ್ನು ಕೊಯ್ಲು ಮಾಡಬೇಕು. ಹಾಗೆಂದರೆ ಇನ್ನೇನಲ್ಲ; ಮೀಡಿಯಮಿನಲ್ಲಿರುವ ಉಳಿದೆಲ್ಲ ವಸ್ತುಗಳನ್ನೂ ಸೋಸಿ ಕೇವಲ ಜೀವಕೋಶಗಳನ್ನಷ್ಟೆ ಹೆಕ್ಕಬೇಕು. ಹಾಗೆಯೇ, ಮಾಧ್ಯಮದಲ್ಲಿ ಬೆಳೆಸಿದ ಜೀವಕೋಶಗಳು ಮುದ್ದೆಯಾಗಿ ಬೆಳೆಯುತ್ತವೆ. ನಿರ್ದಿಷ್ಟ ಆಕಾರದ ಹಂದರದಲ್ಲಿ ಇಟ್ಟು ಬೆಳೆಸಿದಾಗ ಅವು ದುಂಡಗೋ, ಚಪ್ಪಟೆಯಾಗಿಯೋ ರೂಪು ತಾಳಬಲ್ಲವು. ಇದಕ್ಕಾಗಿ ಕೆಲವರು ವಿವಿಧ ಬಗೆಯ ಜೀವಕೋಶಗಳನ್ನು ಒಟ್ಟಾಗಿ ಕೃಷಿ ಮಾಡಿ ಪ್ರಯತ್ನಿಸಿದ್ದುಂಟು. ಇನ್ನು ಕೆಲವರು ಸ್ನಾಯುಗಳದ್ದೇ ಒಂದು ಪದರ, ಅದರ ಮೇಲೆ ಕೊಬ್ಬಿನದ್ದು ಇನ್ನೊಂದು ಪದರ ಎನ್ನುವ ಹಾಗೆ ಪದರ-ಪದರವಾಗಿ ಕೃಷಿ ಮಾಡಲೂ ಪ್ರಯತ್ನಿಸಿದ್ದುಂಟು. ಅನಂತರ ದೊರೆತ ಜೀವಕೋಶಗಳ ಮುದ್ದೆಯನ್ನು ಸಹಜವಾದ ಮಾಂಸವೋ ಎಂದು ತೋರುವಂತೆ ಸಂಸ್ಕರಿಸಬೇಕಾಗುತ್ತದೆ. ಇಷ್ಟು ಮಾಡಿದ ಮೇಲಷ್ಟೇ ಅದು ಮಾಂಸದ ರುಚಿ, ರಚನೆ ಹಾಗೂ ಸ್ವಾದವನ್ನು ನೀಡಬಲ್ಲದು.

ಆದರೂ ಇದು ಹಿತ್ತಲಲ್ಲಿ ಆಡು, ಕೋಳಿ ಬೆಳೆಸಿದಷ್ಟು ಸರಾಗವಲ್ಲ! ಕೃತಕ ಮಾಂಸ ತಯಾರಿಕೆಯ ಪ್ರತಿಯೊಂದು ಹಂತದಲ್ಲಿಯೂ ಎಚ್ಚರಿಕೆ ಅಗತ್ಯ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಜೀವಕೋಶಗಳನ್ನು ಬೆಳೆಸುವಾಗ ಅಲ್ಲಿ ಬ್ಯಾಕ್ಟೀರಿಯಾಗಳೂ ಬೆಳೆಯಬಹುದಾದ್ದರಿಂದ, ಪರಿಶುದ್ಧವಾದ ವಾತಾವರಣದಲ್ಲಿ ಇವೆಲ್ಲ ಕೆಲಸಗಳೂ ನಡೆಯಬೇಕು. ಬ್ಯಾಕ್ಟೀರಿಯಾ ಮತ್ತಿತರೆ ಸೋಂಕಿನ ಅಪಾಯ ಪ್ರತಿಯೊಂದು ಹಂತದಲ್ಲಿಯೂ ಇದ್ದೇ ಇರುತ್ತದೆ. ಜೀವಕೋಶಗಳನ್ನು ಸಂಗ್ರಹಿಸುವಾಗ ಎಚ್ಚರಿಕೆ ವಹಿಸದಿದ್ದರೆ, ಜೀವಕೋಶಗಳೊಟ್ಟಿಗೆ ಇತರೆ ರೋಗಾಣುಗಳೂ ಸೇರಿಕೊಬಳ್ಳಬಹುದು. ಕೃಷಿ ಮಾಡುವಾಗ ಬಳಸಿದ ರಾಸಾಯನಿಕಗಳ ಉಳಿಕೆ ಇಲ್ಲದಂತೆ ನೋಡಿಕೊಳ್ಳುವುದು ಇನ್ನೊಂದು ಸಮಸ್ಯೆ. ಇವೆಲ್ಲವುಗಳಿಗಿಂತಲೂ ಕಷ್ಟದ ವಿಷಯ ಎಂದರೆ, ಜೀವಕೋಶಗಳನ್ನು ಮಾಂಸವನ್ನಾಗಿ ರೂಪಿಸಲು ಒಂದೇ ಮಾರ್ಗವಿದೆ ಎನ್ನುವ ಹಾಗಿಲ್ಲ. ಹಾಗೆಯೇ ಅದಕ್ಕೆ ಹೊಸ-ಹೊಸ ಜೈವಿಕ ಅಂಶಗಳೂ ಬೇಕಾಗಬಹುದು.

ಈ ಆಡಿಯೊ ಕೇಳಿದ್ದೀರಾ?: ಹಳ್ಳಿ ದಾರಿ | ಅಂದಿನ ಸರ್ಕಾರ ಇಡೀ ದೇಶಕ್ಕೆ ಸುಖಾಸುಮ್ಮನೆ ಅಯೋಡಿನ್ ಉಪ್ಪು ತಿನಿಸಿತು, ಈಗ ಸಾರವರ್ಧಿತ ಅಕ್ಕಿಯ ಸರದಿ!

ಇವೆಲ್ಲವನ್ನೂ ಗಮನಿಸಿದಾಗ ಕೃತಕ ಮಾಂಸ ದುಬಾರಿ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಮುಂದಾಗುತ್ತದೆ. ನಿಜವೇ. ಸದ್ಯಕ್ಕೆ ಕೃತಕ ಮಾಂಸದಿಂದ ತಯಾರಿಸಿದ ಬರ್ಗರ್‌ ಬಹಳ ದುಬಾರಿ. ಸಾಮಾನ್ಯ ಮಾಂಸದ ಬರ್ಗರಿನ ಹತ್ತು ಪಟ್ಟು ಬೆಲೆ. ಸಾಮಾನ್ಯ ಮಾಂಸದ ಬೆಲೆ ಕಿಲೋಗೆ ನೂರರಿಂದ ಇನ್ನೂರು ರೂಪಾಯಿಗಳು. ಅದೇ ಕೃತಕ ಮಾಂಸ ಕಿಲೋಗೆ ಸಾವಿರ ರೂಪಾಯಿಗಿಂತಲೂ ಹೆಚ್ಚು. ಅದಷ್ಟೇ ಅಲ್ಲ, ಹತ್ತು ಕೋಳಿಯನ್ನು ದೊಡ್ಡ ಬುಟ್ಟಿಯನ್ನೋ, ಗೂಡೆಯನ್ನೂ ಮುಚ್ಚಿ ಸಾಕಿಬಿಡಬಹುದು; ಆದರೆ, ಅಷ್ಟೇ ಪ್ರಮಾಣದ ಮಾಂಸವನ್ನು ಸೃಷ್ಟಿಸುವುದಕ್ಕೆ ದೊಡ್ಡದೊಂದು ಫ್ಯಾಕ್ಟರಿ ಬೇಕು!

ಕೊನೆಯದು ರುಚಿ. ಇದು ಪ್ರಾಣಿಜನ್ಯವಲ್ಲವಾದ್ದರಿಂದ ರುಚಿ ಬೇರೆ ಇರುತ್ತದೆಯೇ ಎನ್ನುವ ಅನುಮಾನ ಇರಬಹುದು. ರುಚಿ ಸಾಮಾನ್ಯವಾದ ಮಾಂಸದಂತೆಯೇ ಇರುವಂತೆ ಸಂಸ್ಕರಣೆಯಿಂದ ಸರಿ ಪಡಿಸಿಬಿಡಬಹುದು. ಪ್ರಾಣಿಹಿಂಸೆ ಮಾಡದೆ ಪಡೆದಿದ್ದರಿಂದ ಇದನ್ನು ವೇಗನ್ನರು ಬಳಸಬಹುದೇ? ಬಹುಶಃ ಪ್ರಾಣಿ ಹಿಂಸೆ ಮಾಡಿ ಪಡೆದ ಮಾಂಸ ಬೇಡ ಎಂದು ತೀರ್ಮಾನಿಸಿದ, ವೇಗನ್ನರಾದವರು ಬಳಸಿಯಾರು. ಆದರೆ, ಹುಟ್ಟಾ ಮಾಂಸದ ಸ್ವಾದವನ್ನೇ ಸಹಿಸದ ಸಸ್ಯಾಹಾರಿಗಳು ಬಳಸಲಿಕ್ಕಿಲ್ಲ. ಯಾರು ಬಳಸುತ್ತಾರೋ ಇಲ್ಲವೋ ಒಟ್ಟಾರೆ ನಾಳೆ ಇವು ಮಾರುಕಟ್ಟೆಯಲ್ಲಿ ವಿಶೇಷ ಪದಾರ್ಥಗಳಾಗಿ ಸಿಗುವುದು ಖಂಡಿತ. ಬಹಳ ದಿನಗಳೇನೂ ಬೇಕಿಲ್ಲ. ಈಗಾಗಲೇ ಸಿಂಗಾಪುರದ ಮಾರುಕಟ್ಟೆಯಲ್ಲಿ ಇವು ಕಾಣಿಸುತ್ತಿವೆ. ಮುಂದೆ ಯುರೋಪು, ಅಮೆರಿಕದಲ್ಲಿಯೂ ಇವು ವ್ಯಾಪಕವಾಗಿ ಮಾರಾಟವಾಗಬಹುದು.

ಮಾಂಸ ಮತ್ತು ಈ ಕೃತಕ ಮಾಂಸ ಅಕ್ಕಪಕ್ಕದಲ್ಲಿದ್ದರೆ ಪತ್ತೆ ಮಾಡುವುದು ಹೇಗೆ? ತಾಜಾ ಮಾಂಸದಲ್ಲಿ ಮೂಳೆಗಳಿರುತ್ತವೆ. ಪತ್ತೆ ಮಾಡುವುದು ಸುಲಭ. ಆದರೆ ಕಬಾಬು, ಖೀಮಾ, ಬಿರಿಯಾನಿಯಂತಹ ಪದಾರ್ಥಗಳನ್ನು ತಯಾರಿಸಿದಾಗ ಅವುಗಳಲ್ಲಿ ಮೂಳೆ ಇಲ್ಲದ ಮಾಂಸವನ್ನೂ ಬಳಸುವುದುಂಟು. ಅಂತಹ ಅಡುಗೆಯಲ್ಲಿ ಕೃತಕ ಮಾಂಸವನ್ನು ಬಳಸಿದರೆ ಗೊತ್ತೂ ಆಗಲಿಕ್ಕಿಲ್ಲ ಅಥವಾ ದುಬಾರಿ ಕೃತಕ ಮಾಂಸ ಅಂತ ಹೇಳಿ ಸಾಧಾರಣ ಮಾಂಸ ಬಳಸಿದರೂ ಪತ್ತೆ ಮಾಡುವುದು ಕಷ್ಟವೇ.

ಅಯ್ಯೋ… ಇಷ್ಟೆಲ್ಲ ರಗಳೆ ಬೇಕಿತ್ತಾ? ಸುಮ್ಮನೇ ಕಸ, ಕಡ್ಡಿ ತಿಂದುಕೊಂಡು ಇದ್ದರೆ ಆಗುತ್ತಿತ್ತಲ್ಲ ಎಂದಿರಾ? ಆದರೆ, ಮಾಂಸದ ರುಚಿ ನೋಡಿದವರಿಗೆ ಈ ಮಾತು ರುಚಿಸಲಿಕ್ಕಿಲ್ಲ. ಕಬಾಬಿನ ಬದಲಿಗೆ ಬರೇ ಕಡ್ಡಿ ಅಗಿದಂತೆ ಅನಿಸಬಹುದು. ಏನಂತೀರಿ?

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಹೆಣ್ಣುಮಕ್ಕಳ ವೈಯಕ್ತಿಕ ವಿಷಯಗಳು ಮತ್ತು ಊರ ಪಂಚಾಯ್ತಿ ವಿಷಯಗಳು

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಗಾಯ ಗಾರುಡಿ | ‘ಪ್ರೀತ್ಸೆ ಪ್ರೀತ್ಸೆ’ ಎಂಬ ಚಿತ್ರಗೀತೆಯೂ ‘ಜನಗಣಮನ’ ಎಂಬ ರಾಷ್ಟ್ರಗೀತೆಯೂ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ನಮ್ ಜನ | ದುಡಿದರೂ ದಣಿದರೂ ನಿಸೂರಾಗದ ನಿರ್ಮಲಮ್ಮನ ಬದುಕು

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಈಗ ನೀವೇ ಹೇಳಿ… ಟಕೂ ಬಾಯಿಯ ಮಗು ನಿಜಕ್ಕೂ ಯಾರದ್ದು?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...