ಗುಜರಾತ್‌ನ ಕಾಡಿ ಮತ್ತು ವಿಸಾವದರ್ ಉಪಚುನಾವಣೆ ಫಲಿತಾಂಶಗಳು ಪ್ರಕಟವಾದ ಕೇವಲ ನಾಲ್ಕು ಗಂಟೆಗಳ ನಂತರ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿನ್ಹಾ ಗೋಹಿಲ್ ರಾಜೀನಾಮೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಸೋಲಿನ ಹೊಣೆ ಹೊತ್ತು ತನ್ನ ಸ್ಥಾನವನ್ನು ತ್ಯಜಿಸಿದ್ದಾರೆ. ಈ ಬೆನ್ನಲ್ಲೇ ಹೊಸ ಅಧ್ಯಕ್ಷರನ್ನು ನೇಮಿಸುವವರೆಗೂ ಡ್ಯಾನಿಲಿಮ್ಡಾ ಶಾಸಕ ಶೈಲೇಶ್ ಪರ್ಮಾರ್ ಅವರನ್ನು ಮಧ್ಯಂತರ ಅಧ್ಯಕ್ಷರಾಗಿ ಘೋಷಿಸಲಾಗಿದೆ.
ಗುಜರಾತ್‌ನ ಕಾಡಿ ಮತ್ತು ವಿಸಾವದರ್ ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಕಾಡಿಯಲ್ಲಿ, ಬಿಜೆಪಿಯ ರಾಜೇಂದ್ರ ಚಾವ್ಡಾ ಗೆದ್ದಿದ್ದು, ವಿಸಾವದರ್‌ನಲ್ಲಿ, ಎಎಪಿಯ ಗೋಪಾಲ್ ಇಟಾಲಿಯಾ 75,942 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಡಗು | ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವಿಲ್ಲ: ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ
ಇದಾದ ಬಳಿಕ ನೈತಿಕ ಹೊಣೆಗಾರಿಕೆಯನ್ನು ಹೊತ್ತು ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸೋಮವಾರ ಅಹಮದಾಬಾದ್‌ನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “30 ವರ್ಷಗಳ ಕಾಲ ಅಧಿಕಾರದಿಂದ ಹೊರಗಿದ್ದರೂ, ನಮ್ಮ ಕಾರ್ಯಕರ್ತರು ನಿರಂತರವಾಗಿ ಪ್ರಯತ್ನಿಸಿದ್ದಾರೆ. ಕಳಪೆ ಫಲಿತಾಂಶಗಳ ನೈತಿಕ ಜವಾಬ್ದಾರಿಯನ್ನು ನಾನು ಸ್ವೀಕರಿಸುತ್ತೇನೆ ಮತ್ತು ರಾಜೀನಾಮೆ ನೀಡಿದ್ದೇನೆ. ನಾನು ಈಗಾಗಲೇ ನನ್ನ ರಾಜೀನಾಮೆಯನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ಕಳುಹಿಸಿದ್ದೇನೆ” ಎಂದು ಹೇಳಿದ್ದಾರೆ.
ಇನ್ನು ಜಿಲ್ಲಾಧ್ಯಕ್ಷರ ನೇಮಕ ಸಂಬಂಧ ಆಂತರಿಕ ರಾಜಕೀಯದಿಂದ ರಾಜೀನಾಮೆ ನೀಡಿದ್ದಾರೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಗೋಹಿಲ್, “ಪ್ರತಿಯೊಬ್ಬ ಕಾರ್ಯಕರ್ತರ ಮಾತುಗಳನ್ನು ಕೇಳಿದ ನಂತರ ಜಿಲ್ಲಾ ಅಧ್ಯಕ್ಷರ ನೇಮಕವನ್ನು ಮಾಡಲಾಗಿದೆ. ಎಐಸಿಸಿ ಒಮ್ಮತದ ಆಧಾರದ ಮೇಲೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ನನ್ನ ಮನವೊಲಿಸಬೇಕೆಂದು ಕಾಯಲಿಲ್ಲ. ನಾನು ಜವಾಬ್ದಾರಿಯನ್ನು ತೆಗೆದುಕೊಂಡು ರಾಜೀನಾಮೆ ನೀಡಿದ್ದೇನೆ. ಇದು ಕಾಂಗ್ರೆಸ್ ಸಂಪ್ರದಾಯ. ನಾನು ಯುದ್ಧಭೂಮಿಯನ್ನು ಬಿಡುವುದಿಲ್ಲ, ನಾನು ನಿಷ್ಠಾವಂತ ಸೈನಿಕನಾಗಿರುತ್ತೇನೆ. ಪಕ್ಷವು ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುತ್ತದೆ. ನಾನು ಅವರಲ್ಲಿ ಒಬ್ಬನಾಗಿದ್ದೇನೆ. ನಾನೆಂದಿಗೂ ದ್ವಿಮುಖ ರಾಜಕೀಯ ಮಾಡಿಲ್ಲ” ಎಂದು ಹೇಳಿದರು.
ಶಕ್ತಿಸಿನ್ಹಾ ಗೋಹಿಲ್ ಅಧಿಕಾರ ವಹಿಸಿಕೊಂಡ ಕೇವಲ ಎರಡು ವರ್ಷಗಳಲ್ಲಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಜಗದೀಶ್ ಠಾಕೂರ್ ರಾಜೀನಾಮೆ ನೀಡಿದ್ದು ಬಳಿಕ ಸಿನ್ಹಾ 2023ರ ಜೂನ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. 1995ರಿಂದ ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ.
