ಬೀದರ ಜಿಲ್ಲೆಯನ್ನು ಮಾದಕ ದ್ರವ್ಯ ಸೇವನೆ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದರು.
ಮಂಗಳವಾರ ಬೀದರ ಪೊಲೀಸ್ ಉಪವಿಭಾಗದ ವತಿಯಿಂದ ನಗರದ ಕರ್ನಾಟಕ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿ ತಾನು ಏನು ಮಾಡುತ್ತಿದ್ದಾನೆ ಎಂಬುವುದರ ಅರಿವು ಕೂಡ ಇರುವುದಿಲ್ಲ. ನಶೆಯಲ್ಲಿ ಇರುವರು ಕಳ್ಳತನ, ಕೊಲೆ, ದರೋಡೆ, ಲೈಂಗಿಕ ಕಿರುಕುಳ ಅಂತಹ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮಾದಕ ದ್ರವ್ಯ ಸೇವನೆ ತೊರೆದು ಉತ್ತಮ ಜೀವನ ಕಟ್ಟಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ʼನಶೆಯ ಜಗತ್ತನ್ನು ಬಿಟ್ಟು ಒಬ್ಬ ಉತ್ತಮ ನಾಗರಿಕರನ್ನಾಗಿ ಬಾಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉನ್ನತವಾದ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಬೇಕು. ಪೊಲೀಸ್ ಇಲಾಖೆ ಯಾವಾಗಲೂ ಜನರ ಸೇವೆಯಲ್ಲಿದ್ದು, ಎಲ್ಲರಿಗೂ ರಕ್ಷಣೆ ನೀಡುವುದು ನಮ್ಮ ಕರ್ತವ್ಯʼ ಎಂದರು.

ಬೀದರ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ʼನಮ್ಮ ಮಕ್ಕಳ ಭವಿಷ್ಯದ ಕುರಿತು ಯೋಚಿಸಬೇಕು. ಯಾವುದೇ ಮಾದಕ ದ್ರವ್ಯ ಸೇವನೆ ವ್ಯಸನಿಯಾಗದಂತೆ ಎಚ್ಚರವಹಿಸಬೇಕು. ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳಂತೆ ಶಿಕ್ಷಣ ಮತ್ತು ಜೀವಿಸುವ ಹಕ್ಕು ಕೂಡ ಇದೆ. ನಶೆಯ ಜಗತ್ತಿನಿಂದ ಹೊರಬಂದು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಅಂತಹವರಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಅಧಿಕಾರಿಗಳಿಗೆ ಮಾತನಾಡುವೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಆರೋಗ್ಯ ಕೇಂದ್ರಕ್ಕಿಲ್ಲ ಸ್ವಂತ ಕಟ್ಟಡ : ಸರ್ಕಾರಿ ಶಾಲಾ ಕೋಣೆಯಲ್ಲೇ ಆರೋಗ್ಯ ಸೇವೆ!
ಡಿವೈಎಸ್‌ಪಿ ಶಿವನಗೌಡ ಪಾಟೀಲ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಜೈಕುಮಾರ್, ಹೆಚ್ಚುವರಿ ಡ್ರಗ್ಸ್ ಕಂಟ್ರೋಲರ್ ಧನಂಜಯ, ಮನೋರೋಗ ತಜ್ಞ ರಾಘವೇಂದ್ರ ವಾಗ್ಮಾರೆ, ರೈಲ್ವೆ ಪೊಲೀಸ್ ಠಾಣೆ ಅಧಿಕಾರಿ ಪಾಷಾ, ಎಎಸ್‌ಐಆರ್‌ಪಿಎಫ್ ಸಿ.ಎಚ್. ಶ್ರೀನಿವಾಸ, ವಕೀಲರು ಮತ್ತು ಮಾಂಗರವಾಡಿ ಸಂಘದ ರಾಜ್ಯಾಧ್ಯಕ್ಷ ಅನೀಲಕುಮಾರ ಕಾಂಬಳೆ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.