ದಲಿತ ಚಳವಳಿಗೆ 50 ವರ್ಷ; ಪ್ರೊ. ಬಿ ಕೃಷ್ಣಪ್ಪನವರ ಸಾಹಿತ್ಯ ಪದವಿ ಪಠ್ಯವಾಗಲಿ: ಗುರುಮೂರ್ತಿ ಆಶಯ

Date:

Advertisements

ಸಾವಿರಾರು ವರ್ಷಗಳಿಂದ ಬಲಾಢ್ಯ ಶೋಷಕ ಜಾತಿಗಳಿಂದ ತುಳಿಸಿಕೊಂಡೆ ಬದುಕಿದ್ದ ತಳ ಸಮುದಾಯಗಳನ್ನು ಒಗ್ಗೂಡಿಸಿದ್ದು ಮತ್ತು ಶೋಷಕರ ಶೋಷಣೆಯ ವಿರುದ್ಧದ  ಪ್ರತಿಭಟನಾ ಹೋರಾಟಕ್ಕೆ ಸಜ್ಜುಗೊಳಿಸಿದ್ದು ಕರ್ನಾಟಕದ ಮಟ್ಟಿಗೆ ದಲಿತ ಚಳುವಳಿ ಮಾತ್ರ. ದಲಿತ ಚಳವಳಿಯನ್ನು ಭದ್ರಾವತಿಯಲ್ಲಿ 1974 ರಲ್ಲಿ ಹುಟ್ಟುಹಾಕಿ ಅದನ್ನು ಇಡೀ ರಾಜ್ಯದುದ್ದಗಲಕ್ಕೆ ಹರಡಿ ಹೆಮ್ಮರವಾಗುವಂತೆ ದುಡಿದವರು ಮತ್ತು ಅದಕ್ಕಾಗಿ ಹೋರಾಡುತ್ತಲೇ ಅಮರರಾದವರು ಪ್ರೊ. ಬಿ. ಕೃಷ್ಣಪ್ಪನವರು.

ದಲಿತ ಚಳವಳಿ ಎಂದರೆ ಪ್ರೊ. ಬಿ. ಕೃಷ್ಣಪ್ಪನವರು ಕೃಷ್ಣಪ್ಪ ಎಂದರೆ ದಲಿತ ಚಳವಳಿ ಎಂಬುದು ಕನ್ನಡ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಅಷ್ಟರ ಮಟ್ಟಿಗೆ ಕರ್ನಾಟಕದ ದಲಿತರ ಪಾಲಿಗೆ ದಲಿತ ಚಳುವಳಿ ಮತ್ತು ಪ್ರೊ. ಬಿ. ಕೃಷ್ಣಪ್ಪ ಒಂದೇ ನಾಣ್ಯದ ಎರಡು ಮುಖಗಳು. ಅಂತಹ ಬಹಳ ದೊಡ್ಡ ಚರಿತ್ರೆ ಇರುವ ಕರ್ನಾಟಕದ ದಲಿತ ಚಳುವಳಿ ಹುಟ್ಟಿ ಇಲ್ಲಿಗೆ 50 ವರ್ಷಗಳು ತುಂಬಿದವು.

ಅಮೇರಿಕಾದ ಬಿಳಿಯರು ಹೇರಿದ್ದ ಗುಲಾಮಗಿರಿಯ ವಿರುದ್ಧ ಕಪ್ಪು ಜನರು ನಡೆಸಿದ ಹೋರಾಟವನ್ನು ಹೊರತುಪಡಿಸಿದರೆ ಬಹುಶಃ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ಚಳುವಳಿಯು ಇಷ್ಟು ಸುಧೀರ್ಘ ಅವಧಿಗೆ ನಡೆದ ಉದಾರಣೆ ಇಲ್ಲ. ಅಂತಹದೊಂದು ಬೃಹತ್ ರಾಜಕೀಯ ವಿದ್ಯಮಾನವನ್ನು ಮುನ್ನಡೆಸಿದ ಮಹಾನಾಯಕ ಪ್ರೊ. ಬಿ. ಕೃಷ್ಣಪ್ಪನವರು ಕರ್ನಾಟಕದ ಇತಿಹಾಸದಲ್ಲಿ ಎಂದಿಗೂ ಅಜರಾಮರವಾಗಿ ಉಳಿಯುತ್ತಾರೆ. ಇದು ನಮ್ಮೆಲ್ಲರ ಪಾಲಿಗೆ ಸ್ವಾಭಿಮಾನದ ಸಂಗತಿ.  

Advertisements

ಕರ್ನಾಟಕ ನೆಲದ ಅಸ್ಪೃಶ್ಯರಾದ ಹೊಲಯ ಮಾದಿಗ ಮುಂತಾದ ನೂರಾರು ತಳ ಸಮುದಾಯಗಳು ಭಾರತದ ಇನ್ನಾವುದೇ ಅಸ್ಪೃಶ್ಯ ಸಮುದಾಯಗಳಷ್ಟೇ ಗಾಯಗೊಂಡಂತವು. ಪುರೋಹಿತ, ಪಾಳೇಗಾರ, ಭೂಮಾಲೀಕರ ಅಕ್ರಮ ಕೂಟವು ರೂಪಿಸಿದ ಕ್ರೂರ ಜಾತಿ ವ್ಯವಸ್ಥೆಯ ಹಿಡಿತದಲ್ಲಿ ನರಳುತ್ತಾ ಅಸ್ಪೃಶ್ಯತೆ, ದೌರ್ಜನ್ಯ, ಹಿಂಸೆ, ಅತ್ಯಾಚಾರ, ಹಸಿವು, ಅವಮಾನ, ಅಸಹಾಯಕತೆ, ಬಡತನಗಳಲ್ಲೆ ಬದುಕಿದ ದಲಿತರು ಭಾರತ ಸ್ವತಂತ್ರಗೊಂಡು ಏಳು ದಶಕ ಕಳೆದರೂ ಮೂಕರಾಗಿಯೇ ಇದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕನ ಚಿಂತನೆ ಮತ್ತು ಹೋರಾಟಗಳ ತಾತ್ವಿಕತೆಗಳನ್ನು ಇಲ್ಲಿಯ ಮೇಲ್ಜಾತಿಗಳು ಬಚ್ಚಿಟ್ಟಿದ್ದವು. ದಲಿತರು ದನಿ ಇಲ್ಲದವರಾಗೇ ಇದ್ದರು. ಜ್ಞಾನವನ್ನು ಬಂಧಿಸಿಡಲಾಗಿದ್ದ ದೇಶವೆಂದರೆ ಅದು ಭಾರತ ಮಾತ್ರ. ಇಂತಹದೊಂದು ಮೂಕ ಕಣಿವೆಯಿಂದ ಎದ್ದು ಬಂದ ಪ್ರೊ. ಬಿ. ಕೃಷ್ಣಪ್ಪನವರು 1974 ರಲ್ಲಿ ದಲಿತ ಚಳುವಳಿ ಎಂಬ ಕ್ರಾಂತಿಯ ಕಿಡಿಯನ್ನು ಹಚ್ಚಿದ್ದೇ ತಡ ಎಂದೂ ಹೊರಳದಿದ್ದ ಕರ್ನಾಟಕ ಇನ್ನೊಂದು ಮಗ್ಗುಲಿಗೆ ಹೊರಳಿತು. ಮೂಕ ಸಮುದಾಯ ಮಾತನಾಡತೊಡಗಿತು. ಧ್ವನಿ ಇಲ್ಲದವರು ತಮ್ಮ ಶೋಷಕರ ವಿರುದ್ಧ ಘರ್ಜಿಸಿದರು. ಎಂದಿಗೂ ಪ್ರತಿಭಟನೆಯನ್ನೇ ಕಾಣದಿದ್ದ ನೆಲದಲ್ಲಿ ಶೋಷಿತರ ಆಕ್ರೋಶವು  ಆಕಾಶಕ್ಕೆ ಚಿಮ್ಮಿತು. ದಲಿತರು ಬೀದಿಗೆ ಬಂದು ಬಹಿರಂಗವಾಗಿ ಪ್ರತಿರೋಧವನ್ನು ಕಟ್ಟಿದರು. ದಲಿತರಿಗೆ ಪ್ರಜ್ಞೆ ಮತ್ತು ಹೋರಾಟದ ಪಾಠ ಹೇಳಿಕೊಟ್ಟರು.   

1001796706

ದಲಿತರ ಮೇಲಿನ ಹಿಂಸೆ, ಅತ್ಯಾಚಾರ ಮತ್ತು ದೌರ್ಜನ್ಯ ವಿರೋಧಿಸಿ ಹೋರಾಟಗಳು ನಾಡಿನಾದ್ಯಂತ ಸಿಡಿದವು. ಅವುಗಳ ಜೊತೆ ಜೊತೆಗೆ ದಲಿತರಿಗೆ ಭೂಮಿ, ಸೂರು, ನೀರು, ಶಿಕ್ಷಣದಲ್ಲಿ ಪ್ರಾತಿನಿಧ್ಯದ ಪ್ರಶ್ನೆಗಳು ಮುನ್ನೆಲೆಗೆ ಬಂದವು. ಶತಮಾನಗಳ ಕಾಲ ಪುರೋಹಿತರು ಮತ್ತು ಭೂಮಾಲೀಕರ ಸೇವೆಗೆ ಕಂಕಣ ಬದ್ಧವಾಗಿ ನಿಲ್ಲುತ್ತಿದ್ದ ಆಳುವ ಪ್ರಭುಗಳು ದಲಿತರ ಕಡೆಗೆ ಕಣ್ಣು ಹೊರಳಿಸಿದರು. ಬಾಬಾ ಸಾಹೇಬರು ಕೊಟ್ಟ ಭಾರತದ ಸಂವಿಧಾನದಲ್ಲಿ ದಲಿತರ ಸಮಸ್ಯೆಗಳಿಗೆ ಸಾಮಾಜಿಕ ನ್ಯಾಯದ ಪರಿಹಾರಗಳನ್ನು ಹುಡುಕಿದರು. ನಿಧಾನವಾಗಿ ಊರಾಚೆಯ ಕಡೆಯ ಕೇರಿಗಳ ದಲಿತರ ನಾಲಗೆಯ ಮೇಲೆ ಅಕ್ಷರಗಳು ನಲಿದಂತೆಲ್ಲ ಹೊಸ ಪ್ರಶ್ನೆಗಳು ಸ್ಫೋಟಿಸಿದವು.   

ದಲಿತ ಚಳವಳಿಯ ಹೋರಾಟದ ಕಾರಣದಿಂದಾಗಿ ದಲಿತರ ಗುಡಿಸಲುಗಳ ಜಾಗದಲ್ಲಿ ಹಂಚಿನ, ಸಿಮೆಂಟ್ ಶೀಟಿನ, ತಗಡಿನ ಜೋಪಡಿಗಳು ಬಂದವು. ಧಣಿಗಳ ಮನೆಯಲ್ಲಿ ಸೇವೆ ಮಾಡಿಕೊಂಡೆ ಸವೆದು ಹೋದ ಸಮುದಾಯಗಳ ಕೆಲವೇ  ಕೈಗಳ ಪಾಲಿಗಾದರೂ ಚೂರುಪಾರು ತುಂಡು ಭೂಮಿ ಸಿಕ್ಕಿತು. ಚರಿತ್ರೆಯುದ್ಧಕ್ಕೂ ದೌರ್ಜನ್ಯ ಅನುಭವಿಸಿದರು ಮತ್ತು ಉಸಿರೆತ್ತಲಾಗದ ಜನರ ದೂರುಗಳು ಪೊಲೀಸ್ ಠಾಣೆಗಳಲ್ಲಿ ಮೊಟ್ಟಮೊದಲ ಬಾರಿಗೆ ದಾಖಲಾದವು. ಭೂ ಮಾಲೀಕರ ಮನೆಯ ದನ, ಎಮ್ಮೆ ಮೇಯಿಸುತ್ತಿದ್ದ ದಲಿತ ಹುಡುಗರು ಶಾಲೆಗಳತ್ತ ಮುಖ ಮಾಡಿದರು. ಓದಿಕೊಂಡ ಹುಡುಗರು ಪೇಟೆಗಳತ್ತ  ಚಲಿಸಲಾರಂಭಿಸಿದರು. ಅಕ್ಷರಸ್ಥ ದಲಿತರಿಗೆ ಸರ್ಕಾರದ ದೊಡ್ಡ ಅಧಿಕಾರದ ಹುದ್ದೆಗಳು ಸಿಗದಿದ್ದರೂ ಹಸಿವು ನೀಗಿಸುವಷ್ಟು ಅನ್ನ, ಮೈಮುಚ್ಚಿಕೊಳ್ಳಲು ಬೇಕಾಗವಷ್ಟು ಬಟ್ಟೆಯನ್ನು ನೀಡುವಂಥ ಉದ್ಯೋಗಗಳನ್ನು ಮೀಸಲಾತಿ ಅಡಿಯಲ್ಲಿ ನೀಡಲೇಬೇಕಾದ ಒತ್ತಡ ಉಂಟಾಯಿತು. ಹೊಸ ಕಾಲದ ಹೊಸ ಎಚ್ಚರದ ಕಾರಣದಿಂದಾಗಿ ದಲಿತರ ಮೇಲೆ ಹಿಂಸೆ, ಅತ್ಯಾಚಾರ, ದೌರ್ಜನ್ಯಗಳನ್ನು ಎಸೆಗಲು ಶಾಸ್ತ್ರ ಸಂಪ್ರದಾಯಗಳಿಂದ ಲೈಸೆನ್ಸ್ ಪಡೆದುಕೊಂಡಿದ್ದವರ ಗಂಟಲುಗಳು ಕಟ್ಟಿದವು. ಮೊಟ್ಟಮೊದಲ ಬಾರಿಗೆ ಶೋಷಕರ ಎದೆಯಲ್ಲಿ ತಣ್ಣನೆಯ ಭಯ ಆವರಿಸತೊಡಗಿತು. ರಾಜಾರೋಷವಾಗಿ ಹಿಂಸಾಕಾಂಡ ಎಸಗುತಿದ್ದ ದುರುಳರು ಕಾನೂನಿನ ಕುಣಿಕೆಗೆ ಹೆದರಿ ಊರು ಬಿಟ್ಟು ಓಡತೊಡಗಿದರು. ಕ್ರೌರ್ಯ ಎಸಗುವುದನ್ನೇ ತಮ್ಮ ಹಕ್ಕೆಂದು ಭಾವಿಸಿದ್ದವರು ಈಗ ನ್ಯಾಯದ ಕಣ್ಣಿಗೆ ಅಂಜುವ ಸ್ಥಿತಿ ಉಂಟಾಯಿತು.  

ಇದೆಲ್ಲವೂ ಕರ್ನಾಟಕದಲ್ಲಿ ಉಂಟಾದ ಬದಲಾವಣೆಗಳು. ಈ ಬದಲಾವಣೆಗಳ ಹಿಂದೆ ದಲಿತ ಚಳುವಳಿಯ ಶ್ರಮ, ಚಿಂತನೆ, ಹೋರಾಟಗಳಿವೆ ಮತ್ತು ನಾಡಿನ ಅಧಮ್ಯ ಹೋರಾಟಗಾರ ಪ್ರೊಫೆಸರ್ ಬಿ. ಕೃಷ್ಣಪ್ಪನವರ ಅಪಾರವಾದ ತ್ಯಾಗವಿದೆ ಎಂಬುದನ್ನು ಕರ್ನಾಟಕ ಎಂದಿಗೂ ಮರೆಯಲಾರದು.ಇಂತಹದೊಂದು ಪರಿವರ್ತನೆಗೆ ನಾಡನ್ನು ಸಜ್ಜುಗೊಳಿಸಿ, ಸಾಮಾಜಿಕ ನ್ಯಾಯವನ್ನು ವರ್ತಮಾನದ ಎಲ್ಲಾ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ರಾಜಕೀಯ ವಾಗ್ವಾದಗಳ ಕೇಂದ್ರ ಪ್ರಜ್ಞೆಯಾಗಿಸಿದ ಯಶಸ್ಸು ದಲಿತ ಚಳವಳಿ ಮತ್ತು ಪ್ರೊ ಬಿ. ಕೃಷ್ಣಪ್ಪನವರಿಗೆ ಸಲ್ಲುತ್ತದೆ.

ಈ ನಿಟ್ಟಿನಲ್ಲಿ ದಲಿತ ಚಳುವಳಿಯ ಐವತ್ತು ವರ್ಷಗಳನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ವಿಶ್ವವಿದ್ಯಾನಿಲಯವು ಪ್ರೊ. ಬಿ. ಕೃಷ್ಣಪ್ಪ ಮತ್ತು ದಲಿತ ಚಳುವಳಿಯನ್ನು ಪರಿಚಯಿಸುವ ಸಾಹಿತ್ಯವನ್ನು ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಇಟ್ಟು, ಪ್ರೊ ಬಿ. ಕೃಷ್ಣಪ್ಪನವರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ. ಗುರುಮೂರ್ತಿ ಕೊರಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X