ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಚಿನ್ನಕರ ಗ್ರಾಮದಲ್ಲಿ ದಲಿತ ಸಮುದಾಯದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಸರ್ಕಾರದ ಆದೇಶದಿಂದ ಸರ್ವೇ ನಂ. 458ರಲ್ಲಿ 9 ಗುಂಟೆ ಜಾಗದಲ್ಲಿ 6 ಗುಂಟೆ ಜಾಗವನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭವನ ಹಾಗೂ ಉದ್ಯಾನವನ ನಿರ್ಮಾಣಕ್ಕಾಗಿ 2017ರ ಡಿಸೆಂಬರ್ 29ರಂದು ಆಗಿನ ಯಾದಗಿರಿ ಜಿಲ್ಲಾಧಿಕಾರಿ ಮಂಜುನಾಥ್ ಜೆ ಅವರು ಆದೇಶ ಹೊರಡಿಸಿದ್ದರು. ಆದರೆ ಸರ್ವಣಿಯರು ಬಲವಂತವಾಗಿ ಆ ಜಾಗದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲು ಜೆಸಿಬಿ ಮೂಲಕ ಜಾಗವನ್ನು ಸ್ವಚ್ಛ ಮಾಡಿಸಲು ಮುಂದಾದಾಗ ದಲಿತ ಸಮುದಾಯದವರು, ʼಅದು ಅಂಬೇಡ್ಕರ್ ಭವನಕ್ಕೆ ಮಂಜೂರಾದ ಜಾಗ. ನಾವು ಗ್ರಾಮ ಪಂಚಾಯಿತಿ ನಿರ್ಮಾಣಕ್ಕೆ ಬಿಡುವುದಿಲ್ಲʼವೆಂದು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮೇಲ್ಜಾತಿಯ ಜನರೆಲ್ಲ ಒಂದಾಗಿ ದಲಿತ ಸಮುದಾಯದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
“ಚಹಾ ಅಂಗಡಿಯಲ್ಲಿ, ಕ್ಷೌರಿಕ ಅಂಗಡಿ(ಕಟಿಂಗ್ ಶಾಫ್), ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತು ಕೊಡದಂತೆ,
ಜಮೀನಿನಲ್ಲಿ ಕೂಲಿ ಕೆಲಸ ನೀಡದಿರುವುದು, ಪಶುಗಳನ್ನು ಬಿಡದಿರುವುದು, ದೇವಾಲಯಗಳಿಗೆ ಪ್ರವೇಶ ನಿರಾಕರಣೆ, ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಲು ಅಡ್ಡಿ ಉಂಟುಮಾಡಿ ಮೇಲ್ಜಾತಿಯ ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯರು ನಿರ್ಬಂಧಗಳನ್ನು ಹೇರಿದ್ದಾರೆ” ಎಂದು ಗ್ರಾಮಸ್ಥರು ತಿಳಿಸಿದರು.
ದಲಿತ ಸಮುದಾಯದ ಹುಸೇನಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸರ್ವೆ ನಂ. 458ರಲ್ಲಿ ನಮ್ಮ ಹಿಂದಿನ ತಲೆಮಾರುಗಳಿಂದ ಆ ಜಾಗದಲ್ಲಿ ತಿಪ್ಪೆ, ದೊಡ್ಡಿಗಳು ಮಾಡಿಕೊಂಡಿದ್ದರು. ನಾವುಗಳು ಜಾಗೃತರಾಗಿ ಅದನ್ನು ಸ್ವಚ್ಛಗೊಳಿಸಿ ಅಂಬೇಡ್ಕರ್ ಸಂಘ ಕಟ್ಟಿಕೊಂಡು ಆ ಜಾಗದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಹೋರಾಟ ಮಾಡಿದ್ದೆವು. ಅದರ ಪ್ರತಿಫಲವಾಗಿ ಆ ಜಾಗವನ್ನು ನಮಗೆ ಆಗಿನ ಜಿಲ್ಲಾಧಿಕಾರಿಯವರು 2017ರಲ್ಲಿ ಮಂಜೂರು ಮಾಡಿ ಆದೇಶ ನೀಡಿದರು. ಆದೇಶ ಪ್ರತಿ ಇದ್ದರೂ ಕೂಡ ಮೇಲ್ಜಾತಿಯವರು ಉದ್ದೇಶ ಪೂರ್ವಕವಾಗಿ ಅಲ್ಲಿ ಗ್ರಾಮ ಪಂಚಾಯಿತಿ ನಿರ್ಮಾಣ ಮಾಡಲು ಮುಂದಾದಾಗ ನಾವುಗಳು ಅದಕ್ಕೆ ಅಡ್ಡಿಪಡಿಸಿದ ಕಾರಣ ದಲಿತ ಸಮುದಾಯದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ” ಎಂದರು.

ತಹಶೀಲ್ದಾರ್ ಶಾಂತಗೌಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ಎರಡ್ಮೂರು ಬಾರಿ ನಾವು ಆ ಜಾಗವನ್ನು ವೀಕ್ಷಿಸಿದ್ದೇವೆ. ಅದನ್ನು ಆಳತೆ ಮಾಡಿದ್ದೇವೆ. ಸರ್ವೇ ನಂ. ಆದೇಶ ಪ್ರಕಾರ ನಾವು ಸತ್ಯಾಸತ್ಯತೆ ಪರಿಶೀಲಿಸಿ, ಒಂದು ವೇಳೆ ಆ ಜಾಗ ಅವರಿಗೆ ಮಂಜೂರಾಗಿದ್ದರೆ ಅವರಿಗೆ ಕೊಡಲಾಗುವುದು” ಎಂದು ತಿಳಿಸಿದರು.
“ಸಾಮಾಜಿಕ ಬಹಿಷ್ಕಾರದ ಬಗ್ಗೆ ಮಾಹಿತಿ ಇರಲಿಲ್ಲ. ಹಾಗೇನಾದರೂ ಇದ್ದಲ್ಲಿ ಖಂಡಿತ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

ಸರ್ಕಲ್ ಇನ್‌ಸ್ಪೆಕ್ಟರ್ ವೀರಣ್ಣ ದೊಡ್ಡಮನಿ ಮಾತನಾಡಿ, “ಎಸ್‌ಪಿ ಅವರೊಂದಿಗೆ ಮಾತಾಡಿರುವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು” ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ಹಣಮಂತ ಕೊಂಕಲ್ ಮಾತನಾಡಿ, “ದಲಿತ ಸಮುದಾಯದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ ಮೂರ್ನಾಲ್ಕು ದಿನಗಳಾದರೂ ಕೂಡ ಯಾರೊಬ್ಬ ಅಧಿಕಾರಿಗಳು ಊರಿಗೆ ಬಂದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಅಲ್ಲದೆ ಈ ವಿಷಯದಲ್ಲಿ ರಾಜಕೀಯ ಕೈವಾಡಿವಿದೆ. ಹಾಗಾಗಿ ಯಾರೊಬ್ಬರೂ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ” ಎಂದು ದೂರಿದರು.
ಇದನ್ನೂ ಓದಿದ್ದೀರಾ? ಹಿಂದುತ್ವಕ್ಕೂ ಹಿಂದು ಧರ್ಮಕ್ಕೂ ಸಂಬಂಧವೇ ಇಲ್ಲ: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಪ್ರಕಾಶ್
ಆಲ್ ಇಂಡಿಯಾ ಬಹುಜನ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ ಬಿ ವಾಸು ಮಾತನಾಡಿ, “ಗುರುಮಠಕಲ್ ತಾಲೂಕಿನ ಚಿನ್ನಕರ ಗ್ರಾಮದಲ್ಲಿ ದಲಿತ ಸಮುದಾಯದವರಿಗೆ ಸವರ್ಣೀಯರೆಂಬ ದುಷ್ಟ ಮನಸ್ಥಿತಿಯವರು ಸಾಮಾಜಿಕ ಬಹಿಷ್ಕಾರ ಹಾಕಿರುವುದು ಅತ್ಯಂತ ವಿಷಾದನೀಯ ಹಾಗೂ ಖಂಡನಾರ್ಹ. ಈ ಕುರಿತು ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಇಂತಹ ಘಟನೆಗಳನ್ನು ತಕ್ಷಣ ನಿಯಂತ್ರಿಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಸರ್ಕಾರ ಶಿಘ್ರ ತುರ್ತು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಮಾನವೀಯತೆ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇಂತಹ ಅಸಹಿಷ್ಣುತೆ ನಡೆಯುತ್ತಿರುವುದು ಅತ್ಯಂತ ದುಃಖದಾಯಕ. ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ನಾನು ಈ ಮೂಲಕ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.
Congrathulations dear sister
Congratulations dear sister