ಇಬ್ಬರು ದಲಿತ ಯುವಕರಿಗೆ ಅರ್ಧ ತಲೆ ಬೋಳಿಸಿ, ಅವರನ್ನು ದನಗಳಂತೆ ಮಂಡಿಯೂರಿ ನಡೆಸಿ, ಹುಲ್ಲು ತಿನ್ನಿಸಿ ವಿಕೃತವಾಗಿ ಜಾತಿ ದೌರ್ಜನ್ಯ ಎಸಗಿರುವ ಆಘಾತಕಾರಿ, ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ. ಹಿಂದುತ್ವ ಕೋಮುವಾದಿ ಸಂಘಟನೆ ಬಜರಂಗದಳದ ಕಾರ್ಯಕರ್ತರು ದಲಿತ ಯುವಕರ ಮೇಲೆ ಕ್ರೌರ್ಯ ಮೆರೆದಿದ್ದಾರೆ.
ಬಿಜೆಪಿ ಆಡಳಿತವಿರುವ ಒಡಿಶಾದ ಗಂಜಾಂ ಜಿಲ್ಲೆಯ ಖರಿಗುಮ್ಮ ಗ್ರಾಮದ ಜಹ್ದಾದಲ್ಲಿ ವಿಕೃತ ಘಟನೆ ನಡೆದಿದೆ. ದನ ಕಳ್ಳಸಾಗಣೆದಾರರು ಎಂಬ ಆರೋಪದ ಮೇಲೆ ದಲಿತ ಯುವಕರನ್ನು ಬಜರಂಗದಳದ ಕಾರ್ಯಕರ್ತರು ಥಳಿಸಿ, ಅಮಾನವೀಯ ದೌರ್ಜನ್ಯ ಎಸಗಿದ್ದಾರೆ.
ಸೋಮವಾರ, ಇಬ್ಬರು ದಲಿತರನ್ನು ಹಿಡಿದ ಬಜರಂಗದಳದ ಪುಂಡರು, ಅವರ ಅರ್ಧ ಕೂದಲನ್ನು ಬೋಳಿಸಿದ್ದಾರೆ. ಅಮಾನವೀಯವಾಗಿ ಥಳಿಸಿದ್ದಾರೆ. ಮಂಡಿಯೂರಿ ಮೊಣಕಾಲುಗಳ ಮೇಲೆ ನಡೆಸಿದ್ದು, ದನಗಳ ಮೇವನ್ನು ತಿನ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ಬಳಿಕ, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಧರಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bajrang Dal members brutally attacked poor Dalit men in BJP ruled Odisha.
— Mohit Chauhan (@mohitlaws) June 23, 2025
They were beaten mercilessly in public and their hair was cut half.
They were made to walk on their knees through the village.
They were forced to eat grass and drink sewage water like animals. pic.twitter.com/kl0eNoJP6y
ಸಂತ್ರಸ್ತರನ್ನು ಗಂಜಾಂ ಜಿಲ್ಲೆಯ ಸಿಂಗಾಪುರದ ನಿವಾಸಿ ಬಾಬುಲಾ ನಾಯಕ್ (54) ಮತ್ತು ಬುಲು ನಾಯಕ್ (42) ಎಂದು ಹೆಸರಿಸಲಾಗಿದೆ. ಇಬ್ಬರೂ ಹರಿಯೋರ್‌ನಿಂದ ತಮ್ಮ ಗ್ರಾಮಕ್ಕೆ ಎರಡು ಹಸುಗಳು ಮತ್ತು ಒಂದು ಕರುವನ್ನು ಆಟೋದಲ್ಲಿ ಕೊಂಡೊಯ್ಯುತ್ತಿದ್ದರು. ಈ ವೇಳೆ, ಗೋರಕ್ಷಣೆಯ ಹೆಸರಿನಲ್ಲಿ ಬಜರಂಗದಳದ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ, ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ಗೋರಕ್ಷಕ ಪುಂಡರ ಗುಂಪು ಸಂತ್ರಸ್ತ ದಲಿತ ಯುವಕರ ಬಳಿ 30,000 ರೂ.ಗೆ ಬೇಡಿಕೆ ಇಟ್ಟಿದೆ. ಸಂತ್ರಸ್ತರು ಹಣ ಕೊಡಲು ನಿರಾಕರಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿ ಅವಮಾನಿಸಲಾಗಿದೆ. ಅವರ ಅರ್ಧ ತಲೆ ಬೋಳಿಸಿ, ಸುಮಾರು 1 ಕಿ.ಮೀಗೂ ಹೆಚ್ಚು ದೂರ ಮೊಣಕಾಲುಗಳ ಮೇಲೆ ನಡೆಸಿದ್ದಾರೆ. ದನಗಳ ಮೇವು ತಿನ್ನುವಂತೆ ಮತ್ತು ಚರಂಡಿ ನೀರು ಕುಡಿಯುವಂತೆ ಒತ್ತಾಯಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗಂಜಾಂ ಪೊಲೀಸ್ ವರಿಷ್ಠಾಧಿಕಾರಿ ಸುವೇಂದು ಕುಮಾರ್ ಪಾತ್ರ ತಿಳಿಸಿದ್ದಾರೆ.