ಶಿಕ್ಷಣವು ಸರ್ಕಾರ ಕೊಡುವ ಭಿಕ್ಷೆಯಲ್ಲ, ಇದು ನಮ್ಮ ಹಕ್ಕು. ಕಡಿಮೆ ದಾಖಲಾತಿ ಹೊಂದಿರುವ ದ್ಯಾಮೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಯಾವುದೇ ಕಾರಣಕ್ಕೂ ವಿಲೀನಗೊಳಿಸಲು ಬಿಡುವುದಿಲ್ಲ ಎಂದು ಆಗ್ರಹಿಸಿ ಎಐಡಿಎಸ್ಒ ದಾವಣಗೆರೆ ಜಿಲ್ಲಾ ಸಮಿತಿ ಹಾಗೂ ಗ್ರಾಮಸ್ಥರು ಸೇರಿ ದ್ಯಾಮೇನಹಳ್ಳಿ ಸರ್ಕಾರಿ ಶಾಲೆ ಎದುರು ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, “ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಈ ಶಾಲೆಗೆ ಹೊಸ ಕಟ್ಟಡವನ್ನು ನಿರ್ಮಿಸಲು ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ಶಾಲೆಯ ಆವರಣದಲ್ಲಿ ನಾಲ್ಕು ಕಟ್ಟಡಗಳಿದ್ದು, ಒಂದು ಕಟ್ಟಡ ಸಂಪೂರ್ಣ ಪಾಳು ಬಿದ್ದಿದೆ. ಅದರ ಪಕ್ಕದ ಇನ್ನೊಂದು ಕಟ್ಟಡ ಮಳೆ ಬಂದರೆ ಸೋರುತ್ತದೆ. ಮುಖ್ಯ ಕಟ್ಟಡ ಸೋರುವ ಕಾರಣ ಇತ್ತೀಚಿಗಷ್ಟೇ ಆರ್‌ಸಿಸಿ ಮೇಲೆ ಶೀಟ್ ಹಾಕಿಸಲಾಗಿದೆ” ಎಂದರು.
“ಪಾಳು ಬಿದ್ದ ಕಟ್ಟಡವನ್ನು ಕೆಡವಿಸಿ, ಕಳೆಯಿಂದ ಕೂಡಿದ ಆಟದ ಮೈದಾನವನ್ನು ಸ್ವಚ್ಛಂದಗೊಳಿಸಬೇಕು. ಬಹುತೇಕ ಬಡ ವಿದ್ಯಾರ್ಥಿಗಳು ಓದುವ ಸರ್ಕಾರಿ ಶಾಲೆಗಳನ್ನು ಬಲಗೊಳಿಸಬೇಕು. ನಿಜವಾಗಲೂ ಈ ಜನನಾಯಕರಿಗೆ ಸರ್ಕಾರಿ ಶಾಲೆ ಬೆಳೆಸುವ ಜವಾಬ್ದಾರಿ ಇದೆಯೆ ಎಂಬ ಪ್ರಶ್ನೆ ಜನಗಳಲ್ಲಿ ಮೂಡುತ್ತಿದೆ. ಉನ್ನತ ಭವಿಷ್ಯ ರೂಪಿಸುವ ಕನಸು ಹೊತ್ತ ದೊಡ್ಡ ಸಂಖ್ಯೆಯ ಬಡವರು, ರೈತರು, ಕೂಲಿಕಾರರು ಕೂಡ ಸಾಲ ಮಾಡಿ ಖಾಸಗಿ ಶಾಲೆಗೆ ಸೇರಿಸುವ ಪರಿಸ್ಥಿತಿ ಎದುರಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ? ಉಡುಪಿ | ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣ; ಚೆನ್ನೈ ಮೂಲದ ಎಂಜಿನಿಯರ್ ಯುವತಿ ಬಂಧನ
“ಜನಗಳ ತೆರಿಗೆ ಮೇಲೆ ನಡೆಯುತ್ತಿರುವ ಸರ್ಕಾರವು ಶಿಕ್ಷಣಕ್ಕೆ ರಾಜ್ಯದಲ್ಲಿ 30 ಪರ್ಸೆಂಟ್ ಅನುದಾನವನ್ನು ಮೀಸಲಿಡಬೇಕಿತ್ತು. ಆದರೆ ದುರಂತವೆಂದರೆ ಶಿಕ್ಷಣ ಕಟ್ಟಕಡೆಯ ಆದ್ಯತೆಯಾಗಿದೆ. ಭಾರತದ ನವೋದಯ ಚಿಂತಕರು ರಾಜಾರಾಮ್ ಮೋಹನ್ ರಾಯ್, ಸಾವಿತ್ರಿ ಬಾಫುಲೆ, ಜ್ಯೋತಿ ರಾವ್ ಬಾಫುಲೆ, ಈಶ್ವರ ಚಂದ್ರ ವಿದ್ಯಾ ಸಾಗರ್, ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್ ಮುಂತಾದವರು ಇಂತಹ ಭಾರತಕ್ಕಾಗಿ ಕನಸು ಕಂಡರೆ? ಈ ಅಸಮಾನತೆಯ ಭಾರತಕ್ಕಾಗಿ ಹೋರಾಡಿ, ತ್ಯಾಗ-ಬಲಿದಾನವನ್ನು ಮಾಡಿದರೆ? ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ, ಇನ್ನೂ ಬಲಿಷ್ಠ ಹೋರಾಟಗಳನ್ನು ಬೆಳೆಸೋಣ” ಎಂದು ಗ್ರಾಮಸ್ಥರಿಗೆ ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಸಹೋದರ ಸಂಘಟನೆಯಾದ ಎಐಕೆಕೆಎಂಎಸ್‌ನ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಎಐಡಿಎಸ್ಓ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ ಎಸ್, ದ್ಯಾಮೇನಹಳ್ಳಿಯ ರೈತ ಮುಖಂಡರು, ಪೋಷಕರು ಇದ್ದರು.