- ‘ಕಾಂಗ್ರೆಸ್ ಸಮಯ ಬಂದಾಗ ಸೆಕ್ಯೂಲರ್, ಇಲ್ಲದಿದ್ದಾಗ ನೋ ಸೆಕ್ಯೂಲರ್’
- ‘ಜಿ ಟಿ ದೇವೇಗೌಡ ನೇತೃತ್ವದಲ್ಲಿ ಸಮಿತಿ ರಚಿಸಿ ರಾಜ್ಯಾದ್ಯಂತ ಪ್ರವಾಸ’
ಜೆಡಿಎಸ್ ಪಕ್ಷವನ್ನು ಯಾರಾದರೂ ಅಳಿಸಿ ಹಾಕುತ್ತೇವೆ ಎಂದು ತಿಳಿದುಕೊಂಡಿದ್ದರೆ ಅದು ಅವರ ಭ್ರಮೆ, ಯಾರಿಂದಲೂ ಜೆಡಿಎಸ್ ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರೀಷ್ಠ ಎಚ್ ಡಿ ದೇವೇಗೌಡ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇವೇಗೌಡರು, “ಜೆಡಿಎಸ್ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮುಖಂಡರು ಕುಳಿತು ಮಾತುಕತೆ ನಡೆಸಿದ್ದೇವೆ. ಪಕ್ಷ ಸಂಘಟನೆಗೆ ಮುಂದೆ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಸಲಹೆ ನೀಡಿದ್ದಾರೆ” ಎಂದರು.
“ಕುಮಾರಸ್ವಾಮಿ ಅವರು ವಿಶ್ರಾಂತಿಯಿಂದ ಬಂದ ಬಳಿಕ, ಯಾವ ಜಿಲ್ಲೆಗೆ ಪ್ರವಾಸ, ಏನೇನು ಕಾರ್ಯಕ್ರಮ ಮಾಡಬೇಕು ಎಂಬುದನ್ನು ತೀರ್ಮಾನ ಮಾಡಿ ಲಕ್ಷಾಂತರ ಕಾರ್ಯಕರ್ತರ ಸಮೂಹವನ್ನು ಒಂದುಗೂಡಿಸಿ ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯ ಮಾಡುತ್ತೇವೆ. ಜಿ ಟಿ ದೇವೇಗೌಡ ನೇತೃತ್ವದಲ್ಲಿ ಒಂದು ಸಮಿತಿ ಮಾಡಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗುವುದು” ಎಂದು ಹೇಳಿದರು.
“ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಸದೃಢವಾಗಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರನ್ನು ಸಂಘಟನೆ ಮಾಡಿ, ಅವರ ಜೊತೆಗೆ ನಾವಿದ್ದು, ವಿಶ್ವಾಸಕ್ಕೆ ತೆಗೆದುಕೊಂಡು, ಕುಮಾರಸ್ವಾಮಿ ಅವರು ಕೊಟ್ಟಿರುವ ಕಾರ್ಯಕ್ರಮಗಳನ್ನು ಜನರ ಮುಂದೆ ಇಟ್ಟು ಹೋರಾಟ ಮಾಡುತ್ತೇವೆ” ಎಂದು ತಿಳಿಸಿದರು.
‘ಕಾಂಗ್ರೆಸ್ ಸಮಯ ಬಂದಾಗ ಸೆಕ್ಯೂಲರ್, ಇಲ್ಲದಿದ್ದಾಗ ನೋ ಸೆಕ್ಯೂಲರ್’
“ಹೆಗ್ಗಡೆ ಅವರು ಬಿಜೆಪಿ ಜೊತೆಗೆ ಹೋಗಿ ಮುಖ್ಯಮಂತ್ರಿ ಆಗಲಿಲ್ಲವೆ? ಆದರೆ, ಕುಮಾರಸ್ವಾಮಿ ಸಿಎಂ ಆಗಿದ್ದನ್ನೇ ಮುಂದೆ ಇಟ್ಟು ಮಾತನಾಡುತ್ತಾರೆ. ಜೆಡಿಎಸ್ ಮುಳುಗಿ ಹೋಗುತ್ತದೆ ಎನ್ನುತ್ತಾರೆ. ಹೌದು, ಪಾರ್ಲಿಮೆಂಟ್ ಚುನಾವಣೆಯಲ್ಲಿ ಅದು ಸ್ವಾಭಾವಿಕ, ನಾವು ಎಷ್ಟು ಸ್ಥಾನ ಗೆಲ್ಲುತ್ತೇವೋ ಗೊತ್ತಿಲ್ಲ. ನಾವು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. 28 ಕ್ಷೇತ್ರಗಳಲ್ಲಿ ಎಲ್ಲಿ ಶಕ್ತಿ ಇದೆಯೋ ಅಲ್ಲಿ, ನಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಹಾಕಿ ಚುನಾವಣೆ ಎದುರಿಸುತ್ತೇವೆ” ಎಂದು ಸ್ಪಷ್ಟನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಯಾವುದೇ ಸಚಿವರ ಮೇಲೆ ಶಾಸಕರಿಂದ ದೂರು ಬಂದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯತಿಕ್ಸ್ ಮರೆಯಬಾರದು ಎಂದು ಬಹಳ ಒಳ್ಳೆ ಸಂದೇಶ ಕೊಟ್ಟಿದ್ದಾರೆ. ಆದರೆ, ಅವರ ಪಕ್ಷದವರೇ ಆದ ಟಿ ಬಿ ಜಯಚಂದ್ರ ಅವರು, ಕೊಟ್ಟಿರುವ ವರದಿ ಮೇಲೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಿಎಂ ಈವರೆಗೂ ತಮ್ಮ ದೃಢವಾದ ನಿರ್ಧಾರ ಹೇಳುತ್ತಿಲ್ಲ. ಆದರೆ ಈ ಉಪದೇಶ ಯಾರಿಗೆ? ಸಿದ್ದರಾಮಯ್ಯ ಅವರೇ ಅಧಿಕಾರ ಮುಖ್ಯ ಅಲ್ಲ. ನೀವು ಮಾತನಾಡುವ ಮಾತು ಹೃದಯದ ಅಂತರಾಳದಿಂದ ಬರಬೇಕು. ಅಧಿಕಾರ ಬರುತ್ತೆ ಹೋಗುತ್ತೆ” ಎಂದರು.
ಕಾಂಗ್ರೆಸ್ ಇಲ್ಲದೆ ಮೊದಲ ಬಾರಿಗೆ 1983ರಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಆಗಿತ್ತು. ಅಂದು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿರಲಿಲ್ಲವೇ? ಸಿದ್ದರಾಮಯ್ಯ ಅವರು ಕಾವಲು ಸಮಿತಿ ಅಧ್ಯಕ್ಷರಾಗಿರಲಿಲ್ಲವೆ? ಬಿಜೆಪಿಯ ಬೆಂಬಲದಿಂದ ರಚನೆ ಆದಂತ ಹೆಗ್ಗಡೆ ಅವರ ಸರ್ಕಾರದಲ್ಲಿ ಯಾರು ಲೋಕೋಪಯೋಗಿ ಸಚಿವರು, ಅವರೇ ಕಾವಲು ಸಮಿತಿ ಅಧ್ಯಕ್ಷರು. ಆದ್ದರಿಂದ ರಾಜಕೀಯದಲ್ಲಿ ಯಾವ ಯಾವ ಸಂದರ್ಭದಲ್ಲಿ ಏನಾಗಿದೆ ಎಂದು ಜಿ ಟಿ ದೇವೇಗೌಡರು ವಿವರವಾಗಿ ಹೇಳಿದ್ದಾರೆ” ಎಂದರು.