ಡಾ.ಜಯದೇವಿತಾಯಿ ಲಿಗಾಡೆ ಅವರು ಕನ್ನಡದ ಅಂತಃಕರಣದ ಪರಿಚಾರಕಿಯಾಗಿದ್ದರು. ಅವರ ಇಡೀ ಬದುಕು ಕನ್ನಡಮಯವಾಗಿತ್ತು ಎಂದು ಹುಲಸೂರ ತಾಲೂಕು ಕಸಾಪ ಅಧ್ಯಕ್ಷ ನಾಗರಾಜ ಹಾವಣ್ಣ ಹೇಳಿದರು.
ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ತಾಲೂಕು ಮತ್ತು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಡಾ.ಜಯದೇವಿತಾಯಿ ಲಿಗಾಡೆ ಅವರ ಜಯಂತ್ಯೋತ್ಸವ ಹಾಗೂ ಉಪನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ʼಲಿಗಾಡೆ ತಾಯಿ ಅವರು ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆತೆಗೆ ಭಾಜನರಾಗಿದ್ದು ಹೆಮ್ಮೆಯ ವಿಚಾರ. ಕನ್ನಡವೇ ಕನ್ನಡಿಗರ ನಿಜವಾದ ಧರ್ಮ ಎಂಬ ಸಿದ್ಧಾಂತವನ್ನು ಲಿಗಾಡೆ ತಾಯಿಯವರು ಪ್ರತಿಪಾದಿಸಿದ್ದರು. ಅವರ ಸಾಹಿತ್ಯದ ಮತ್ತು ಸಮಾಜದ ಸೇವೆ ಎಲ್ಲರಿಗೂ ಅನುಕರಣೀಯʼ ಎಂದರು.
ಬಸವಕಲ್ಯಾಣದ ಐ ಸ್ಕೂಲ್ ಸಂಸ್ಥಾಪಕ ಯುವರಾಜ ಪಾಟೀಲ ಮಾತನಾಡಿ, ʼಕರ್ನಾಟಕದಲ್ಲಿ ನೆಲೆಸಿದ ಎಲ್ಲರಿಗೂ ಓದು, ಬರಹ ಮತ್ತು ಮಾತನಾಡಲು ಕನ್ನಡ ಬರಲೇಬೇಕು. ಮಾತೃಭಾಷೆಯಿಂದ ಸಮಾಜವನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯ. ಲಿಗಾಡೆ ತಾಯಿಯವರ ಕನ್ನಡ ಪ್ರೇಮ ಇಡೀ ನಾಡಿಗೆ ಮಾದರಿʼ ಎಂದರು.

ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ನಿರ್ದೇಶಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಲಿಗಾಡೆ ತಾಯಿಯವರು ವಚನಕಾರರ ವೈಚಾರಿಕ ನಿಲುವು ತಮ್ಮ ಸಾಹಿತ್ಯ ಮತ್ತು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಮಹಿಳಾ ಶಿಕ್ಷಣ, ಸ್ವಾವಲಂಬನೆ, ಸ್ವಾತಂತ್ರ್ಯಕ್ಕೆ, ಮಹಿಳೆಯರ ಆರೋಗ್ಯಕ್ಕೆ ಹೆಚ್ಚು ಮನ್ನಣೆ ನೀಡಿದ್ದರುʼ ಎಂದು ತಿಳಿಸಿದರು.
ʼಸ್ವಾತಂತ್ರ್ಯ ಚಳುವಳಿ, ಕರ್ನಾಟಕ ಏಕೀಕರಣ ಅವರ ಕನಸಾಗಿತ್ತು. ಕನ್ನಡ ನುಡಿ ಮತ್ತು ನಾಡಿನ ಬೆಳವಣಿಗೆ ಅವರ ಬದುಕಿನ ಪ್ರಧಾನ ಭಾಗವಾಗಿತ್ತು. ಅದಕ್ಕಾಗಿಯೇ ಬದುಕಿನುದ್ದಕ್ಕೂ ಶ್ರಮಿಸಿದ್ದರು. ಕಾವ್ಯ, ಮಹಾಕಾವ್ಯ ಬರೆದ ಅವರು ಶೂನ್ಯ ಸಂಪಾದನೆ ಮತ್ತು ವಚನಗಳು ಮರಾಠಿಗೆ ಅನುವಾದಿಸಿದರು. ಲಿಗಾಡೆ ತಾಯಿಯವರು ಕನ್ನಡ ಮತ್ತು ಮರಾಠಿ ಬಾಂಧವ್ಯದ ಸಾಂಸ್ಕೃತಿಕ ಸೇತುವೆʼ ಎಂದು ನುಡಿದರು.
ಇದನ್ನೂ ಓದಿ : ಬೀದರ್ | ಮಾದಕ ದ್ರವ್ಯ ಸೇವನೆ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ : ಎಸ್ಪಿ ಪ್ರದೀಪ ಗುಂಟಿ
ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ತೇಲಂಗ, ಮುಖಂಡರಾದ ಬಾಬುರಾವ ಪಾಟೀಲ, ಧೂಳಪ್ಪ ಭರಮಶೆಟ್ಟೆ, ಅಖಿಲೇಶ ಪಾಟೀಲ, ಲಹು ವಾಗ್ದರೆ, ರವಿ ಸ್ವಾಮಿ, ನಾಗಪ್ಪ ಮೇತ್ರಿ, ಪ್ರಮೋದ್ ಭರಮಶೆಟ್ಟೆ, ಗೋರಖ ಖಪಲೆ, ದತ್ತಾತ್ರಿ ಮೇತ್ರಿ, ಯುವರಾಜ ವಗ್ಗೆ, ಶಿವಕುಮಾರ್ ಮೇತ್ರೆ, ಶಂಕರ್ ಅಟ್ಟೂರೆ ಮೊದಲಾದವರಿದ್ದರು. ಹುಲಸೂರ ವಲಯ ಕಸಾಪ ಅಧ್ಯಕ್ಷ ದೀಪಕ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ಭರಮಶೆಟ್ಟೆ ನಿರೂಪಿಸಿದರು.