‘ಸತತ ಬರಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಹಾಹಾಕಾರ ಎದುರಿಸುವ ಚಿತ್ರದುರ್ಗ ಜಿಲ್ಲೆಯ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆ ಜಾರಿ ವಿಚಾರದಲ್ಲಿ ನೆರೆಯ ದಾವಣಗೆರೆ ಜಿಲ್ಲೆಯ ಕೆಲ ರೈತ, ರಾಜಕಾರಣಿಗಳು ಸದಾ ಒಂದಿಲ್ಲೊಂದು ತಗಾದೆ ತೆಗೆಯುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ’ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಲಹೆ ಮಾಡಿದೆ.
ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, “ಜಿಲ್ಲೆಯ ಹೊಸದುರ್ಗ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಅಜ್ಜಂಪುರ ಪ್ರದೇಶದ ಸುಮಾರು 518 ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮಾಡಲು 830 ಕೋಟಿ ರು ವೆಚ್ಚದ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ 346 ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನೀರು ಪೂರೈಕೆಗೆ ಟ್ರಯಲ್ ಮಾಡುವಾಗ ದಾವಣಗೆರೆ ಜಿಲ್ಲೆ ರೈತರು ಆಕ್ಷೇಪ ವ್ಯಕ್ತಪಡಿಸುವುದು ಎಷ್ಟರ ಮಟ್ಟಿಗೆ ಸರಿ” ಎಂದು ಪ್ರಶ್ನಿಸಿದರು.
“ಬಹುಗ್ರಾಮ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ನಿತ್ಯ 30 ಕ್ಯೂಸೆಕ್ಸ್ ನೀರು ಮೇಲೆತ್ತಲಾಗುತ್ತಿದ್ದು, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ತಾತ್ಕಾಲಿಕ ಬೇಡಿಕೆ ಇದಾಗಿದೆ. ಭದ್ರಾ ಕಾಲುವೆ ಸೀಳಿ ಮೇಲೆತ್ತಲಾಗಿದೆ ಎಂಬ ಕೂಗು ಎಬ್ಬಿಸಿರುವ ದಾವಣಗೆರೆ ಜಿಲ್ಲೆಯ ರೈತರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಭದ್ರಾ ಕಾಲುವೆಯಿಂದ ಇದೇ ಮೊದಲ ಬಾರಿಗೆ ಕುಡಿವ ನೀರಿನ ಯೋಜನೆಗಳ ರೂಪಿಸಿಲ್ಲ. ಭದ್ರಾವತಿ ತಾಲೂಕಿನ ಕೂಡ್ಲುಗೆರೆ ಹಾಗು ಇತರೆ ಹದಿನೆಂಟು ಗ್ರಾಮ, ಚನ್ನಗಿರಿ ತಾಲೂಕಿನ 4 ಬಹುಗ್ರಾಮ ಕುಡಿವ ನೀರಿನ ಯೋಜನೆ ಹಾಗೂ ದಾವಣಗೆರೆ ತಾಲೂಕಿನ 9 ಬಹುಗ್ರಾಮ ಕುಡಿವ ನೀರು ಯೋಜನೆಗೆ ಭದ್ರಾ ಕಾಲುವೆಯಿಂದ ನೀರು ಪಡೆಯಲಾಗುತ್ತಿದೆ. ತಮ್ಮ ಜಿಲ್ಲೆಯ ಕುಡಿವ ನೀರು ಯೋಜನೆಗಳಿಗೆ ಭದ್ರಾ ಕಾಲುವೆಯಿಂದ ನೀರು ಪೂರೈಕೆಗೆ ಸಮ್ಮತಿಸುವ ದಾವಣಗೆರೆ ರೈತರು, ಚಿತ್ರದುರ್ಗದ ಪ್ರಶ್ನೆ ಬಂದಾಗ ಮಾತ್ರ ವಿರೋಧಿಸುತ್ತಾರೆ. ಒಂದು ಅರೆ ನೀರಾವರಿ ಬೆಳೆಗೆ ಮಾತ್ರ ಭದ್ರಾ ಜಲಾಶಯದಿಂದ ನೀರು ಪೂರೈಕೆ ಎಂಬ ನಿಬಂಧನೆ ಇದ್ದರೂ ಭತ್ತ ಬೆಳೆಯಲು ಎರಡು ಬೆಳೆಗಳಿಗೆ ನೀರು ಪಡೆಯುತ್ತಿದ್ದಾರೆ. ಟೇಲ್ ಎಂಡ್ ಗೆ ನೀರು ಪೂರೈಕೆಯಾಗದಿದ್ದರೆ ಅದಕ್ಕೆ ಚಿತ್ರದುರ್ಗ ಜಿಲ್ಲೆ ಅಥವಾ ಇಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ಕುಡಿಯುವ ನೀರಿನ ಯೋಜನೆಗಳು ಕಾರಣವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದಾವಣಗೆರೆ ಜಿಲ್ಲೆಯ ರೈತರು ಹಾಗೂ ಅಲ್ಲಿನ ರಾಜಕಾರಣಿಗಳು ವಾಸ್ತವಾಂಶ ಅರಿತು ನಡೆದುಕೊಳ್ಳಲಿ. ಪದೇ ಪದೆ ಬಯಲು ಸೀಮೆ ರೈತಾಪಿ ಸಮುದಾಯ, ಜನರ ಕೆಣಕುವುದು ಬೇಡ. ಭದ್ರಾ ಜಲಾಶಯದಲ್ಲಿನ ನೀರಿನ ಮೇಲೆ ನೆರೆ ಜಿಲ್ಲೆಯ ಜನರ ಎಲ್ಲರ ಹಕ್ಕು ಇದೆ ಎಂಬುದ ಮನವರಿಕೆ ಮಾಡಿಕೊಳ್ಳಲಿ” ಎಂದು ಲಿಂಗಾರೆಡ್ಡಿ ಎಚ್ಚರಿಸಿದರು.
“ದಾವಣಗೆರೆ ರೈತರು 28 ರಂದು ಬಂದ್ ಕರೆ ಕೊಟ್ಟಿದ್ದಾರೆ. ಪ್ರತಿಯಾಗಿ ಚಿತ್ರದುರ್ಗದ ರೈತರು ಹೋರಾಟ ರೂಪಿಸುವ ಸಂಬಂಧ ಬುಧವಾರ ಹೊಸದುರ್ಗದಲ್ಲಿ ರೈತರು, ಹೋರಾಟಗಾರರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಂದಿನ ಹೋರಾಟ ಕುರಿತು ನಿರ್ಣಯ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ಆಶ್ರಮದ ಕಾರ್ಯಕ್ರಮಕ್ಕೆ ಟ್ರಸ್ಟ್ ಸದಸ್ಯರು ಭಾಗವಹಿಸಲು ಆಶ್ರಮ ರಕ್ಷಣಾ ಸಮಿತಿ ಆಕ್ಷೇಪ
ಸರ್ವೋದಯ ಕರ್ನಾಟಕದ ಮುಖಂಡ ಜೆ.ಯಾದವರೆಡ್ಡಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷರುಗಳಾದ ಕೆ.ಪಿ.ಭೂತಯ್ಯ, ಕೆ.ಸಿ.ಹೊರಕೇರಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.