ಇಂಗ್ಲೆಂಡ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐದು ಶತಕ ಗಳಿಸಿಯೂ ಭಾರತ ತಂಡವು ಸೋಲನುಭವಿಸಿದೆ.
ಐದು ವಿಕೆಟ್ ಅಂತರದ ಜಯ ಗಳಿಸಿರುವ ಇಂಗ್ಲೆಂಡ್, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. 371 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಬೆನ್ ಡಕೆಟ್ ಅಮೋಘ ಶತಕದ (149) ಬೆಂಬಲದೊಂದಿಗೆ ಇಂಗ್ಲೆಂಡ್ ರೋಚಕ ಗೆಲುವು ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 471 ರನ್ ಕಲೆಹಾಕಿದರೆ, ಇಂಗ್ಲೆಂಡ್ 465 ರನ್ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 364 ರನ್ಗಳಿಗೆ ಆಲೌಟ್ ಆದರು. ಅತ್ತ 371 ರನ್‌ಗಳ ಗುರಿಯನ್ನು ಇಂಗ್ಲೆಂಡ್ 82 ಓವರ್ಗಳಲ್ಲಿ ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿದೆ.
ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ (101), ಶುಭ್ಮನ್ (147) ಹಾಗೂ ರಿಷಭ್ ಪಂತ್ (134) ಶತಕ ಸಿಡಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ (137) ಹಾಗೂ ರಿಷಭ್ ಪಂತ್ (118) ಶತಕ ಬಾರಿಸಿದ್ದರು.
148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಪಂದ್ಯವೊಂದರಲ್ಲಿ 5 ಶತಕ ಸಿಡಿಸಿರುವುದು ಕೇವಲ ಮೂರು ಬಾರಿ. ಹೀಗೆ 5 ಶತಕ ಸಿಡಿಸಿ ಅಬ್ಬರಿಸಿದ ತಂಡಗಳೆಲ್ಲವೂ ಭರ್ಜರಿ ಜಯ ಸಾಧಿಸಿದ್ದರೆ ಭಾರತ ಪಾಲಿಗೆ ಗೆಲುವಿನ ಅದೃಷ್ಟವಿಲ್ಲ.
ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಒಟ್ಟು ಏಳು ಶತಕಗಳು ದಾಖಲಾದವು. ಅಂತಿಮ ದಿನದಾಟದಲ್ಲಿ ಬೆನ್ ಡಕೆಟ್ ಅವರ ಸೊಗಸಾದ ಶತಕ ಇಂಗ್ಲೆಂಡ್ ಗೆಲುವು ತಂದುಕೊಟ್ಟಿತು.