ಶಿವಮೊಗ್ಗ ನಗರದಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಹಿನ್ನೆಲೆ ಹಾಗೂ ಪ್ರಯಾಣಿಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮತ್ತೊಂದು ಕ್ರಮ ಕೈಗೊಂಡಿದ್ದಾರೆ. ಶಿವಮೊಗ್ಗ-ಸವಳಂಗ-ಶಿಕಾರಿಪುರ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ ಮಾಲೀಕರಿಗೆ ಉಷಾ ನರ್ಸಿಂಗ್ ಹೋಮ್ ಬಳಿಯಲ್ಲಿ ಬಸ್ ನಿಲ್ಲಿಸುವ ವಿಚಾರಕ್ಕೆ ಮಹತ್ವದ ಸೂಚನೆ ನೀಡಿದ್ದಾರೆ.
ಇನ್ನು ಮುಂದೆ ಈ ಮಾರ್ಗದ ಬಸ್‌ಗಳು ಶಿವಶರಣೆ ಅಕ್ಕಮಹಾದೇವಿ ವೃತ್ತ ಬಳಿ ಇರುವ ಉಷಾ ನರ್ಸಿಂಗ್ ಹೋಂ ಆಸ್ಪತ್ರೆಯ ಎದುರು ನಿಲುಗಡೆ ಮಾಡುವಂತಿಲ್ಲ. ಬದಲಾಗಿ, ರವೀಂದ್ರ ನಗರ ಗಣಪತಿ ದೇವಸ್ಥಾನದ ಹತ್ತಿರವಿರುವ ಬಸ್ ನಿಲ್ದಾಣದಲ್ಲಿ ಮಾತ್ರ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು ಮತ್ತು ಇಳಿಸಬೇಕು ಎಂದು ತಿಳಿಸಲಾಗಿದೆ.
ಈ ಸಂಬಂಧ ಖಾಸಗಿ ಬಸ್ ಮಾಲೀಕರ ಸಭೆಯನ್ನು ಕರೆದಿದ್ದ ಶಿವಮೊಗ್ಗ ಸಂಚಾರ ಪೊಲೀಸ್ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಟಿ.ವಿ, ಮಾಲೀಕರಿಗೆ ಬಸ್ ನಿಲುಗಡೆಯ ಸಂಬಂಧ ಸ್ಪಷ್ಟ ಸೂಚನೆ ನೀಡಿದ್ದಾರೆ.
ಪ್ರಯಾಣಿಕರ ಸುರಕ್ಷತೆ ಮತ್ತು ಸಂಚಾರ ಸುಗಮಗೊಳಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.