ಕಾವ್ಯ ರಚಿಸುವ ಕವಿಗಳು ಯಾವುದೇ ಒಂದು ಸಿದ್ಧಾಂತಕ್ಕೆ ಅಂಟಿಕೊಳ್ಳದೆ, ಮಾನವೀಯ ಮೌಲ್ಯದೊಂದಿಗೆ ನೊಂದವರ ಧ್ವನಿಯಾಗಿ ಲೋಕದ ಸಂಕಟಕ್ಕೆ ಸ್ಪಂದಿಸಬೇಕು ಎಂದು ಕವಿ ಹಾಗೂ ರಂಗಕರ್ಮಿ ಡಾ. ಬೇಲೂರು ರಘುನಂದನ್ ಅಭಿಪ್ರಾಯಪಟ್ಟರು.
ಬೀದರ್ ನಗರದಲ್ಲಿ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಏರ್ಪಡಿಸಿದ ರಾಜ್ಯ ಮಟ್ಟದ ಒಂದು ದಿನದ ‘ಕಾವ್ಯ ಕಮ್ಮಟ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕನ್ನಡ ಕಾವ್ಯ ಪರಂಪರೆಯ ಓದಿನೊಂದಿಗೆ ಚರ್ಚೆ, ಸಂವಾದ, ಅನುಸಂಧಾನದ ಮೂಲಕ ಕವಿಗಳು ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಕಾವ್ಯ ರಚಿಸಿದ್ದಾರೆ. ಕವಿತೆಯೊಂದನ್ನು ಕಟ್ಟಲು ಓದು ಬಹುಮುಖ್ಯ. ಕವಿತೆಗೆ ಅಭದ್ರತೆ, ಸೃಜನಶೀಲತೆ ಧಾತು, ಲೋಕ ನಿರ್ಮಿತಿಗೆ ಕಾವ್ಯ ಮುನ್ನೆಲೆಗೆ ಬರಬೇಕಾಗಿದೆ. ಇನ್ನೊಬ್ಬರ ಓಲೈಕೆಗೆ ಕಾವ್ಯ ಬರೆಯದೇ ಲೋಕದ ಸತ್ಯ, ಆತ್ಮದ ಹಸಿವು ನೀಗಿಸುವ ನಿಟ್ಟಿನಲ್ಲಿ ಕಾವ್ಯ ರಚಿಸಬೇಕು” ಎಂದು ಹೇಳಿದರು.
“ಕತ್ತಲೆಯಿಂದ ಬೆಳಕಿನೆಡೆಗೆ ಸಮಾಜವನ್ನು ಮುನ್ನಡೆಸುವ ಶಕ್ತಿ ಕಾವ್ಯಕ್ಕಿದೆ. ಕವಿ ಜಗತ್ತಿನ ಕಣ್ಣಿದ್ದಂತೆ. ಹೆಸರಿಗಾಗಿ ಕವಿತೆ ರಚಿಸದೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾವ್ಯ ರಚಿಸಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರ ಲಾಂಜವಾಡಕರ್ ಮಾತನಾಡಿ, “ಗಡಿ ಭಾಗವಾದ ಬೀದರ್ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಅವಕಾಶ ಸಿಗದೇ ಇರುವುದರಿಂದ ಬೆಳಕಿಗೆ ಬರಲು ಆಗುತ್ತಿಲ್ಲ. ರಾಜಧಾನಿಯಲ್ಲಿ ಗಡಿಭಾಗದ ಕವಿಗಳಿಗೆ ವೇದಿಕೆ ಸಿಗುವಂತಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೃಷಿ ಬೆಲೆ ಆಯೋಗದ ಅವಧಿ ಮತ್ತೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿ, “ಪ್ರತಿಭಾವಂತ ಬರಹಗಾರರಿಗೆ, ಸಾಹಿತಿಗಳಿಗೆ, ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಕಮ್ಮಟ, ವಿಚಾರ ಸಂಕಿರಣ, ಉಪನ್ಯಾಸಗಳನ್ನು ಆಯೋಜಿಸುವ ಮೂಲಕ ಗಡಿ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕಾರ್ಯ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ನಿರಂತರವಾಗಿ ಮಾಡಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೀಮಶಾ ಬಸಲಾಪೂರ, ಲಕ್ಷ್ಮಣ ಮೇತ್ರೆ, ಅಜಿತ ಎನ್ ಸೇರಿದಂತೆ ಇತರರು ಇದ್ದರು.