- ಮಾಸಿಕ ಪ್ರಗತಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ
- ಒನ್ ಟೈಮ್ ಸೆಟ್ಲ್ ಮೆಂಟ್ ಬಗ್ಗೆ ಸಿಎಂ ಜತೆ ಚರ್ಚೆ
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಲಾಗಿರುವ ಸಾಲ ವಸೂಲಾತಿ ಬಗ್ಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಕೆಎಂಡಿಸಿ ಭವನದಲ್ಲಿ ಮಂಗಳವಾರ ಜಿಲ್ಲಾ ವ್ಯವಸ್ಥಾಪಕರು ಮತ್ತು ವಸೂಲಾತಿ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ ಅವರು, “ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.80ರಷ್ಟು ಪ್ರಗತಿ ಸಾಧಿಸಲೇಬೇಕು” ಎಂದು ಟಾರ್ಗೆಟ್ ನೀಡಿದರು.
“ಮುಂದಿನ ವರ್ಷದ ಮಾರ್ಚ್‌ವರೆಗೂ ಜಿಲ್ಲಾ ವ್ಯವಸ್ಥಾಪಕರು ಮತ್ತು ವಸೂಲಾತಿ ಅಧಿಕಾರಿಗಳನ್ನು ಎಂತಹ ಒತ್ತಡ ಬಂದರೂ ವರ್ಗಾವಣೆ ಮಾಡಬೇಡಿ ಎಂದು ಇಲಾಖೆ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ ಸಚಿವರು, ಅಷ್ಟರೊಳಗೆ ಈಗ ಇದ್ದವರು ಸಾಲ ವಸೂಲಾತಿಯಲ್ಲಿ ಪ್ರಗತಿ ಸಾಧಿಸಲೇಬೇಕು ಎಂದು ಗಡುವು ನೀಡಿದರು.
“ನಿಗಮದಿಂದ ಶಿಕ್ಷಣ, ಉದ್ದಿಮೆ, ಸ್ವಯಂ ಉದ್ಯೋಗ ಸೇರಿ ವಿವಿಧ ಯೋಜನೆಗಳಡಿ ಪಡೆದಿರುವ 892 ಕೋಟಿ ರೂ. ಸಾಲ ವಸೂಲಾಗಬೇಕಿದ್ದು, ಜಿಲ್ಲಾ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದೀರಾ. ಸಾಲ ಕೊಡುವುದಷ್ಟೇ ನಿಮ್ಮ ಕೆಲಸವೇ” ಎಂದು ಪ್ರಶ್ನೆ ಮಾಡಿದರು.
ನಿರ್ಲಕ್ಷ್ಯ ಸಹಿಸಲ್ಲ
“ವಸೂಲಾತಿ ಪ್ರಮಾಣ ಶೇ.1ರಿಂದ 10 ರಷ್ಟು ಇದ್ದರೆ ನಮಗೆ ಅಧಿಕಾರಿ ಸಿಬ್ಬಂದಿ ಯಾಕೆ ಬೇಕು. ಇಷ್ಟೊಂದು ವೇತನ ನೀಡಿ ಇಟ್ಟು ಕೊಳ್ಳಬೇಕಾ? ಇನ್ಮುಂದೆ ಈ ರೀತಿಯ ನಿರ್ಲಕ್ಷ್ಯ ಸಹಿಸಲ್ಲ. ಇನ್ಮುಂದೆ ಪ್ರತಿ ತಿಂಗಳು ಜಿಲ್ಲಾ ವ್ಯವಸ್ಥಾಪಕರು ಹಾಗೂ ವಸೂಲಾತಿ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಬೇಕು. ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನ ನೀಡಲಾಗುವುದು” ಎಂದು ಘೋಷಿಸಿದರು.
ಈ ಸುದ್ದಿ ಓದಿದ್ದೀರಾ? ಕೇವಲ 11 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಕಾಂಗ್ರೆಸ್; ಲೋಕಸಭಾ ಚುನಾವಣೆ ಕತೆಯೇನು?
ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಅಧಿಕಾರಿಗಳನ್ನು ಶ್ಲಾಘಿಸಿದ ಸಚಿವರು, ಕಳಪೆ ಪ್ರದರ್ಶನ ತೋರಿರುವ ಬಳ್ಳಾರಿ, ಬೀದರ್, ಬೆಳಗಾವಿ, ಬೆಂಗಳೂರು ಕೇಂದ್ರ, ಶಿವಮೊಗ್ಗ ಜಿಲ್ಲೆಗಳ ಅಧಿಕಾರಿಗಳನ್ನು ಇದೇ ವೇಳೆ ತರಾಟೆಗೆ ತೆಗೆದುಕೊಂಡರು.
“ಸಾಲ ವಸೂಲಾತಿಯಲ್ಲಿ ಉತ್ತಮ ಪ್ರಗತಿ ತೋರಿದ್ದ ಕೆಲವು ಜಿಲ್ಲೆಗಳ ಅಧಿಕಾರಿಗಳು ನಿವೃತ್ತಿ ಆಗಿದ್ದು, ಅವಕಾಶ ಇದ್ದರೆ ಅವರನ್ನು ಗುತ್ತಿಗೆ ಆಧಾರದಲ್ಲಿ ಮರು ನೇಮಕ ಮಾಡಿಕೊಳ್ಳುವಂತೆ ಇದೇ ಸಂದರ್ಭದಲ್ಲಿ ಸಚಿವರು ನಿರ್ದೇಶನ ನೀಡಿದರು.
ಒನ್ ಟೈಮ್ ಸೆಟ್ಲ್ ಮೆಂಟ್ ಬಗ್ಗೆ ಸಿಎಂ ಜತೆ ಚರ್ಚೆ
ನಿಗಮದಿಂದ ನೀಡಿರುವ ಸಾಲ ಪರಿಣಾಮಕಾರಿ ವಸೂಲಾತಿ ನಿಟ್ಟಿನಲ್ಲಿ ಬಡ್ಡಿ ಮನ್ನಾ ಮಾಡುವ ಒಂದಾವರ್ತಿ ತೀರುವಳಿ (ಒನ್ ಟೈಮ್ ಸೆಟ್ಲ್ ಮೆಂಟ್) ಯೋಜನೆ ಜಾರಿ ಬಗ್ಗೆಯೂ ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಆದರೆ ಅದಕ್ಕಿಂತ ಮುಖ್ಯವಾಗಿ ನೀವು ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ಹಿರಿಯ ಅಧಿಕಾರಿಗಳಿಂದ ಸಿಗಲಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಇದೇ ಸಂದರ್ಭದಲ್ಲಿ ತಿಳಿಸಿದರು.