ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿದ್ದು, ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಅಚ್ಚರಿಯೇನೂ ಅಲ್ಲ. ಆದರೆ ಮೋದಿ ಸಖ್ಯ ಕಲ್ಲಡ್ಕ ಅವರತ್ತಲೂ ಗೌಡರನ್ನು ಕರೆದೊಯ್ದದ್ದು ಮತ್ತೊಂದು ಮಜಲಿನ ವಿದ್ಯಮಾನ. ಈ ಘಟನೆಯೊಂದಿಗೆ ಗೌಡರ ನಡು-ಎಡ-ಬಲದ ರಾಜಕೀಯ ಬದುಕಿನ ಚಕ್ರ ಉರುಳಿ ಸುತ್ತು ಪೂರೈಸಿದಂತಾಗಿದೆ.
ದಶಕಗಳ ಕಾಲ ಜಾತ್ಯತೀತತೆ ತತ್ವಕ್ಕೆ ಬದ್ಧರೆಂದು ಸಾರಿಕೊಂಡು ಬಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಕೋಮುವಾದಿ ಕೆಂಡಕಾರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆಯಾಗಿ ಆರೆಸ್ಸೆಸ್ ಪುಸ್ತಕವನ್ನು ಬಿಡುಗಡೆ ಮಾಡಿದ ‘ವಿಕಟ’ ರಾಜಕೀಯ ಸನ್ನಿವೇಶ ಬುಧವಾರ (ಜೂ.25) ಏರ್ಪಟ್ಟಿತ್ತು.
ಈ ಘಟನೆಯೊಂದಿಗೆ ಗೌಡರ ನಡು-ಎಡ-ಬಲದ ರಾಜಕೀಯ ಬದುಕಿನ ಚಕ್ರ ಉರುಳಿ ಸುತ್ತು ಪೂರೈಸಿದಂತಾಗಿದೆ.
‘ಮಂಥನ ಕರ್ನಾಟಕ’ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಜೆಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಹೊರತಂದಿರುವ ತುರ್ತು ಪರಿಸ್ಥಿತಿಯ ವಿರುದ್ಧ ಬರೆದ ಮರುಮುದ್ರಿತ ‘ಭುಗಿಲು’ ಕೃತಿಯನ್ನು ದೇವೇಗೌಡ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಇಬ್ಬರೂ ಸೇರಿ ಬಿಡುಗಡೆ ಮಾಡಿದರು.
1988ರಲ್ಲಿ ಹುಟ್ಟಿದ್ದ ಜನತಾದಳ 1999ರಲ್ಲಿ ಜನತಾದಳ ರಾಷ್ಟ್ರಮಟ್ಟದಲ್ಲಿ ಇಬ್ಭಾಗವಾಯಿತು. ಈ ಒಡಕಿನ ಮೂಲಕಾರಣವೇ ಬಿಜೆಪಿಯಾಗಿತ್ತು. ಜಾತ್ಯತೀತ-ಎಡಪಂಥೀಯ ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಿ ಪದವಿಗೇರಿದ್ದರು ದೇವೇಗೌಡರು. 1999ರಲ್ಲಿ ವಾಜಪೇಯಿ ಸರ್ಕಾರಕ್ಕೆ ಬೆಂಬಲ ನೀಡುವ ಜನತಾದಳದ ತೀರ್ಮಾನವನ್ನು ಧಿಕ್ಕರಿಸಿದರು. ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್, ಬಿಹಾರದ ನಿತೀಶ್ ಕುಮಾರ್, ಶರದ್ ಯಾದವ್ ಮುಂತಾದ ನಾಯಕರು ಬಿಜೆಪಿ ನೇತೃತ್ವದ ಎನ್.ಡಿ.ಎ.ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ. ಈ ನಡೆಯನ್ನು ಪ್ರತಿಭಟಿಸುವ ದೇವೇಗೌಡ, ಸುರೇಂದ್ರ ಮೋಹನ್, ಬಾಪೂ ಕಲ್ದಾತೆ, ಸಿದ್ದರಾಮಯ್ಯ ಮುಂತಾದ ನಾಯಕರು ಜನತಾದಳ (ಸೆಕ್ಯೂಲರ್) ಬಣವಾಗಿ ಗುರುತಿಸಿಕೊಳ್ಳುತ್ತಾರೆ.
ತಮ್ಮ ಮಗ ಎಚ್.ಡಿ.ಕುಮಾರಸ್ವಾಮಿಯವರು ಧರಮ್ ಸಿಂಗ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು 2006ರಲ್ಲಿ ರಾತ್ರೋರಾತ್ರಿ ವಾಪಸು ಪಡೆಯುತ್ತಾರೆ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆ. ಯಡಿಯೂರಪ್ಪ ಜೊತೆ ಕುಮಾರಸ್ವಾಮಿ ಕೈ ಜೋಡಿಸಿ ಸರ್ಕಾರ ರಚಿಸಿದಾಗ, “ನನ್ನ ಜೀವನದ ಮೌಲ್ಯಗಳಿಗೆ ಮಗ ಮಸಿ ಬಳಿದ, ನನ್ನ ಮಾತು ಮೀರಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ” ಎನ್ನುವ ಮೂಲಕ ತಾವಿನ್ನೂ ಜಾತ್ಯತೀತತೆಯ ನಿಲುವಿಗೆ ಬದ್ಧ ಎಂಬುದನ್ನು ದೇವೇಗೌಡರು ಪ್ರದರ್ಶಿಸಿದ್ದರು. ಕೋಮುವಾದಿಗಳ ಜೊತೆ ಸೇರಿದರೆಂದು ಸಿಟ್ಟಿಗೆದ್ದು ಕಣ್ಣೀರಿಟ್ಟು ಮಗನೊಂದಿಗೆ ಮಾತು ಬಿಡುತ್ತಾರೆ ಗೌಡರು. ಆದರೆ ಕಾಲಕ್ರಮೇಣ ಮುನಿಸು ಶಮನವಾಗುತ್ತದೆ. ಜಾತ್ಯತೀತ ಜನತಾದಳ ಒಡೆಯದಂತೆ ಉಳಿಸಿಕೊಳ್ಳಲು ಕುಮಾರಸ್ವಾಮಿ ಹೀಗೆ ಮಾಡಿದ್ದು ಸರಿ ಎಂದು ಸಮರ್ಥಿಸುತ್ತಾರೆ.

2014ರ ಲೋಕಸಭಾ ಚುನಾವಣೆ ಹೊತ್ತಲ್ಲಿ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ದೇವೇಗೌಡರು ಮಾತನಾಡಿದ್ದು ದೊಡ್ಡ ಸುದ್ದಿಯಾಗಿತು. ಆಗ “ದೇಶದಲ್ಲಿ ಕೋಮುವಾದ ಯಾವತ್ತೂ ನಿಲ್ಲುವುದಿಲ್ಲ. ಜಾತ್ಯತೀತ ತತ್ವ ಈ ದೇಶದ ಶಾಶ್ವತ ಶಕ್ತಿಯಾಗಿದೆ. ಈ ತತ್ವದ ಆಧಾರದಲ್ಲಿಯೇ ದೇಶ ಮುಂದುವರಿಯಬೇಕಾಗಿದೆ. ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಅವರ ಪಕ್ಷದವರು ಹೇಳುತ್ತಾರೆಯೇ ಹೊರತು ಜನ ಹೇಳುತ್ತಿಲ್ಲ. ನಾನು ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಕಾಣಲು ಇಷ್ಟ ಪಡುವುದಿಲ್ಲ” ಎಂದಿದ್ದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸುವುದಿಲ್ಲ. ದೇವೇಗೌಡರ ಪಕ್ಷದೊಂದಿಗೆ ಸರ್ಕಾರ ರಚನೆಗೆ ಮುಂದಾಗುತ್ತದೆ. ಕುಮಾರಸ್ವಾಮಿ ಪುನಃ ಮುಖ್ಯಮಂತ್ರಿಯಾಗುತ್ತಾರೆ. 2019ರಲ್ಲಿ ಅನೇಕ ಕಾಂಗ್ರೆಸ್ ಶಾಸಕರು ಬಿಜೆಪಿ ಪಾಳೆಯಕ್ಕೆ ಸರಿಯುವ ಬೆಳವಣಿಗೆ ಘಟಿಸಿ ಬಹುಮತ ಕಳೆದುಕೊಳ್ಳುತ್ತಾರೆ ಕುಮಾರಸ್ವಾಮಿ.
ಮೋದಿಯವರ ಭೇಟಿ ಮಾಡಿದರೆ ಬಿಜೆಪಿ ಸೇರಿದಂತೆ ಅರ್ಥವಲ್ಲ ಎಂದು 2021ರಲ್ಲಿ ಸ್ಪಷ್ಟೀಕರಣ ನೀಡುವ ದೇವೇಗೌಡರು ದಿನಗಳೆದಂತೆ ಮೋದಿಯವರಿಗೆ ಹತ್ತಿರವಾದರು. ಈ ಸಾಮೀಪ್ಯ 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದುಬಾರಿಯಾಯಿತು. ಜಾತ್ಯತೀತ ಜನತಾದಳದಿಂದ ಮುಸಲ್ಮಾನರು ನಿರ್ಣಯಾತ್ಮಕವಾಗಿ ದೂರ ಸರಿದರು. ಗೌಡರು, ಕುಮಾರಸ್ವಾಮಿಯವರು, ನಿಖಿಲ್ ಕುಮಾರಸ್ವಾಮಿ ಮೂವರೂ ಮುಸಲ್ಮಾನರ ಈ ‘ದ್ರೋಹ’ದಿಂದ ಕೆರಳಿ ಕುದಿದರು. ಈ ಆಕ್ರೋಶ ಮಾತುಗಳಾಗಿ ಅನೇಕ ಸಲ ಹೊರಬಿದ್ದಿದೆ.

ಮೋದಿಯವರಂತಹ ನಾಯಕ ಮತ್ತೊಬ್ಬರಿಲ್ಲ ದೇವೇಗೌಡರು ಎಂದು ಮತ್ತೆ ಮತ್ತೆ ಹಾಡಿ ಹೊಗಳಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಸೀಟು ಹೊಂದಾಣಿಕೆ ಮಾಡಿಕೊಂಡರು. ಚುನಾವಣೆಯ ಹೊಸ್ತಿಲಲ್ಲಿ ಪ್ರಜ್ವಲ್ ರೇವಣ್ಣ ಅವರ ಅತ್ಯಾಚಾರಗಳ ಸಾವಿರಾರು ಸಿ.ಡಿ.ಗಳು ಸ್ಫೋಟಿಸುತ್ತವೆ. ಏನೂ ತಿಳಿಯದವರಂತೆ ಪ್ರಜ್ವಲ್ ಪರವಾಗಿ ಹಾಸನದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾರೆ ಮೋದಿಯವರು. ‘ಮೋದಿ ಮತ್ತು ನನ್ನದು ಯಾವುದೋ ಜನ್ಮಾಂತರದ ಸಂಬಂಧ’ ಎಂದು ಗೌಡರು ಉದ್ಗರಿಸಿದ್ದರು. ಮೋದಿ ಸಂಪುಟದಲ್ಲಿ ಭಾರೀ ಕೈಗಾರಿಕಾ ಮಂತ್ರಿಯಾದರು ಕುಮಾರಣ್ಣ. ಹೃದ್ರೋಗತಜ್ಞ ಮತ್ತು ದೇವೇಗೌಡರ ಅಳಿಯ ಡಾ.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು.
ಜಾತ್ಯತೀತ ಜನತಾ ಪಕ್ಷ ಎನ್ನುವುದು ‘ಬಿಜೆಪಿಯ ಬಿ ಟೀಮ್’ ಎಂದು ಸಿಎಂ ಸಿದ್ದರಾಮಯ್ಯ ಮೊದಲಿನಿಂದಲೂ ಆರೋಪಿಸಿಕೊಂಡು ಬಂದಿದ್ದರು. ಈಗ ಕೊನೆಯದಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ದೇವೇಗೌಡರು ಭುಜಕ್ಕೆ ಭುಜ ತಾಗಿಸಿ ನಿಂತು ‘ಭುಗಿಲು’ ಕೃತಿ ಬಿಡುಗಡೆ ಮಾಡಿರುವುದು ದೇವೇಗೌಡರ ಒಳಗಿನ ನೈಜ ‘ಭುಗಿಲು’ ಅನಾವರಣಗೊಂಡಿದೆ. ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿದ್ದು, ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಅಚ್ಚರಿಯೇನೂ ಅಲ್ಲ. ಆದರೆ ಮೋದಿ ಸಖ್ಯ ಕಲ್ಲಡ್ಕ ಅವರತ್ತಲೂ ಗೌಡರನ್ನು ಕರೆದೊಯ್ದದ್ದು ಮತ್ತೊಂದು ಮಜಲಿನ ವಿದ್ಯಮಾನ.
ಕಾರ್ಯಕ್ರಮದಲ್ಲಿ ರಾಜಾಜಿನಗರದ ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಮತ್ತು ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷ ಎಂ ಪಿ ಕುಮಾರ್ ಉಪಸ್ಥಿತರಿದ್ದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.