ನ್ಯೂಯಾರ್ಕ್ ನಗರದ ಡೆಮಾಕ್ರಟಿಕ್ ಮೇಯರ್ ಪ್ರೈಮರಿ ಚುನಾವಣೆಯಲ್ಲಿ ಗೆದ್ದಿರುವ ಡೆಮಾಕ್ರಟಿಕ್ ಸಮಾಜವಾದಿ ಜೊಹ್ರಾನ್ ಮಮ್ದಾನಿ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರೂತ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ಮಮ್ದಾನಿಯನ್ನು “100% ಕಮ್ಯುನಿಸ್ಟ್ ಹುಚ್ಚ” ಎಂದು ಟೀಕಿಸಿದ್ದಾರೆ.
ಭಾರತೀಯ ಮೂಲದ ಮುಸ್ಲಿಂ ಮತ್ತು ಎಡಪಂಥೀಯ ಅಭ್ಯರ್ಥಿಯಾದ ಜೋಹ್ರಾನ್ ಮಮ್ದಾನಿ ಅವರು ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ನಡೆಯುವ ಅಭ್ಯರ್ಥಿ ಆಯ್ಕೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅಮೆರಿಕದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
33 ವರ್ಷದ ಮಮ್ದಾನಿ ಈಗ ನ್ಯೂಯಾರ್ಕ್ ನಗರದ ಮೇಯರ್ ಆಗುವುದು ಖಚಿತ ಎಂದೇ ಹೇಳಲಾಗುತ್ತಿದೆ. ನಿರೀಕ್ಷಿತದಂತೆ ಮೇಯರ್ ಸ್ಥಾನಕ್ಕೆ ಮಮ್ದಾನಿ ಆಯ್ಕೆಯಾದರೆ ಈ ಸ್ಥಾನಕ್ಕೆ ಏರಿದ ಮೊದಲ ಭಾರತೀಯ-ಅಮೆರಿಕನ್ ಹಾಗೂ ಮೊದಲ ಮುಸ್ಲಿಂ ಆಗಲಿದ್ದಾರೆ.
ಜೋಹ್ರಾನ್ ಮಮ್ದಾನಿ ಉಗಾಂಡಾದಲ್ಲಿ ಜನಿಸಿದ್ದು ಅವರ ಪೋಷಕರು ಭಾರತೀಯ ಮೂಲದವರು. ಅವರ ತಾಯಿ ಮೀರಾ ನಾಯರ್ ಖ್ಯಾತ ನಿರ್ದೇಶಕಿ. ಅವರು ‘ಸಲಾಮ್ ಬಾಂಬೆ’, ‘ನೇಮ್‌ಸೇಕ್’ ಮತ್ತು ‘ಮಾನ್ಸೂನ್ ವೆಡ್ಡಿಂಗ್’ ನಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ಇವು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಅದೇ ಸಮಯದಲ್ಲಿ, ಅವರ ತಂದೆ ಮಹಮೂದ್ ಮಮ್ದಾನಿ ಪ್ರಸಿದ್ಧ ಶಿಕ್ಷಣ ತಜ್ಞರು.