ದೇವನಹಳ್ಳಿಯಲ್ಲಿ ರೈತರು ಮತ್ತು ರಾಜ್ಯದ ಚಳವಳಿ ಮುಂದಾಳುಗಳ ಮೇಲೆ ನಡೆದ, ಪೊಲೀಸ್ ದಬ್ಬಾಳಿಕೆ, ಬಂಧನ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮಂಡ್ಯದಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹೋರಾಟಗಾರರು ಮತ್ತು ನಾಗರಿಕರು, “ಶಾಂತಿಯುತವಾಗಿ ನಡೆದಿದ್ದ ದೇವನಹಳ್ಳಿ ರೈತರ ಪ್ರತಿಭಟನೆಯನ್ನು ಸರ್ಕಾರವು ವಿಪರೀತ ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಮಹಿಳೆಯರು-ಮಕ್ಕಳನ್ನೂ ಒಳಗೊಂಡು ಎಲ್ಲ ಮುಂದಾಳುಗಳನ್ನೂ ಅನಾಗರಿಕವಾಗಿ ಎಳೆದಾಡಿ ವಶಕ್ಕೆ ಪಡೆದಿದೆ” ಎಂದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಶಾಂತಿಯುತ ಪ್ರತಿಭಟನಾ ಸಮಾವೇಶದ ಮೇಲೆ ನಡೆಸಲಾಗಿರುವ ಪೊಲೀಸ್ ದೌರ್ಜನ್ಯ ಮತ್ತು ಕೃಷಿಭೂಮಿಯನ್ನು ರೈತರಿಂದ ಒತ್ತಾಯಪೂರ್ವಕವಾಗಿ ಕಸಿಯುವ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಹೋರಾಟ ಮುಂದುವರೆಯಲಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಅಧಿಕಾರಸ್ಥರು ಅನ್ನ ತಿನ್ನುವವರೇ ಆದರೆ, ಭೂ ಸ್ವಾಧೀನ ಕೈಬಿಡಲಿ
“ಅಭಿವೃದ್ಧಿ ಹೆಸರಲ್ಲಿ ರಿಯಲ್ ಎಸ್ಟೇಟ್ ಧಂಧೆಕೋರ ಬಂಡವಾಳಿಗರಿಗೆ ಲಾಭ ಮಾಡಿಕೊಡಲು, ಕೃಷಿ-ರೈತರ ಬದುಕನ್ನು ನಾಶ ಮಾಡಿ ಅಸಂಖ್ಯಾತ ರೈತ ಸಮುದಾಯವನ್ನು ಬೀದಿಪಾಲು ಮಾಡಲು ಹೊರಟಿರುವುದು ಸರ್ಕಾರದ ಹೀನ ನಡೆ. ರೈತರು, ದಲಿತರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮದ ಭೂಮಿಯನ್ನು ಬಂಡವಾಳಿಗರ ಒಪ್ಪಿಸಲು ನಾಚಿಕೆಡಿನ ಸಂಗತಿ. ರೈತ, ಕಾರ್ಮಿಕ, ದಲಿತ, ಮಹಿಳಾ ಹಾಗೂ ಜನ ವಿರೋಧಿ ಸರ್ಕಾರಗಳ ತುಂಬಾ ದಿನ ಅಧಿಕಾರ ನಡೆಸಲು ಸಾಧ್ಯವಿಲ್ಲ. ಈ ನೆಲ ಇಂತಹ ದರ್ಪ ದೌರ್ಜನ್ಯವನ್ನು ಮೆಟ್ಟಿ ನಿಂತ ಇತಿಹಾಸವನ್ನು ನೋಡಿದೆ. ಸಿದ್ದರಾಮಯ್ಯ ಸರ್ಕಾರ ಮುಂದಿನ ಪರಿಣಾಮ ಎದುರಿಸಲು ಸಿದ್ದವಾಗಬೇಕಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯಗಳು;
- ಹೋರಾಟಗಾರರೊಂದಿಗೆ ಹೀನಾಯವಾಗಿ ವರ್ತಿಸಿ ಅನಗತ್ಯ ಬಲಪ್ರಯೋಗ ಮಾಡಿದ ಡಿಸಿಪಿ ಸಜಿತ್ ಅವರನ್ನು ಸಸ್ಪೆಂಡ್ ಮಾಡಬೇಕು. ಡಿಸಿಪಿ ಮತ್ತು ಪೊಲೀಸ್ ಅತಿರೇಕದ ವರ್ತನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು.
- ಕೂಡಲೇ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಣ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಇಲ್ಲವೇ ಹೋರಾಟಗಾರರೆಲ್ಲರನ್ನೂ ಜೈಲಿಗೆ ಹಾಕಬೇಕು. (ಯಾರು ಜಾಮೀನು ಪಡೆಯುವುದಿಲ್ಲ)