ಮೇಘಾಲಯದಲ್ಲಿ ‘ಹನಿಮೂನ್ ಹತ್ಯೆ’ ಎಂದೇ ಹೆಸರಿಸಲಾದ ರಾಜ ರಘುವಂಶಿ ಅವರ ಕೊಲೆಯ ಬೆನ್ನಲ್ಲೇ, ಅಂಥದ್ದೇ ಮತ್ತೊಂದು ಪ್ರಕರಣ ತೆಲಂಗಾಣದಲ್ಲಿ ನಡೆದಿದೆ. ವಿವಾಹವಾದ ಒಂದೇ ತಿಂಗಳಲ್ಲಿ ಯುವತಿಯೊಬ್ಬರು ತನ್ನ ಪ್ರೇಮಿ ಜೊತೆ ಸೇರಿ ಪತಿಯನ್ನು ಕೊಂದಿದ್ದಾರೆ. ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ.
ತೆಲಂಗಾಣದ ತೇಜೇಶ್ವರ್ ಅವರನ್ನು ಅವರ ಪತ್ನಿ ಐಶರ್ಯ ಮತ್ತು ಆಕೆಯ ಪ್ರೇಮಿ ತಿರುಮಲ್ ರಾವ್ ಕೊಂದಿದ್ದಾರೆ. ಈ ಕೃತ್ಯಕ್ಕೆ ಮೇಘಾಲಯದಲ್ಲಿ ನಡೆದಿದ್ದ ರಾಜ ರಘುವಂಶಿ ಅವರ ಹತ್ಯೆಯೇ ಪ್ರೇರಣೆಯಾಗಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತೆಲಂಗಾಣದ ಗಡ್ವಾಲ್‌ನಲ್ಲಿ ತೇಜೇಶ್ವರ್ ಮತ್ತು ಆತನ ಕುಟುಂಬವು ನೆಲೆಸಿತ್ತು. ತೇಜೇಶ್ವರ್ ಕಾಣೆಯಾಗಿದ್ದಾರೆ ಎಂದು ಕುಟುಂಬವು ಜೂನ್ 18ರಂದು ದೂರು ದಾಖಲಿಸಿತ್ತು. ಇದಾದ ಮೂರು ದಿನಗಳ ಬಳಿಕ, ಜೂನ್ 21 ರಂದು ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಪಣ್ಯಂನಲ್ಲಿರುವ ಹೊಲದಲ್ಲಿ ತೇಜೇಶ್ವರ್ ಅವರ ಕೊಳೆತ ಶವ ಪತ್ತೆಯಾಗಿದೆ. ಅವರ ಮುಂಗೈಯಲ್ಲಿ ತೆಲುಗು ಭಾಷೆಯಲ್ಲಿದ್ದ ‘ಅಮ್ಮ’ ಎಂಬ ಹಚ್ಚೆಯನ್ನು ಆಧರಿಸಿ ಅವರ ಗುರುತನ್ನು ಪತ್ತೆಹಚ್ಚಲಾಗಿದೆ.
ತೇಜೇಶ್ವರ್ ಹತ್ಯೆಯಲ್ಲಿ ಅವರ ಪತ್ನಿ ಐಶ್ವರ್ಯ ಅವರ ಕೈವಾಡವಿದೆ ಎಂದು ತೇಜೇಶ್ವರ್ ಕುಟುಂಬವು ಅನುಮಾನ ವ್ಯಕ್ತಪಡಿಸಿತ್ತು. “ಐಶ್ವರ್ಯಗೆ ಬ್ಯಾಂಕ್ ಮ್ಯಾನೇಜರ್ ಜೊತೆ ಸಂಬಂಧವಿದೆ ಎಂಬುದಾಗಿ ಗೊತ್ತಾಗಿತ್ತು. ಹೀಗಾಗಿ, ಆಕೆಯನ್ನು ವಿವಾಹವಾಗದಂತೆ ನಾವು ತೇಜೇಶ್ವರ್‌ಗೆ ಸೂಚಿಸಿದ್ದೆವು. ಆದರೆ, ಆತ ಆಕೆಯನ್ನು ಪ್ರೀತಿಸುತ್ತಿದ್ದೇನೆ, ಆಕೆಯನ್ನೇ ವಿವಾಹವಾಗುತ್ತೇನೆಂದು ಪಟ್ಟು ಹಿಡಿದಿದ್ದ” ಎಂದು ತೇಜೇಶ್ವರ್ ಅಣ್ಣ ತೇಜವರ್ಧನ್ ಹೇಳಿದ್ದಾರೆ.
ಕುಟುಂಬಸ್ಥರ ಶಂಕೆಯನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಐಶ್ವರ್ಯ-ತಿರುಮಲ ರಾವ್ ಕೃತ್ಯದ ರೂವಾರಿಗಳು ಎಂಬುದನ್ನು ಪತ್ತೆಹಚ್ಚಿದ್ದಾರೆ. ಆರೋಪಿ ಐಶ್ವರ್ಯ ಮತ್ತು ತಿರುಮಲ್ ರಾವ್ – ಇಬ್ಬರೂ ರಾಜ ರಘುವಂಶಿ ಕೊಲೆ ಪ್ರಕರಣದ ಬಗ್ಗೆ ಚರ್ಚಿಸಿದ್ದರು. ಅದೇ ರೀತಿಯಲ್ಲಿ ತೇಜೇಶ್ವರ್ ಅವರನ್ನು ಕೊಲ್ಲಲು ಮತ್ತು ಪೊಲೀಸರ ತನಿಖೆಯ ಜಾಡು ತಪ್ಪಿಸಲು ಸಂಚು ರೂಪಿಸಿದ್ದರು ಎಂಬುದನ್ನು ಬಯಲಿಗೆಳಿದಿದ್ದಾರೆ.
ಗಡ್ವಾಲ್ ಪೊಲೀಸ್ ಮುಖ್ಯಸ್ಥ ಟಿ ಶ್ರೀನಿವಾಸ ರಾವ್ ಅವರ ಪ್ರಕಾರ; ಐಶ್ವರ್ಯ ಮತ್ತು ತಿರುಮಲ್ ರಾವ್ ಅವರು ರಾಜ ರಘುವಂಶಿಯ ಹತ್ಯೆಯಂತೆಯೇ ತೇಜೇಶ್ವರ್ ಅವರನ್ನು ಕೊಲ್ಲಲು ಯೋಜಿಸಿದ್ದರು. ಅವರ ಯೋಜನೆಯಂತೆ, ತನ್ನನ್ನು ಬೈಕ್‌ನಲ್ಲಿ ಸುತ್ತಾಡಲು ಕರೆದೊಯ್ಯುವಂತೆ ತೇಜೇಶ್ವರ್ ಅವರನ್ನು ಐಶ್ವರ್ಯ ಕೇಳಬೇಕು. ಅವರು ಬೈಕ್‌ನಲ್ಲಿ ಹೋಗುವಾಗ ದಾರಿ ಮಧ್ಯೆ ಕೊಲೆಗಾರರು ಅವರ ಅವರ ಮೇಲೆ ದಾಳಿ ಮಾಡಿ, ತೇಜೇಶ್ವರ್ ಅವರನ್ನು ಕೊಂದು, ಐಶ್ವರ್ಯ ಅವರನ್ನು ಕರೆದೊಯ್ಯುವುದು. ಐಶ್ವರ್ಯ ಅವರನ್ನು ಅಪಹರಿಸಲಾಗಿದೆ ಎಂಬುದಾಗಿ ಬಿಂಬಿಸಿ, ಕೊಲೆ ಮತ್ತು ಅಪಹರಣ ಆಯಾಮ ನೀಡುವುದು. ಪೊಲೀಸರು ಕೊಲೆ-ಅಪಹರಣ ಆಯಾಮದಲ್ಲಿ ತನಿಖೆ ನಡೆಸುತ್ತಾರೆ. ತಾವು ಸಿಕ್ಕಿಬೀಳುವುದಿಲ್ಲ ಎಂಬುದು ಅವರ ಯೋಜನೆಯಾಗಿತ್ತು.
ರಾಜ ರಘುವಂಶಿ ಪ್ರಕರಣದಲ್ಲಿಯೂ ನಿಖರವಾಗಿ ಹೀಗೆಯೇ ನಡೆದಿತ್ತು. ರಾಜ ಅವರ ಮೃತದೇಹ ಪತ್ತೆಯಾದ ಹಲವು ದಿನಗಳ ಕಾಲ ಅವರ ಪತ್ನಿ ಸೋನಮ್ ಕಾಣೆಯಾಗಿದ್ದರು. ಅಂತಿಮವಾಗಿ, ಪೊಲೀಸರು ರಾಜ ಅವರ ಹತ್ಯೆ ಪಿತೂರಿಯಲ್ಲಿ ಸೋನಮ್ ಪಾತ್ರವೂ ಇರುವುದನ್ನು ಕಂಡುಹಿಡಿದರು. ಆದಾಗ್ಯೂ, ಸೋನಮ್ ಸಿಕ್ಕಿಬಿದ್ದ ಬಳಿಕ ಐಶ್ವರ್ಯ ಮತ್ತು ತಿರುಮಲ್ ಅವರು ತಮ್ಮ ಈ ಯೋಜನೆಯನ್ನು ಕೈಬಿಟ್ಟು, ಇತರ ಆಯ್ಕೆಗಳ ಬಗ್ಗೆ ಚರ್ಚಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಶಿಲ್ಲಾಂಗ್ ಹನಿಮೂನ್ ಪ್ರಕರಣ: ಪಿತೃಪ್ರಭುತ್ವದಲ್ಲಿ ಮಹಿಳಾ ಸ್ವಾತಂತ್ರ್ಯದ ಹತ್ಯೆಯಿಂದ ಸಂಭವಿಸಿದ ಕೊಲೆ
ಐಶ್ವರ್ಯ ತನ್ನ ಪತಿಯ ಚಲನವಲನಗಳನ್ನು ಗಮನಿಸಲು (ಟ್ರ್ಯಾಕ್ ಮಾಡಲು) ತೇಜೇಶ್ವರ್ ಅವರ ಬೈಕ್‌ನಲ್ಲಿ ಜಿಪಿಎಸ್ ಸಾಧನವನ್ನು ಅಳವಡಿಸಿದ್ದರು. ಜಿಪಿಎಸ್‌ನಿಂದ ದೊರೆಯುವ ಮಾಹಿತಿಗಳನ್ನು ಒದಗಿಸಲು ನೆರೆಹೊರೆಯ ಸ್ನೇಹಿತ ಮೋಹನ್ ಎಂಬಾತನ ಸಹಕಾರ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಎಂಟು ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಐಶ್ವರ್ಯ, ತಿರುಮಲ್ ರಾವ್ ಹಾಗೂ ಸಂಚಿನ ಬಗ್ಗೆ ತಿಳಿದಿದ್ದ ಐಶ್ವರ್ಯ ಆಕೆಯ ತಾಯಿ ಸುಜಾತ, ತಿರುಮಲ್ ಅವರ ತಂದೆ – ಮಾಜಿ ಹೆಡ್ ಕಾನ್‌ಸ್ಟೆಬಲ್, ಮೂವರು ಬಾಡಿಗೆ ಹಂತಕರಾದ ನಾಗೇಶ್, ಪರಶುರಾಮ್ ಹಾಗೂ ರಾಜೇಶ್ ಸೇರಿದ್ದಾರೆ.
ತನಿಖೆ ನಡೆಸಿದ ಅಧಿಕಾರಿಗಳ ಪ್ರಕಾರ, ತೇಜೇಶ್ವರ್ ಅವರ ಹತ್ಯೆಗೆ ಐಶ್ವರ್ಯ ಮತ್ತು ತಿರುಮಲ ರಾವ್ ಐದು ಬಾರಿ ವಿಫಲ ಪ್ರಯತ್ನಗಳು ನಡೆಸಿದ್ದಾರೆ. ದುರದೃಷ್ಟವಶಾತ್, 6ನೇ ಬಾರಿಯ ಯತ್ನದಲ್ಲಿ ತೇಜೇಶ್ವರ್ ಬಲಿಯಾಗಿದ್ದಾರೆ. ಆರೋಪಿಗಳು ತಮ್ಮ ಕೃತ್ಯವನ್ನು ಸಾಧಿಸುವಲ್ಲಿ ಸಫಲರಾಗಿದ್ದಾರೆ.
ತಾಯಿ-ಮಗಳ ತ್ರಿಕೋನ ಪ್ರೇಮ
ಐಶ್ವರ್ಯಳ ತಾಯಿ ಸುಜಾತ ಬ್ಯಾಂಕೇತರ ಹಣಕಾಸು ಕಂಪನಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ ತಿರುಮಲ್ ರಾವ್ ಎಂಬ ಅಧಿಕಾರಿಯ ಪರಿಚಯವಾಯಿತು. 2016ರಲ್ಲಿ ಅವರಿಬ್ಬರ ನಡುವೆ ವಿವಾಹೇತರ ಸಂಬಂಧ ಬೆಳೆಯಿತು. ನಂತರ, ಸುಜಾತ ರಜೆಯ ಮೇಲೆ ಹೋದಾಗ, ಐಶ್ವರ್ಯ ಜೊತೆಗೆ ತಿರುಮಲ್ ರಾವ್ ಸಂಬಂಧ ಬೆಳೆಯಿತು. ಆದಾಗ್ಯೂ, ತಿರುಮಲ್ ರಾವ್ 2019ರಲ್ಲಿ ಬೇರೊಬ್ಬ ಯುವತಿಯನ್ನು ವಿವಾಹವಾದರು. ಮಾತ್ರವಲ್ಲ, ಆಕೆಯನ್ನೂ ಕೊಲ್ಲಲು ಆರೋಪಿಗಳು ಸಂಚುರೂಪಿಸಿದ್ದರು ಎಂದು ಪೊಲೀಸರು ತನಿಖೆ ವೇಳೆ ಕಂಡುಕೊಂಡಿದ್ದಾರೆ.
ಸುಜಾತ ತನ್ನ ಮಗಳು ರಾವ್ ಜೊತೆ ಸಂಬಂಧ ಹೊಂದಿರುವ ಬಗ್ಗೆ ತಿಳಿದಾಗ, ರಾವ್‌ನಿಂದ ಮಗಳನ್ನು ದೂರ ಇರಿಸಿದ್ದರು. ಅಲ್ಲದೆ, ತನಗೆ ಪರಿಚಿತನಾಗಿದ್ದ ತೇಜೇಶ್ವರ್ ಜೊತೆ ವಿವಾಹವಾಗುವಂತೆ ಐಶ್ವರ್ಯ ಮೇಲೆ ಒತ್ತಡ ಹೇರಿದ್ದರು. ಮದುವೆಗೆ ಬಲವಂತವಾಗಿ ಐಶ್ವರ್ಯಳನ್ನು ಒಪ್ಪಿಸಿದರು. ಆದಾಗ್ಯೂ, ವಿವಾಹ ಸಮಯದಲ್ಲಿ ಐಶ್ವರ್ಯ ನಾಪತ್ತೆಯಾಗಿದ್ದರು. ಕೆಲ ದಿನಗಳ ಬಳಿ ಮರಳಿದ ಐಶ್ವರ್ಯ, ‘ವರದಕ್ಷಿಣೆ ನೀಡಲು ತನ್ನ ತಾಯಿಯ ಬಳಿ ಹಣವಿಲ್ಲದ ಕಾರಣ, ಅಜ್ಞಾತವಾಗಿದ್ದೆ’ ಎಂದು ಹೇಳಿಕೊಂಡರು. ಇದೆಲ್ಲವನ್ನೂ ಗಮನಿಸಿ, ಅರಿತ ತೇಜೇಶ್ವರ್ ಕುಟುಂಬವು ಆಕೆ ಜೊತೆಗಿನ ವಿವಾಹ ಬೇಡವೆಂದು ತೇಜೇಶ್ವರ್‌ಗೆ ಸಲಹೆ ನೀಡಿತ್ತು. ಆದರೂ. ಕಳೆದ ತಿಂಗಳು, ಮೇ 18ರಂದು ಕುಟುಂಬದ ಅನುಪಸ್ಥಿತಿಯಲ್ಲಿ ತೇಜೇಶ್ವರ್ ಮತ್ತು ಐಶ್ವರ್ಯ ವಿವಾಹವಾದರು.
ಸಂಚು ಮತ್ತು ಕೊಲೆ
ಐಶ್ವರ್ಯ ಜೊತೆಗಿನ ವಿವಾಹವನ್ನು ತಡೆಯಲು ತೇಜೇಶ್ವರ್ ಕುಟುಂಬವು ನಿರಂತರವಾಗಿ ಪ್ರಯತ್ನಿಸಿತ್ತು. ಫೆಬ್ರವರಿಯಿಂದ ಜೂನ್‌ವರೆಗೆ ಸುಮಾರು 2,000ಕ್ಕೂ ಹೆಚ್ಚು ಬಾರಿ ತೇಜೇಶ್ವರ್ ಜೊತೆ ಫೋನ್ ಕರೆಯಲ್ಲಿ ಕುಟುಂಬವು ಮಾತನಾಡಿದೆ. ಆದರೂ, ಅವರಿಗೆ ವಿವಾಹವನ್ನು ತಡೆಯಲಾಗಲಿಲ್ಲ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಮದುವೆಯಾದ ಕೆಲವೇ ದಿನಗಳಲ್ಲಿ ತೇಜೇಶ್ವರ್ ಅವರನ್ನು ಕೊಲ್ಲಲು ಐಶ್ವರ್ಯ ಮತ್ತು ತಿರುಮಲ್ ಸಂಚು ಹೆಣೆಯಲಾರಂಭಿಸಿದರು. ಹತ್ಯೆ ಕೃತ್ಯಕ್ಕಾಗಿ ಮೂವರು ಕೊಲೆಗಾರರನ್ನು ತಿರುಮಲ್ ಹುಡುಕಿದರು. ಅವರಿಗೆ ಮುಂಗಡ ಹಣ ನೀಡಿದ್ದರು. ಕೆಲಸ (ಕೊಲೆ) ಪೂರ್ಣಗೊಳಿಸಿದ ಬಳಿಕ ಮತ್ತಷ್ಟು ಹಣ ನೀಡುವುದಾಗಿ ಭರವಸೆ ನೀಡಿದ್ದರು.
ಈ ಲೇಖನ ಓದಿದ್ದೀರಾ?:ʼಮುಸ್ಲಿಮರು ಹೊಡಿಯಿರಿ’ ಎಂದ ಬಿಜೆಪಿಯ ಅನಂತಕುಮಾರ್ ಹೆಗಡೆಯನ್ನೇಕೆ ಬಂಧಿಸಿಲ್ಲ?
ಭೂಮಾಪಕರಾಗಿದ್ದ ತೇಜೇಶ್ವರ್ ಅವರನ್ನು ಭೂಮಿ ಸಮೀಕ್ಷೆ ಮಾಡುವ ನೆಪದಲ್ಲಿ ಕೊಲೆಗಾರರು ಕಾರಿನಲ್ಲಿ ಕರೆದೊಯ್ದರು. ತೇಜೇಶ್ವರ್ ಕಾರು ಹತ್ತುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ದೊರೆತಿವೆ. “ಕಾರಿನಲ್ಲಿ ತೆರಳುವಾಗಲೇ ತೇಜೇಶ್ವರ್ ತಲೆಗೆ ಕೊಲೆಗಾರರು ಬಲವಾಗಿ ಹೊಡೆದಿದ್ದಾರೆ. ಗಂಟಲು ಸೀಳಿ, ಹೊಟ್ಟೆ ಇರಿದಿದ್ದಾರೆ” ಎಂದು ಗಡ್ವಾಲ್ ಪೊಲೀಸ್ ಮುಖ್ಯಸ್ಥ ಟಿ. ಶ್ರೀನಿವಾಸ ರಾವ್ ಹೇಳಿದ್ದಾರೆ.
“ಹತ್ಯೆಗೈದ ಬಳಿಕ, ತೇಜೇಶ್ವರ್ ಅವರ ರಕ್ತಸಿಕ್ತ ಬಟ್ಟೆಗಳನ್ನು ಕಳಚಿ, ಹೊಸ ಬಟ್ಟೆಗಳನ್ನು ತೊಡಿಸಿದ್ದಾರೆ. ರಕ್ತಸಿಕ್ತ ಬಟ್ಟೆಗಳನ್ನು ಎಸೆದಿದ್ದಾರೆ. ಕೊಲೆಗಾರರು ತಿರುಮಲ್ ರಾವ್‌ಗೆ ವಿಡಿಯೋ ಕರೆಯ ಮೂಲಕ ಮೃತದೇಹವನ್ನು ತೋರಿಸಿದರು. ಕರ್ನೂಲ್‌ನ ಜಮೀನಿನಲ್ಲಿ ಮೃತದೇಹವನ್ನು ಹೂಳಲು ಆರೋಪಿಗಳು ಯೋಜಿಸಿದ್ದರು. ಆದರೆ, ಅಲ್ಲಿ ಜನರು ಇದ್ದಿದ್ದರಿಂದ, ರಾವ್ ಸೂಚನೆಯಂತೆ ಮೃತದೇಹವನ್ನು ನಾಲೆಗೆ ಬಿಸಾಡಿದರು” ಎಂದು ಪೊಲೀಸರು ತಿಳಿಸಿದ್ದಾರೆ.
“ನಾಲೆಯಲ್ಲಿ ಸಾಕಷ್ಟು ನೀರು ಇರಲಿಲ್ಲ. ತೇಜೇಶ್ವರ್ ಇರುವ ಸ್ಥಳವನ್ನು ಪತ್ತೆಹಚ್ಚಲು ನಾವು ಸೆಲ್ ಫೋನ್ ಸಿಗ್ನಲ್‌ಗಳನ್ನು ಬಳಸಿದೆವು. ನಾವು ಮೃತದೇಹವನ್ನು ಪತ್ತೆಹಚ್ಚುವ ವೇಳೆಗೆ, ಶವವು ಕೊಳೆತು ಹೋಗಿತ್ತು. ಅವರ ಕೈ ಮೇಲೆ ತೆಲುಗಿನಲ್ಲಿ ‘ಅಮ್ಮ’ ಎಂದು ಬರೆದಿದ್ದರ ಆಧಾರದ ಮೇಲೆ ಅವರನ್ನು ಗುರುತಿಸಲಾಯಿತು” ಎಂದು ಅಧಿಕಾರಿ ಶ್ರೀನಿವಾಸ್ ರಾವ್ ಹೇಳಿದ್ದಾರೆ.
ತಪ್ಪಿಸಿಕೊಳ್ಳುವ ವಿಫಲ ಯೋಜನೆ
ತೇಜೇಶ್ವರ್ ಅವರ ಮೃತದೇಹ ಪತ್ತೆಯಾಗುವುದಿಲ್ಲ. ಅವರ ಕಾಣೆಯಾಗಿದ್ದಾರೆ ಎಂದು ಪೊಲೀಸ್ ದೂರು ನೀಡಿ, ಪ್ರಕರಣದ ಹಾದಿ ತಪ್ಪಿಸಬಹುದು ಎಂದು ರಾವ್ ಮತ್ತು ಐಶ್ವರ್ಯ ಯೋಜಿಸಿದ್ದರು. ಕೆಲ ದಿನಗಳ ಬಳಿಕ 20 ಲಕ್ಷ ರೂ. ಸಾಲ ಪಡೆದು ಲಡಾಖ್ ಅಥವಾ ಅಂಡಮಾನ್‌ಗೆ ಪರಾರಿಯಾಗಲು ರಾವ್ ಯೋಜಿಸಿದ್ದರು. ಲಡಾಖ್‌ಗೆ ಪ್ರಯಾಣಿಸಲು ಇಬ್ಬರಿಗೂ ವಿಮಾನ ಟಿಕೆಟ್ ಅನ್ನೂ ಬುಕ್ ಮಾಡಿದ್ದರು.
ತೇಜೇಶ್ವರ್ ಹತ್ಯೆಯಾದ ನಂತರವೂ, ಅನುಮಾನ ಬರದಂತೆ ನೋಡಿಕೊಳ್ಳುವ ಉದ್ದೇಶದಿಂದ ಐಶ್ವರ್ಯ ತನ್ನ ಅತ್ತೆಯ ಮನೆಯಲ್ಲೇ ಇದ್ದರು. ಆದರೂ, ಐಶ್ವರ್ಯ ಮೇಲೆಯೇ ತೇಜೇಶ್ವರ್ ಕುಟುಂಬ ಶಂಕಿಸಿತು. ತೇಜೇಶ್ವರ್ ಕಾಣೆಯಾದ ತಕ್ಷಣ, ಅವರ ಕುಟುಂಬ ಪೊಲೀಸರನ್ನು ಸಂಪರ್ಕಿಸಿ ಐಶ್ವರ್ಯ ಮತ್ತು ರಾವ್ ಮೇಲಿರುವ ತಮ್ಮ ಅನುಮಾನಗಳನ್ನು ಹಂಚಿಕೊಂಡಿತು.
ಪೊಲೀಸರು ತೇಜೇಶ್ವರ್‌ಗಾಗಿ ಹುಡುಕಾಟ ನಡೆಸುವಾಗಲೇ, ಕರ್ನೂಲ್‌ನ ಗ್ರಾಮವೊಂದರಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ಅಲ್ಲಿನ ಪೊಲೀಸರು ಮಾಹಿತಿ ನೀಡಿದರು. ಅಲ್ಲಿಗೆ ಧಾವಿಸಿ ತೆಲಂಗಾಣ ಪೊಲೀಸರು ಅದು ತೇಜೇಶ್ವರ್ ಅವರ ಮೃತದೇಹ ಎಂಬುದನ್ನು ಕಂಡುಕೊಂಡರು. ಆರೋಪಿಗಳನ್ನು ಗುರುತಿಸಿ, ಬಂಧಿಸುವಲ್ಲಿಯೂ ಯಶಸ್ವಿಯಾದರು.