ದೇವನಹಳ್ಳಿಯಲ್ಲಿ ರೈತರು ಮತ್ತು ರಾಜ್ಯದ ಚಳವಳಿ ಮುಂದಾಳುಗಳ ಮೇಲೆ ನಡೆದ, ಪೊಲೀಸ್ ದಬ್ಬಾಳಿಕೆ, ಬಂಧನ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಸಿಪಿಐ(ಎಂ) ಜಿಲ್ಲಾ ಸಮಿತಿ ಪದಾಧಿಕಾರಿಗಳು ಹುಮನಾಬಾದ್ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ʼಕಳೆದ 1,177 ದಿನಗಳಿಂದ ಶಾಂತಿಯುತವಾಗಿ ನಡೆದಿದ್ದ ದೇವನಹಳ್ಳಿ ರೈತರ ಪ್ರತಿಭಟನೆಯನ್ನು ಸರ್ಕಾರವು ವಿಪರೀತ ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಮಹಿಳೆಯರು-ಮಕ್ಕಳನ್ನೂ ಒಳಗೊಂಡು ಎಲ್ಲ ಮುಂದಾಳುಗಳನ್ನೂ ಅನಾಗರಿಕವಾಗಿ ಎಳೆದಾಡಿ ವಶಕ್ಕೆ ಪಡೆದಿದೆʼ ಎಂದು ಅಕ್ಷಮ್ಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ʼರೈತರು, ದಲಿತರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮದ ಭೂಮಿಯನ್ನು ಬಂಡವಾಳಿಗರ ಒಪ್ಪಿಸಲು ನಾಚಿಕೆಡಿನ ಸಂಗತಿ. ರೈತ, ಕಾರ್ಮಿಕ, ದಲಿತ, ಮಹಿಳಾ ಹಾಗೂ ಜನ ವಿರೋಧಿ ಸರ್ಕಾರಗಳ ತುಂಬಾ ದಿನ ಅಧಿಕಾರ ನಡೆಸಲು ಸಾಧ್ಯವಿಲ್ಲ. ಈ ನೆಲ ಇಂತಹ ದರ್ಪ ದೌರ್ಜನ್ಯವನ್ನು ಮೆಟ್ಟಿ ನಿಂತ ಇತಿಹಾಸವನ್ನು ನೋಡಿದೆ. ಸಿದ್ದರಾಮಯ್ಯ ಸರ್ಕಾರ ಮುಂದಿನ ಪರಿಣಾಮ ಎದುರಿಸಲು ಸಿದ್ದವಾಗಬೇಕಿದೆʼ ಎಂದು ಎಚ್ಚರಿಕೆ ನೀಡಿದರು.
ʼಸರ್ಕಾರ ರೈತ ವಿರೋಧಿ ಸಂವಿಧಾನದ ಹಕ್ಕುಗಳ ವಿರೋಧಿ ಭೂಸ್ವಾಧಿನ ನೀತಿಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು. ಹೋರಾಟ ನಿರತ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದು ಖಂಡನೀಯ. ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು. ಭೂಸ್ವಾಧಿನ ಪ್ರಕ್ರಿಯೆಯಿಂದ ಹಿಂಜರಿಯಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ
ಪ್ರತಿಭಟನೆಯಲ್ಲಿ ಪ್ರಮುಖರಾದ ಅಂಬುಬಾಯಿ ಮಾಳಗೆ, ಶ್ರೀದೇವಿ ಚೂಡೆ, ಪ್ರಭು ಸಂತೋಷಕರ್, ರೇಷ್ಮಾ ಹಂಸರಾಜ್, ಶಶಿಕಾಂತ ಡಾಂಗೆ, ಬಸವರಾಜ ಮಾಳಗೆ, ರೇಖಾ ಸಿಂದಬಂದಗಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.